ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಶ್ಮೀರ: ಕಾಲೇಜು ವಿದ್ಯಾರ್ಥಿಗಳಿಗೆ ಸೂರ್ಯ ನಮಸ್ಕಾರ– ಸರ್ಕಾರದ ಆದೇಶಕ್ಕೆ ವಿರೋಧ

Last Updated 14 ಜನವರಿ 2022, 13:07 IST
ಅಕ್ಷರ ಗಾತ್ರ

ಶ್ರೀನಗರ: ಮಕರ ಸಂಕ್ರಾಂತಿಯ ‘ಸೂರ್ಯ ನಮಸ್ಕಾರ’ ವರ್ಚುವಲ್‌ ಕಾರ್ಯಕ್ರಮದಲ್ಲಿ ಕಾಲೇಜು ವಿದ್ಯಾರ್ಥಿಗಳು ಕಡ್ಡಾಯವಾಗಿ ಭಾಗವಹಿಸಬೇಕೆಂದು ಜಮ್ಮು ಮತ್ತು ಕಾಶ್ಮೀರದ ಉನ್ನತ ಶಿಕ್ಷಣ ಇಲಾಖೆಯ ನಿರ್ದೇಶಕರು ಹೊರಡಿಸಿರುವ ಆದೇಶಕ್ಕೆ ಇಲ್ಲಿನ ಬಹುತೇಕ ರಾಜಕೀಯ ನಾಯಕರು ವಿರೋಧ ವ್ಯಕ್ತಪಡಿಸಿದ್ದಾರೆ.

'ಮಕರ ಸಂಕ್ರಾಂತಿಯು ಒಂದುಹಬ್ಬವಾಗಿದ್ದು, ಅದನ್ನು ಆಚರಿಸಬೇಕು ಅಥವಾ ಬೇಡವೇ ಎಂಬುದು ವೈಯಕ್ತಿಕ ಆಯ್ಕೆ. ಆದರೆ ಮಕರ ಸಂಕ್ರಾಂತಿಯಂದು ಯೋಗ ಸೇರಿದಂತೆ ಇತರೆ ಆಚರಣೆಗಳನ್ನು ಮುಸ್ಲಿಂ ವಿದ್ಯಾರ್ಥಿಗಳಿಗೆ ಯಾಕೆ ಒತ್ತಾಯಪಡಿಸಬೇಕು? ಮುಸ್ಲಿಮೇತರ ವಿದ್ಯಾರ್ಥಿಗಳಿಗೆ ಈದ್ ಆಚರಿಸುವಂತೆ ಇದೇ ರೀತಿಯ ಆದೇಶ ಮಾಡಿದರೆ ಬಿಜೆಪಿಯವರು ಖುಷಿಯಾಗಿರುತ್ತಾರೆಯೇ’ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ನ್ಯಾಷನಲ್ ಕಾನ್ಫರೆನ್ಸ್ ನಾಯಕ ಒಮರ್ ಅಬ್ದುಲ್ಲಾ ಟ್ವಿಟ್ಟರ್ ನಲ್ಲಿ ಪ್ರಶ್ನಿಸಿದ್ದಾರೆ.

ಈ ಕುರಿತು ಟ್ವೀಟ್‌ ಮಾಡಿರುವ ಪಿಡಿಪಿ ಮುಖ್ಯಸ್ಥೆ ಮೆಹಬೂಬ ಮುಫ್ತಿ, ‘ಸೂರ್ಯ ನಮಸ್ಕಾರವು ಧಾರ್ಮಿಕ ಸಂಬಂಧ ಹೊಂದಿರುವುದರಿಂದ ಮುಸ್ಲಿಮರಿಗೆ ಇರಿಸು ಮುರಿಸು ಉಂಟು ಮಾಡುತ್ತದೆ. ಸರ್ಕಾರದ ಕುಚೋದ್ಯ ಹಾಗೂ ದುಸ್ಸಾಹಸವು ಕಾಶ್ಮೀರದ ಜನರನ್ನು ಸಾಮೂಹಿಕವಾಗಿ ಅಪಮಾನಗೊಳಿಸುವ ಗುರಿಯನ್ನು ಹೊಂದಿದೆ. ಶಿಕ್ಷಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಬಲವಂತವಾಗಿ ಸೂರ್ಯ ನಮಸ್ಕಾರವನ್ನು ಕಡ್ಡಾಯಗೊಳಿಸಿರುವುದು ಅವರ (ಬಿಜೆಪಿ) ಕೋಮು ಮನಸ್ಥಿತಿಯ ಒಳನೋಟವನ್ನು ತೋರಿಸುತ್ತದೆ’ ಎಂದು ಟೀಕಿಸಿದ್ದಾರೆ.

‘ಕಾಲೇಜಿಗಳ ಮುಖ್ಯಸ್ಥರು, ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಕಡ್ಡಾಯವಾಗಿ ಭಾಗವಹಿಸುವಂತೆ ಆದೇಶಿಸಲಾಗಿದ್ದು, ಈ ಆದೇಶವು ಮುಸ್ಲಿಂ ಧಾರ್ಮಿಕ ವಿಚಾರಗಳಿಗೆ ಹಸ್ತಕ್ಷೇಪ ಮಾಡುತ್ತಿರುವ ಸ್ಪಷ್ಟ ಆಧಾರವಿದು. ಇದನ್ನು ವಾಪಸ್ ಪಡೆಯಬೇಕು’ ಎಂದು ನ್ಯಾಷನಲ್‌ ಕಾನ್ಫರೆನ್ಸ್‌ ಪಕ್ಷದ ವಕ್ತಾರ ಇಮ್ರಾನ್‌ ನಬಿ ದಾರ್‌ ಟ್ವೀಟ್‌ನಲ್ಲಿ ಒತ್ತಾಯಿಸಿದ್ದಾರೆ.

ಪಿಡಿಪಿಯ ಮಾಜಿ ಸಚಿವ ನಯೀಂ ಅಖ್ತಾರ್‌, ‘ನನ್ನ ಮಕ್ಕಳನ್ನು ಸೂರ್ಯ ನಮಸ್ಕಾರದಂತಹ ಚಟುವಟಿಕೆಗಳಲ್ಲಿ ಭಾಗವಹಿಸಲು ಅವಕಾಶ ನೀಡುವುದಿಲ್ಲ. ಬೇರೆಯವರನ್ನು ನನ್ನ ರೀತಿಯೇ ಮಾಡಿ ಎಂದು ಒತ್ತಾಯ ಪಡಿಸುವುದಿಲ್ಲ.ಪೂಜಿಸಲು ಅರ್ಹನಿರುವ ದೇವರು ಒಬ್ಬನೇ. ಅವರವರ ನಂಬಿಕೆ ಅವರಿಗಿರುತ್ತದೆ. ಮತ್ತೊಬ್ಬರಿಗೆ ಹೇರಬಾರದು’ ಎಂದು ಹೇಳಿದ್ದಾರೆ.

‘ಒಬ್ಬ ವ್ಯಕ್ತಿಯು ತನ್ನ ನಂಬಿಕೆ ಮತ್ತು ಧಾರ್ಮಿಕ ಸ್ವಾತಂತ್ರ್ಯಕ್ಕೆ ವಿರುದ್ಧವಾದ ಆದೇಶಕ್ಕೆ ಸಹಿ ಮಾಡುವುದು ಶೋಷಣೆಗಿಂತ ಹೆಚ್ಚು ಕಳವಳಕಾರಿ ಬೆಳವಣಿಗೆ. ಕಾಶ್ಮೀರದಲ್ಲಿನ ನಾಮಕಾವಸ್ತೆಯ ನಾಯಕತ್ವವೂ ಸದ್ಯ ಭಾಗಿದೆ. ಹೀಗಾದರೆ ಸಮಾಜದ ಗತಿಯೇನು? ಆದೇಶದ ಪ್ರಕಾರ ಭಾಗಿಯಾದರೆ ಈ ಪರಿಸ್ಥಿತಿಗೆ ನಾವೇ ಹೊಣೆಗಾರರೇ ಹೊರತು ಕೇಂದ್ರ ಸರ್ಕಾರವಲ್ಲ’ ಎಂದು ಶಿಯಾ ಪಂಗಡದ ಪ್ರಭಾವಿ ನಾಯಕ ರುಹುಲ್ಲಾ ಮೆಹ್ದಿ ಟ್ವೀಟ್‌ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT