ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿತೀಶ್‌ಗೆ ಮತ್ತೊಂದು ಆಘಾತ: ಜೆಡಿಯು ತೊರೆದು ಬಿಜೆಪಿ ಸೇರಿದ ಆರು ಶಾಸಕರು

Last Updated 25 ಡಿಸೆಂಬರ್ 2020, 17:18 IST
ಅಕ್ಷರ ಗಾತ್ರ

ಪಟ್ನಾ: ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸಭೆ ನಿಗದಿಯಾಗಿರುವ ಮುನ್ನಾ ದಿನವೇ ಜೆಡಿಯು ಅಧ್ಯಕ್ಷ, ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ಗೆ ಬಿಜೆಪಿ ಆಘಾತ ನೀಡಿದೆ. ಅರುಣಾಚಲ ಪ್ರದೇಶದಲ್ಲಿ ಜೆಡಿಯುನ ಆರು ಶಾಸಕರು ಪಕ್ಷ ತೊರೆದು ಬಿಜೆಪಿ ಸೇರ್ಪಡೆಯಾಗಿದ್ದಾರೆ.

ಇವರಲ್ಲಿ ಬಹುತೇಕರು ಪಟ್ನಾದಲ್ಲಿ ಡಿ.26 ಮತ್ತು 27ರಂದು ನಿಗದಿಯಾಗಿದ್ದ ಜೆಡಿಯು ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಭಾಗವಹಿಸುವುದು ನಿಗದಿಯಾಗಿತ್ತು. ಆದರೆ, ಮೈತ್ರಿ ಪಕ್ಷವೇ ಆದ ಬಿಜೆಪಿ ನಡೆಸಿದ ಪಕ್ಷಾಂತರ ಆಘಾತದಿಂದ ನಿತೀಶ್‌ ಮೌನಕ್ಕೊಳಗಾಗಿದ್ದಾರೆ. ಈ ಕುರಿತು ಶನಿವಾರ ನಡೆಯುವ ಪಕ್ಷದ ಸಭೆಯಲ್ಲಿ ಪ್ರತಿಕ್ರಿಯೆ ನೀಡುವುದಾಗಿ ಅವರು ತಿಳಿಸಿದ್ದು, ‘ಬಿಜೆಪಿಯ ಈ ಕ್ರಮವು ಮೈತ್ರಿಧರ್ಮದ ವಿರುದ್ಧವಾಗಿದೆ’ ಎಂದು ಅವರ ಆಪ್ತರು ತಿಳಿಸಿದ್ದಾರೆ.

ಅರುಣಾಚಲ ಪ್ರದೇಶದಲ್ಲಿನ 60 ವಿಧಾನಸಭಾ ಸ್ಥಾನಗಳ ಪೈಕಿ 15ರಲ್ಲಿ ಜೆಡಿಯು ಸ್ಪರ್ಧಿಸಿತ್ತು. ಚುನಾವಣೆಯಲ್ಲಿ 41 ಸ್ಥಾನಗಳನ್ನು ಗೆದ್ದ ಬಿಜೆಪಿ ಆಡಳಿತದ ಚುಕ್ಕಾಣಿ ಹಿಡಿದರೆ, ಏಳು ಸ್ಥಾನಗಳನ್ನು ಗೆದ್ದ ಜೆಡಿಯು ವಿರೋಧ ಪಕ್ಷವಾಗಿ ಕಾರ್ಯನಿರ್ವಹಿಸುತ್ತಿತ್ತು. ಆದರೆ, ಶುಕ್ರವಾರ ದೋರ್ಜಿ ಖರ್ಮ, ಜಿಕ್ಕೆ ಟಾಕೊ, ಹಯೀಂಗ್‌ ಮಂಗ್ಫಿ, ಡೊಂಗ್ರು ಸಿಯಾಂಗ್ಜು, ತಲೇಮ್‌ ಟಬೊ ಹಾಗೂ ಕಂಗಾಂಗ್‌ ಟಕು ಅವರು ಜೆಡಿಯು ತೊರೆದು ಬಿಜೆಪಿ ಸೇರ್ಪಡೆಯಾಗಿದ್ದಾರೆ.

ಪ್ರಸ್ತುತ ಅರುಣಾಚಲ ಪ್ರದೇಶದಲ್ಲಿ ಬಿಜೆಪಿ ಸ್ಥಾನ 48ಕ್ಕೆ ಏರಿಕೆಯಾಗಿದ್ದು, ಇದರಲ್ಲಿ ಒಬ್ಬರು ಶಾಸಕರು ಪೀಪಲ್ಸ್‌ ಪಾರ್ಟಿ ಆಫ್‌ ಅರುಣಾಚಲ್‌(ಪಿಪಿಎ)ನವರಾಗಿದ್ದಾರೆ.

‘ಬಿಜೆಪಿ ಗೆದ್ದಿದ್ದ ಸ್ಥಾನಗಳೇ ಸರ್ಕಾರ ನಡೆಸುವುದಕ್ಕೆ ಸಾಕಿತ್ತು. ಇತರೆ ಪಕ್ಷದಿಂದ ಶಾಸಕರನ್ನು ಸೆಳೆಯುವ ಅಗತ್ಯತೆ ಬಿಜೆಪಿಗೆ ಇರಲಿಲ್ಲ. ಇದು ಮೈತ್ರಿಧರ್ಮದ ವಿರುದ್ಧವಾಗಿದೆ’ ಎಂದು ಜೆಡಿಯು ಪ್ರಧಾನ ಕಾರ್ಯದರ್ಶಿ ಕೆ.ಸಿ.ತ್ಯಾಗಿ ಹೇಳಿದರು. ‘ಈ ಬೆಳವಣೆಗೆಯು ಬಿಹಾರದಲ್ಲಿ ಬಿಜೆಪಿ ಹಾಗೂ ಜೆಡಿಯು ಮೈತ್ರಿಗೆ ಯಾವುದೇ ಪರಿಣಾಮ ಬೀರುವುದಿಲ್ಲ’ ಎಂದೂ ಅವರು ಇದೇ ವೇಳೆ ಸ್ಪಷ್ಟನೆ ನೀಡಿದರು.

ನಿತೀಶ್‌ ಪ್ರಾಬಲ್ಯ ಮೊಟಕು
ನಿತೀಶ್‌ ಅವರ ಪ್ರಾಬಲ್ಯವನ್ನು ಮೊಟಕುಗೊಳಿಸುವ ಬಿಜೆಪಿಯ ನಾಲ್ಕನೇ ಪ್ರಯತ್ನ ಇದಾಗಿದೆ. ಈ ಹಿಂದೆ ಬಿಹಾರದಲ್ಲಿ 16 ಲೋಕಸಭೆ ಸ್ಥಾನಗಳಲ್ಲಿ ಜೆಡಿಯು ಗೆದ್ದಿದ್ದರೂ, ಕೇಂದ್ರ ಸಚಿವ ಸಂಪುಟದಲ್ಲಿ ಬಿಹಾರದ ಒಬ್ಬ ಸಂಸದರಿಗಷ್ಟೇ ಸಚಿವ ಸ್ಥಾನ ನೀಡಲಾಗಿತ್ತು. ಬಿಹಾರದಲ್ಲಿ ಇತ್ತೀಚೆಗೆ ನಡೆದ ವಿಧಾನಸಭೆ ಚುನಾವಣೆ ವೇಳೆ, ಎಲ್‌ಜೆಪಿಯು ಎನ್‌ಡಿಎ ತೊರೆದು ಜೆಡಿಯು ಅಭ್ಯರ್ಥಿಗಳು ಇರುವ ಎಲ್ಲ ಕ್ಷೇತ್ರಗಳಲ್ಲಿ ಸ್ಪರ್ಧಿಸಿತ್ತು. ಈ ಕಾರಣದಿಂದಾಗಿ 243 ಸದಸ್ಯ ಬಲವಿರುವ ವಿಧಾನಸಭೆಯಲ್ಲಿ ಕೇವಲ 43 ಸ್ಥಾನಗಳನ್ನು ಗೆದ್ದು, ಜೆಡಿಯು ಮೂರನೇ ಸ್ಥಾನಕ್ಕೆ ಕುಸಿದಿತ್ತು.

ಫಲಿತಾಂಶದ ನಂತರ ಪ್ರಾಬಲ್ಯ ಕಳೆದುಕೊಂಡ ನಿತೀಶ್‌ ಅವರಿಗೆ ಉಪಮುಖ್ಯಮಂತ್ರಿಯಾಗಿ ಸುಶೀಲ್‌ ಕುಮಾರ್ ಮೋದಿ ಅವರನ್ನು ಆಯ್ಕೆ ಮಾಡಿಕೊಳ್ಳುವುದಕ್ಕೂ ಬಿಜೆಪಿ ಬಿಡಲಿಲ್ಲ. ಇದೀಗ ಅರುಣಾಚಲ ಪ್ರದೇಶದಲ್ಲಿ ನಡೆದ ಘಟನೆಯು, ಬಿಹಾರದಲ್ಲಿ ಎರಡೂ ಮೈತ್ರಿಪಕ್ಷಗಳ ನಡುವೆ ಮತ್ತಷ್ಟು ಜಗ್ಗಾಟಕ್ಕೆ ಕಾರಣವಾಗುವ ಸಾಧ್ಯತೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT