ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾರ್ಖಂಡ್‌ ರೋಪ್‌ವೇ ದುರಂತ: ಹೆಲಿಕಾಪ್ಟರ್‌ನಿಂದ ಉರುಳಿದ ಮತ್ತೊಬ್ಬ ವ್ಯಕ್ತಿ

Last Updated 12 ಏಪ್ರಿಲ್ 2022, 11:24 IST
ಅಕ್ಷರ ಗಾತ್ರ

ದೇವಘರ್‌: ಜಾರ್ಖಂಡ್‌ನ ದೇವಘರ್‌ನಲ್ಲಿ ಕೇಬಲ್‌ ಕಾರುಗಳಲ್ಲಿ ಸಿಲುಕಿದ್ದ ಎಲ್ಲ ಪ್ರವಾಸಿಗರನ್ನು ಮಂಗಳವಾರ ರಕ್ಷಿಸಲಾಗಿದೆ. ಆದರೆ, ರಕ್ಷಣಾ ಕಾರ್ಯಾಚರಣೆಯ ವೇಳೆ ಹೆಲಿಕಾಪ್ಟರ್‌ನೊಳಗೆ ಎಳೆದುಕೊಳ್ಳುವಾಗ ಮತ್ತೊಬ್ಬ ವ್ಯಕ್ತಿ ಆಯತಪ್ಪಿ ಬಿದ್ದು ಸಾವಿಗೀಡಾಗಿದ್ದಾರೆ. ಈ ಮೂಲಕ ದುರಂತದಲ್ಲಿ ಸಾವಿಗೀಡಾದವರ ಸಂಖ್ಯೆ ಮೂರಕ್ಕೆ ಏರಿಕೆಯಾಗಿದೆ.

ತ್ರಿಕೂಟ ಬೆಟ್ಟಗಳ ವಲಯದಲ್ಲಿ ಕೇಬಲ್‌ ಕಾರುಗಳ ನಡುವೆ ಅಪಘಾತ ಸಂಭವಿಸಿ, ರೋಪ್‌ವೇನಲ್ಲೇ 15 ಪ್ರವಾಸಿಗರು ಸುಮಾರು 40 ಗಂಟೆಗಳು ಸಿಲುಕಿದ್ದರು. ಭಾರತೀಯ ವಾಯುಪಡೆಯ ಹೆಲಿಕಾಪ್ಟರ್‌ಗಳ ಮೂಲಕ ನಡೆಸಲಾದ ಕಾರ್ಯಾಚರಣೆಯಲ್ಲಿ ಇಂದು ಹದಿನಾಲ್ಕು ಜನರನ್ನು ರಕ್ಷಿಸಲಾಗಿದೆ.

'ರೋಪ್‌ವೇನಲ್ಲಿ ಸಿಲುಕಿದ್ದ 15 ಜನರ ಪೈಕಿ 14 ಮಂದಿಯನ್ನು ರಕ್ಷಿಸಲಾಗಿದೆ. ರಕ್ಷಣಾ ಕಾರ್ಯಾಚರಣೆಯ ವೇಳೆ ಮಹಿಳೆಯೊಬ್ಬರು ಹೆಲಿಕಾಪ್ಟರ್‌ನಿಂದ ಕೆಳಗೆ ಬಿದ್ದಿದ್ದಾರೆ' ಎಂದು ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕ ಆರ್‌.ಕೆ.ಮಲ್ಲಿಕ್‌ ಹೇಳಿದ್ದಾರೆ.

ಹೆಲಿಕಾಪ್ಟರ್‌ನಿಂದ ಕೆಳಗೆ ಬಿದ್ದ 60 ವರ್ಷ ವಯಸ್ಸಿನ ಶೋಭಾ ದೇವಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರು, ಅಷ್ಟರಲ್ಲಿ ಅವರು ಮೃತಪಟ್ಟಿದ್ದರು. ರಕ್ಷಿಸಲಾಗಿರುವ ಎಲ್ಲರನ್ನೂ ಪರೀಕ್ಷೆಗಾಗಿ ಆಸ್ಪತ್ರೆಗೆ ಕಳುಹಿಸಲಾಗಿದೆ ಎಂದು ದೇವಘರ್‌ನ ಸಿವಿಲ್‌ ಸರ್ಜನ್‌ ಸಿ.ಕೆ.ಶಾಹಿ ತಿಳಿಸಿದ್ದಾರೆ.

ಭಾನುವಾರ ರೋಪ್‌ವೇನಲ್ಲಿ ತಾಂತ್ರಿಕ ಸಮಸ್ಯೆ ಎದುರಾಗಿ ಕೇಬಲ್‌ ಕಾರುಗಳ ನಡುವೆ ಡಿಕ್ಕಿ ಸಂಭವಿಸಿತ್ತು. ರೋಪ್‌ವೇನಲ್ಲಿ ಸಿಲುಕಿದ್ದ ಒಟ್ಟು 60ಕ್ಕೂ ಹೆಚ್ಚು ಜನರನ್ನು ಭಾರತೀಯ ವಾಯುಪಡೆಯ ಎರಡು ಹೆಲಿಕಾಪ್ಟರ್‌ಗಳನ್ನು ಬಳಸಿ ರಕ್ಷಿಸಲಾಗಿದೆ.

ಸೋಮವಾರ ಮತ್ತು ಮಂಗಳವಾರ ಹೆಲಿಕಾಪ್ಟರ್‌ನಿಂದ ಇಬ್ಬರು ಪ್ರವಾಸಿಗರು ಕೆಳಗೆ ಬಿದ್ದ ಮೃತಪಟ್ಟರೆ, ಗಾಯಗೊಂಡಿರುವ 12 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಭಾರತೀಯ ವಾಯುಪಡೆ, ಸೇನೆ, ಐಟಿಬಿಪಿ, ಎನ್‌ಡಿಆರ್‌ಎಫ್‌ ಹಾಗೂ ಜಿಲ್ಲಾಡಳಿತದ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದರು. ರೋಪ್‌ವೇನಲ್ಲಿ ಸಿಲುಕಿದ್ದ ಜನರಿಗೆ ಡ್ರೋನ್‌ಗಳ ಮೂಲಕ ನೀರು ಮತ್ತು ಆಹಾರವನ್ನು ತಲುಪಿಸಲಾಗಿತ್ತು.

ಘಟನೆಯ ಸಂಬಂಧ ಉನ್ನತಮಟ್ಟದ ತನಿಖೆ ನಡೆಸುವುದಾಗಿ ಮುಖ್ಯಮಂತ್ರಿ ಹೇಮಂತ್‌ ಸೊರೇನ್‌ ಪ್ರಕಟಿಸಿದ್ದಾರೆ. ಗವರ್ನರ್‌ ರಮೇಶ್‌ ಬೈಸ್‌ ಅವರು ಮೃತ ವ್ಯಕ್ತಿಗಳ ಕುಟುಂಬಕ್ಕೆ ತೀವ್ರ ಸಂತಾಪ ಸೂಚಿಸಿದ್ದು, ಗಾಯಗೊಂಡವರು ಶೀಘ್ರ ಗುಣಮುಖರಾಗುವಂತೆ ಪ್ರಾರ್ಥಿಸಿದ್ದಾರೆ.

ಜಾರ್ಖಂಡ್‌ ಪ್ರವಾಸೋದ್ಯಮ ಇಲಾಖೆ ಪ್ರಕಾರ, ತ್ರಿಕೂಟ ರೋಪ್‌ವೇ ಭಾರತದ ಅತ್ಯಂತ ಲಂಬವಾದ ರೋಪ್‌ವೇ ಆಗಿದೆ. ಅದು ಸುಮಾರು 766 ಮೀಟರ್‌ ಉದ್ದವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT