ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2017ರ ಬಿಜೆಪಿ ಮರು ಮೈತ್ರಿಯಿಂದ ಜೆಡಿಯುಗೆ ಹಾನಿ: ನಿತೀಶ್‌

Last Updated 6 ಫೆಬ್ರುವರಿ 2023, 15:42 IST
ಅಕ್ಷರ ಗಾತ್ರ

ಬಂಕಾ (ಬಿಹಾರ್): ಅರ್ಧ ದಶಕದ ಹಿಂದೆ ಬಿಜೆಪಿಯೊಂದಿಗೆ ಜೆಡಿಯು ಮರುಮೈತ್ರಿ ಮಾಡಿಕೊಂಡಿದ್ದರಿಂದಲೇ ಪಕ್ಷಕ್ಕೆ ಹಾನಿಯಾಯಿತು ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್ ಸೋಮವಾರ ಹೇಳಿದ್ದಾರೆ.

ಬಂಕಾ ಜಿಲ್ಲೆಯಲ್ಲಿ ನಡೆದ ‘ಸಮಾಧಾನ ಯಾತ್ರೆ’ಯಲ್ಲಿ ಅತೃಪ್ತ ಸಂಸದೀಯ ಮಂಡಳಿ ಮುಖ್ಯಸ್ಥ ಉಪೇಂದ್ರ ಕುಶ್ವಾಹ ಅವರು ಪಕ್ಷದ ಕಾರ್ಯಕರ್ತರಿಗೆ ಬರೆದ ಬಹಿರಂಗ ಪತ್ರದ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ‘ಸಾರ್ವಜನಿಕವಾಗಿರುವ ಕುಂದುಕೊರತೆಗಿಂತ ಕುಶ್ವಾಹ ಅವರ ವಿಷಯವೇ ಹೆಚ್ಚು ಪ್ರಸಾರವಾಗುತ್ತಿದೆ ಎಂದರೆ, ಕುಶ್ವಾಹ ಅವರು ಬೇರೆ ಯೋಜನೆಯನ್ನು ಹೊಂದಿರಬಹುದು. ಈ ವಿಷಯ ಎಷ್ಟು ಪ್ರಚಾರ ಪಡೆಯುತ್ತಿದೆ ಎಂದರೆ, ಈ ಹಿಂದೆ ಯಾವಾಗಲೂ ನನ್ನ ಪಕ್ಷಕ್ಕೆ ಇಷ್ಟು ಪ್ರಚಾರ ಸಿಕ್ಕಿರಲಿಲ್ಲ’ ಎಂದರು.

ಪಕ್ಷದ ಬೆಳವಣಿಗೆ ಕುರಿತು ಟೀಕಿಸಿದ್ದ ಕುಶ್ವಾಹ ಅವರಿಗೆ ವ್ಯಂಗವಾಡಿದ ನಿತೀಶ್‌, ‘ಸದಸ್ಯತ್ವ ಅಭಿಯಾನವು ಪಕ್ಷದ ಶ್ರೇಯಸ್ಸನ್ನು ಹಿಂದೆಂದಿಗಿಂತಲೂ ಹೆಚ್ಚಿಸಿದೆ. ಕುಶ್ವಾಹ ಅವರ ಹೇಳಿಕೆಗಳಿಗೆ ಯಾರೂ ಪ್ರತಿಕ್ರಿಯಿಸುವ ಅವಶ್ಯಕತೆ ಇಲ್ಲ ಎಂದು ಕಾರ್ಯಕರ್ತರಿಗೆ ತಿಳಿಸಿದ್ದೇನೆ’ ಎಂದು ಹೇಳಿದರು.

‘2017ರಲ್ಲಿ ಬಿಜೆಪಿ ಜತೆ ಮರು ಮೈತ್ರಿ ಮಾಡಿಕೊಂಡ ನಂತರ ನಮ್ಮ ಸ್ಥಾನ ಕಳೆದುಕೊಂಡೆವು. 2019ರ ಚುನಾವಣೆಯಲ್ಲಿ ದಿವಂಗತ ರಾಮ್‌ ವಿಲಾಸ್ ಪಾಶ್ವಾನ್ ಅವರ ಎಲ್‌ಜೆಪಿ ಹಾಗೂ ಜೆಡಿಯು ಸಹಕಾರದೊಂದಿಗೆ ಎನ್‌ಡಿಎ ಬಹುಮತದೊಂದಿಗೆ ಜಯ ಸಾಧಿಸಿತು. ಆಗ ಕೇಂದ್ರ ಕ್ಯಾಬಿನೆಟ್‌ನಲ್ಲಿ ನಾವು 2–3 ಸ್ಥಾನಗಳನ್ನು ಕೇಳಿದೆವು. ಆದರೆ ಅವರು ಒಂದಕ್ಕಿಂತ ಹೆಚ್ಚು ಸ್ಥಾನ ನೀಡಲು ನಿರಾಕರಿಸಿದರು. ನಂತರ 2020ರ ಚುನಾವಣೆಯಲ್ಲೂ ಅವರಿಗೆ ಬೆಂಬಲ ನೀಡಿದೆವು. ಆದರೆ ಅವರು ಜೆಡಿಯು ಅಭ್ಯರ್ಥಿಗಳ ವಿರುದ್ಧ ಅಪಪ್ರಚಾರ ಮಾಡಿದರು. ಮುಂಬರುವ ಚುನಾವಣೆಯಲ್ಲಿ ಬಿಜೆಪಿ ಎಲ್ಲಿ ನಿಂತಿರುತ್ತದೆ ಎಂದು ಅವರೇ ನೋಡಿಕೊಳ್ಳಲಿ’ ಎಂದರು.

‘ಜೆಡಿಯು ಹಾಗೂ ಮಹಾಘಟಬಂಧನ್‌ ರಚನೆಯಾದಾಗ ಕುಶ್ವಾಹ ನಮ್ಮೊಂದಿಗೆ ಇದ್ದರು. ಆದರೆ ಕಳೆದ ಒಂದೆರಡು ತಿಂಗಳಿಂದ ಏನು ತಪ್ಪಾಗಿದೆ ಎಂದು ಆಶ್ಚರ್ಯವಾಗುತ್ತಿದೆ. ಅವರ ನಿರೀಕ್ಷೆಗಳೇನಾದರು ಇದ್ದರೆ ಅದರ ಕುರಿತು ಮಾತನಾಡಲು ನಾನು ಸಿದ್ಧನಿದ್ದೇನೆ. ಆದರೆ ಅವರೇ ನಿರಾಸಕ್ತಿ ತೋರುತ್ತಿದ್ದಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT