ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೆಹಲಿಯಲ್ಲಿ ದಾಳಿಗೆ ಸಂಚು: ಜಮ್ಮುವಿನಲ್ಲಿ ಕಚ್ಚಾಬಾಂಬ್, ಶಸ್ತ್ರಾಸ್ತ್ರ ವಶಕ್ಕೆ

Last Updated 14 ಫೆಬ್ರುವರಿ 2021, 20:59 IST
ಅಕ್ಷರ ಗಾತ್ರ

ಜಮ್ಮು: ಪಾಕಿಸ್ತಾನದ ಜೈ‍ಷ್‌ ಎ ಮೊಹಮ್ಮದ್ (ಜೆಇಎಂ) ಉಗ್ರ ಸಂಘಟನೆಯು, ತನ್ನ ಭಾರತೀಯ ಘಟಕಗಳ ಮೂಲಕ ದೆಹಲಿಯಲ್ಲಿ ದಾಳಿ ನಡೆಸಲು ಸಂಚು ನಡೆಸಿತ್ತು. ಇದರ ನೇತೃತ್ವ ವಹಿಸಿದ್ದ ಇಬ್ಬರು ಉಗ್ರರನ್ನು ಬಂಧಿಸಿದ್ದು, ದಾಳಿಯ ಸಂಚನ್ನು ವಿಫಲಗೊಳಿಸಿದ್ದೇವೆ ಎಂದು ಜಮ್ಮು-ಕಾಶ್ಮೀರ ಪೊಲೀಸ್ ಮಹಾ ನಿರ್ದೇಶಕ ದಿಲ್ಬಾಗ್ ಸಿಂಗ್ ಮಾಹಿತಿ ನೀಡಿದ್ದಾರೆ.

ಜಮ್ಮು ಕೇಂದ್ರ ಬಸ್‌ ನಿಲ್ದಾಣದಲ್ಲಿ 7 ಕೆ.ಜಿ. ಕಚ್ಚಾಬಾಂಬ್‌ ಅನ್ನೂ ಭಾನುವಾರ ವಶಕ್ಕೆ ಪಡೆಯಲಾಗಿದೆ. ನಡೆಯಬಹುದಾಗಿದ್ದ ಭಾರಿ ಅನಾಹುತವನ್ನು ತಪ್ಪಿಸಿದ್ದೇವೆ ಎಂದು ಅವರು ಮಾಧ್ಯಮಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ.

ಜೆಇಎಂನ ಭಾರತೀಯ ಘಟಕಗಳಾಗಿ ಲಷ್ಕರ್ ಎ ಮುಸ್ತಫಾ (ಎಲ್‌ಇಎಂ) ಮತ್ತು ದಿ ರೆಸಿಸ್ಟೆನ್ಸ್ ಫ್ರಂಟ್ (ಟಿಆರ್‌ಎಫ್‌) ಕಾರ್ಯನಿರ್ವಹಿಸುತ್ತಿವೆ. ಈ ಎರಡೂ ಉಗ್ರ ಸಂಘಟನೆಗಳ ಮುಖ್ಯಸ್ಥರಾದ ಹಿದಾಯತ್ ಉಲ್ಲಾ ಮಲಿಕ್ ಮತ್ತು ಝಹೂರ್ ಅಹ್ಮದ್ ರಾಥೆರ್ ಎಂಬ ಉಗ್ರರನ್ನು ಕಳೆದ ಒಂದು ವಾರದಲ್ಲಿ ಬಂಧಿಸಿದ್ದೇವೆ.ಈ ಕಾರ್ಯಾಚರಣೆಯ ಭಾಗವಾಗಿ ಲಭ್ಯವಾದ ನಿಖರ ಮಾಹಿತಿ ಮೇರೆಗೆ ಜಮ್ಮು ಬಸ್‌ ನಿಲ್ದಾಣದಲ್ಲಿ ಶೋಧಕಾರ್ಯ ನಡೆಸಲಾಯಿತು. ಆಗ 7 ಕೆ.ಜಿ.ಯಷ್ಟು ಕಚ್ಚಾಬಾಂಬ್ ಮತ್ತು ಹಲವು ಶಸ್ತ್ರಾಸ್ತ್ರ ಪತ್ತೆಯಾದವು.ಈ ಸಂಬಂಧ ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ವಿದ್ಯಾರ್ಥಿಯೊಬ್ಬನನ್ನು ವಶಕ್ಕೆ ಪಡೆಯಲಾಗಿದೆ.ಭಾರತ ಮತ್ತು ಪಾಕಿಸ್ತಾನದ ನಡುವಣ ಅಂತರರಾಷ್ಟ್ರೀಯ ಗಡಿಯಲ್ಲಿನ ರಹಸ್ಯ ಸುರಂಗಗಳ ಮೂಲಕ ಪಾಕಿಸ್ತಾನದಿಂದ ಶಸ್ತ್ರಾಸ್ತ್ರ ಕಳ್ಳಸಾಗಣೆ ಮಾಡಿದ್ದಾರೆ. ಅಲ್ಲದೆ, ಡ್ರೋನ್‌ಗಳ ಮೂಲಕವೂ ಶಸ್ತ್ರಾಸ್ತ್ರಗಳನ್ನು ಭಾರತಕ್ಕೆ ತರಿಸಿಕೊಂಡಿದ್ದಾರೆ. ಜಮ್ಮುವಿನಿಂದ ಅವನ್ನು ವಿದ್ಯಾರ್ಥಿಗಳ ಮೂಲಕ ಕಾಶ್ಮೀರಕ್ಕೆ ಸಾಗಿಸಿದ್ದಾರೆ ಎಂದು ದಿಲ್ಬಾಗ್ ಸಿಂಗ್ ವಿವರಿಸಿದ್ದಾರೆ.

ಧೊಬಾಲ್ ಕಚೇರಿಯ ವಿಡಿಯೊ
ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಧೊಬಾಲ್ ಅವರ ದೆಹಲಿಯಲ್ಲಿನ ಕಚೇರಿಯನ್ನು ಮಲಿಕ್‌ ವಿಡಿಯೊದಲ್ಲಿ ಸೆರೆ ಹಿಡಿದಿದ್ದ. ಅವರ ದಾಳಿಯ ಗುರಿಗಳಲ್ಲಿ ಈ ಕಚೇರಿ ಸಹ ಸೇರಿತ್ತು. ಈ ವಿಡಿಯೊವನ್ನು ಆತ ಜೆಇಎಂನ ಕಮಾಂಡರ್ ಆಶಿಶ್ ನೆಂಗ್ರೂಗೆ ಕಳುಹಿಸಿದ್ದ. ಆಶಿಶ್‌ನ ಆದೇಶದ ಮೇರೆಗೇ ಈ ಎಲ್ಲಾ ಕೆಲಸಗಳನ್ನು ಮಾಡಿದ್ದಾಗಿ ಬಂಧಿತರು ಒಪ್ಪಿಕೊಂಡಿದ್ದಾರೆ ಎಂದು ದಿಲ್ಬಾಗ್ ಸಿಂಗ್ ಹೇಳಿದ್ದಾರೆ. 2002ರಲ್ಲಿ ಪಾಕಿಸ್ತಾನಕ್ಕೆ ಹೋಗಿದ್ದ ಮಲಿಕ್, ಶಸ್ತ್ರಾಸ್ತ್ರ ಬಳಕೆಯ ತರಬೇತಿ ಪಡೆದಿದ್ದ. ನಂತರ ಭಾರತಕ್ಕೆ ಹಿಂತಿರುಗಿದ್ದ. 2006ರಲ್ಲಿ ಪೊಲೀಸರಿಗೆ ಶರಣಾಗಿದ್ದ. 2019ರಲ್ಲಿ ಭಯೋತ್ಪಾದಕ ಚಟುವಟಿಕೆಗಳನ್ನು ಆರಂಭಿಸಿದ್ದ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT