ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಮ್ಮು ಮತ್ತು ಕಾಶ್ಮೀರ ಡಿಡಿಸಿ ಚುನಾವಣೆ ಹೆಮ್ಮೆಯ ಕ್ಷಣ: ಪ್ರಧಾನಿ ನರೇಂದ್ರ ಮೋದಿ

Last Updated 26 ಡಿಸೆಂಬರ್ 2020, 18:32 IST
ಅಕ್ಷರ ಗಾತ್ರ

ನವದೆಹಲಿ: ‘ಜಮ್ಮು ಮತ್ತು ಕಾಶ್ಮೀರದಲ್ಲಿ ಮುಕ್ತ ಮತ್ತು ಪಾರದರ್ಶಕವಾಗಿ ನಡೆದ ಜಿಲ್ಲಾ ಅಭಿವೃದ್ಧಿ ಮಂಡಳಿ (ಡಿಡಿಸಿ) ಚುನಾವಣೆ ಮತ್ತು ಮತದಾರರ ಭಾಗವಹಿಸುವಿಕೆಯು ಭಾರತಕ್ಕೆ ಹೆಮ್ಮೆಯ ಕ್ಷಣ’ ಎಂದು ಪ್ರಧಾನಿ ನರೇಂದ್ರ ಮೋದಿ ಶನಿವಾರ ಪ್ರತಿಪಾದಿಸಿದರು.

ದೇಶದಲ್ಲಿ ಪ್ರಜಾಪ್ರಭುತ್ವವೇ ಇಲ್ಲ ಎಂದು ಆರೋಪಿಸಿದ್ದ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿಗೆ ತಿರುಗೇಟು ನೀಡಿರುವ ಪ್ರಧಾನಿ, ‘ಜಮ್ಮು ಕಾಶ್ಮೀರವು ಕೇಂದ್ರಾಡಳಿತ ಪ್ರದೇಶವಾದ ಬಳಿಕ ಮೂರು ಹಂತದ ಪಂಚಾಯಿತಿ ಚುನಾವಣೆಗಳನ್ನು ಯಶಸ್ವಿಯಾಗಿ ನಡೆಸಲಾಗಿದೆ. ಆದರೆ, ಕಾಂಗ್ರೆಸ್ ಆಡಳಿತವಿರುವ ಪುದುಚೇರಿಯಲ್ಲಿ ಸುಪ್ರೀಂ ಕೋರ್ಟ್ ಆದೇಶವಿದ್ದರೂ ಸ್ಥಳೀಯ ಸಂಸ್ಥೆ ಚುನಾವಣೆ ನಡೆಸಲು ಸಾಧ್ಯವಾಗಿಲ್ಲ’ ಎಂದರು.

‘ನನ್ನ ನೋವನ್ನು ದೇಶದ ಜನರ ಮುಂದಿಡಲು ಬಯಸುತ್ತೇನೆ. ದೆಹಲಿಯಲ್ಲಿ ಕುಳಿತ ಕೆಲವರು ನನ್ನನ್ನು ದಿನನಿತ್ಯ ನಿಂದಿಸಿದರು. ಪದೇಪದೇ ಅವರು ನನಗೆ ಪ್ರಜಾಪ್ರಭುತ್ವದ ಪಾಠ ಹೇಳುತ್ತಿದ್ದರು. ನನ್ನ ಕೆಲಸಗಳಿಗೆ ಜಮ್ಮು ಕಾಶ್ಮೀರದ ಚುನಾವಣಾ ‍ಪ್ರಕ್ರಿಯೆಯೇ ಕನ್ನಡಿ’ ಎಂದರು.

‘2016ರಿಂದ ಪುದುಚೇರಿಯಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್‌ಗೆ ಅಲ್ಲಿ ಚುನಾವಣೆ ನಡೆಸಲು ಸಾಧ್ಯವಾಗಿಲ್ಲ. ಇದು ಕೆಲವು ಪಕ್ಷಗಳ ಬೋಧನೆ ಮತ್ತು ಕ್ರಿಯೆಯ ನಡುವಿನ ಅಂತರವನ್ನು ತೋರಿಸುತ್ತದೆ’ ಎಂದು ಪ್ರತಿಪಕ್ಷದ ವಿರುದ್ಧ ಹರಿಹಾಯ್ದರು. 2006ರ ಬಳಿಕ ಪುದುಚೇರಿಯಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆಗಳು ನಡೆದಿಲ್ಲ.

‘ತೀವ್ರ ಶೀತದ ಹವಾಮಾನ ಮತ್ತು ಕೋವಿಡ್ ಸಾಂಕ್ರಾಮಿಕ ರೋಗದ ನಡುವೆಯೇ ಜಮ್ಮು ಕಾಶ್ಮೀರದ ಜನರು ಚುನಾವಣೆಯಲ್ಲಿ ಉತ್ಸಾಹದಿಂದ ಭಾಗವಹಿಸದ್ದಾರೆ. ವಿಜೇತರು ಜನಸಮುದಾಯದ ನಡುವಿನಿಂದ ಆರಿಸಿ ಬಂದಿದ್ದಾರೆ. ಇನ್ನೂ ಕೆಲವರು ತಮ್ಮ ಕೆಲಸದ ಮೂಲಕ ಗೆದ್ದಿದ್ದಾರೆಯೇ ವಿನಾ ಹೆಸರಿನಿಂದಲ್ಲ’ ಎಂದಿರುವ ಪ್ರಧಾನಿ, ವಂಶಾಡಳಿತವನ್ನು ಪರೋಕ್ಷವಾಗಿ ಟೀಕಿಸಿದರು. ‘ಇದು ಹೊಸ ಯುಗದ ಹೊಸ ನಾಯಕತ್ವದ ಪ್ರಾರಂಭ’ ಎಂದರು.

ಕಾಶ್ಮೀರದಲ್ಲಿ ಆಯುಷ್ಮಾನ್ ಭಾರತ್
ಜಮ್ಮು ಮತ್ತು ಕಾಶ್ಮೀರದ ಎಲ್ಲ ಜನರಿಗೂ ಆಯುಷ್ಮಾನ್ ಭಾರತ್ ಆರೋಗ್ಯ ಸೇವೆ ಯೋಜನೆಯನ್ನು ವಿಸ್ತರಿಸುವ ನಿರ್ಧಾರವನ್ನು ಪ್ರಧಾನಿ ಶನಿವಾರ ಪ್ರಕಟಿಸಿದರು.

‘ಕೇಂದ್ರಾಡಳಿತ ಪ್ರದೇಶದ ಪ್ರತಿಯೊಬ್ಬರೂ ₹5 ಲಕ್ಷ ಮೊತ್ತದ ಆರೋಗ್ಯ ವಿಮೆಗೆ ಅರ್ಹರಾಗಿದ್ದಾರೆ. ಇದು ಈ ಭಾಗಕ್ಕೆ ಐತಿಹಾಸಿ ದಿನ’ ಎಂದು ಪ್ರಧಾನಿ ಹೇಳಿದರು.

ಜಮ್ಮು ಮತ್ತು ಕಾಶ್ಮೀರದ 6 ಲಕ್ಷ ಕುಟುಂಬಗಳು ಈ ಯೋಜನೆಯ ಫಲಾನುಭವಿಗಳಾಗಲಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆಯುಷ್ಮಾನ್ ಭಾರತ್ ಯೋಜನೆಗೆ ಸೇರಿದ ವ್ಯಕ್ತಿಯು ಪಶ್ಚಿಮ ಬಂಗಾಳವನ್ನು ಹೊರತುಪಡಿಸಿ ದೇಶದ ಎಲ್ಲಿ ಬೇಕಾದರೂ
ಆರೋಗ್ಯ ಸೇವೆ ಪಡೆಯಬಹುದು. ಬಂಗಾಳ ರಾಜ್ಯವು ಯೋಜನೆಗೆ ಸೇರಿಕೊಂಡಿಲ್ಲ.

‘ಕೋವಿಡ್ ಅವಧಿಯಲ್ಲಿ ಕಣಿವೆ ರಾಜ್ಯದಲ್ಲಿ 18 ಲಕ್ಷ ಎಲ್‌ಪಿಜಿ ಸಿಲಿಂಡರ್ ಭರ್ತಿ ಮಾಡಲಾಗಿದೆ. ಸ್ವಚ್ಛ ಭಾರತ್ ಅಭಿಯಾನದಡಿ 10 ಲಕ್ಷಕ್ಕೂ ಹೆಚ್ಚು ಶೌಚಾಲಯಗಳನ್ನು ನಿರ್ಮಿಸಲಾಗಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಐಐಟಿ ಮತ್ತು ಐಐಎಂ ಸ್ಥಾಪನೆಯಿಂದ ಗುಣಮಟ್ಟದ ಉನ್ನತ ಶಿಕ್ಷಣ ಸಿಗಲಿದೆ. ಎರಡು ಏಮ್ಸ್ ಮತ್ತು ಎರಡು ಕ್ಯಾನ್ಸರ್ ಸಂಸ್ಥೆಗಳನ್ನು ಸಹ ನಿರ್ಮಿಸಲಾಗುತ್ತಿದೆ’ ಎಂದು ಪ್ರಧಾನಿ ಹೇಳಿದರು.

**

ಜಮ್ಮು ಮತ್ತು ಕಾಶ್ಮೀರದ ಜಿಲ್ಲಾ ಅಭಿವೃದ್ಧಿ ಮಂಡಳಿ ಚುನಾವಣೆಗಳು ಸೂಕ್ಷ್ಮ ಪ್ರದೇಶದಲ್ಲಿ ಹೊಸ ಅಧ್ಯಾಯವನ್ನು ಬರೆದಿದ್ದು, ಪ್ರಜಾಪ್ರಭುತ್ವವನ್ನು ಬಲಪಡಿಸಿವೆ.
-ನರೇಂದ್ರ ಮೋದಿ, ಪ್ರಧಾನಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT