ಸೋಮವಾರ, ಜೂನ್ 21, 2021
30 °C
ವಿಪಕ್ಷಗಳ ಟೀಕೆಗೆ ಬೇಸತ್ತ ಸಚಿವ ಜಗರ್‌ನಾಥ್‌ ಮಹ್ತೊ

ಜಾರ್ಖಂಡ್‌ ಶಿಕ್ಷಣ ಸಚಿವ ಈಗ ಪಿಯು ವಿದ್ಯಾರ್ಥಿ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಪಾಟ್ನಾ: ವಿಚಿತ್ರವಾದರೂ, ಇದು ಸತ್ಯ. 52 ವರ್ಷದ ಜಾರ್ಖಂಡ್‌ನ ಶಿಕ್ಷಣ ಸಚಿವ ಜಗರ್‌ನಾಥ್‌ ಮಹ್ತೊ ಇದೀಗ ಪಿಯು ವಿದ್ಯಾರ್ಥಿ. ತಮ್ಮ ಉನ್ನತ ಶಿಕ್ಷಣ ಮುಂದುವರಿಸಲು ನಿರ್ಧರಿಸಿರುವ ಮಹ್ತೊ, ಬೊಕಾರೊ ಜಿಲ್ಲೆಯ ದೇವಿ ಮಹ್ತೊ ಇಂಟರ್‌ ಕಾಲೇಜಿನಲ್ಲಿ ಪ್ರಥಮ ಪಿಯು ಸೇರಿದ್ದಾರೆ.

ಹೇಮಂತ್‌ ಸೊರೇನ್‌ ನೇತೃತ್ವದ ಸಚಿವ ಸಂಪುಟದಲ್ಲಿ ಸಚಿವರಾಗಿರುವ ಮಹ್ತೊ, ‘ಶಿಕ್ಷಣ ಸಚಿವರು ಕೇವಲ 10ನೇ ತರಗತಿ ಪಾಸ್‌’ ಎಂಬ ವಿಪಕ್ಷಗಳ ಟೀಕೆಗೆ ಬೇಸತ್ತು ಈ ನಿರ್ಧಾರ ಕೈಗೊಂಡಿದ್ದಾರೆ. ‘ಆಗಸ್ಟ್‌ 10ರಂದು ದೇವಿ ಮಹ್ತೊ ಇಂಟರ್‌ ಕಾಲೇಜಿನಲ್ಲಿ ನಾನು 11ನೇ ತರಗತಿಗೆ ದಾಖಲಾಗಿದ್ದೇನೆ’ ಎಂದು 52 ವರ್ಷದ ಜಾರ್ಖಂಡ್‌ ಮುಕ್ತಿ ಮೋರ್ಚಾ(ಜೆಎಂಎಂ)ಪಕ್ಷದ ದುಮ್ರಿಯ ಶಾಸಕ ಮಹ್ತೊ ಹೇಳಿದರು. 

‘1995ರಲ್ಲಿ ನಾನು ದ್ವಿತೀಯ ಶ್ರೇಣಿಯಲ್ಲಿ 10ನೇ ತರಗತಿ ಉತ್ತೀರ್ಣನಾಗಿದ್ದೆ. ಕುಟುಂಬದ ಕೆಲ ನಿರ್ಬಂಧದ ಕಾರಣ ನನಗೆ ಶಿಕ್ಷಣವನ್ನು ಮುಂದುವರಿಸಲು ಸಾಧ್ಯವಾಗಿರಲಿಲ್ಲ. ನಾನು ಜಾರ್ಖಂಡ್‌ನ ಶಿಕ್ಷಣ ಸಚಿವನಾಗಿ ಪ್ರಮಾಣ ವಚನ ಸ್ವೀಕರಿಸಿದಿಂದಾಗಲೂ ವಿಪಕ್ಷದ ಕೆಲ ನಾಯಕರು, 10ನೇ ತರಗತಿ ಉತ್ತೀರ್ಣನಾದ ಈತ ಹೇಗೆ ಶಿಕ್ಷಣ ಇಲಾಖೆಯನ್ನು ನಡೆಸುತ್ತಾನೋ ಎಂದು ಟೀಕಿಸುತ್ತಿದ್ದರು. ಆ ಸಂದರ್ಭದಲ್ಲೇ ಮುಂದಿನ ಶೈಕ್ಷಣಿಕ ವರ್ಷದಲ್ಲೇ ಶಿಕ್ಷಣ ಮುಂದುವರಿಸುವ ಬಗ್ಗೆ ನಿರ್ಧಾರ ಕೈಗೊಂಡಿದ್ದೆ. ಶಿಕ್ಷಣ ಪಡೆಯಲು ಯಾವುದೇ ವಯಸ್ಸಿನ ಮಿತಿ ಇಲ್ಲ’ ಎಂದು ಹೇಳಿದರು.   

ಕಲಾ ವಿಭಾಗವನ್ನು ಆಯ್ಕೆ ಮಾಡಿಕೊಂಡಿರುವ ಸಚಿವರು, ತಪ್ಪದೇ ತರಗತಿಗಳಿಗೆ ಹಾಜರಾಗುವುದರ ಜೊತೆಗೆ ತನ್ನ ಜವಾಬ್ದಾರಿಯನ್ನೂ ನಿಭಾಯಿಸುವುದಾಗಿ ತಿಳಿಸಿದರು. ‘ನಾನು ರಾಜಕಾರಣಿಯಾಗಿರುವ ಕಾರಣ, ರಾಜ್ಯಶಾಸ್ತ್ರವನ್ನು ಒಂದು ವಿಷಯವಾಗಿ ಆಯ್ಕೆ ಮಾಡಿಕೊಳ್ಳುತ್ತೇನೆ. ಇದರಿಂದ ನನ್ನ ಭವಿಷ್ಯಕ್ಕೂ ಸಹಕಾರಿಯಾಗಲಿದೆ’ ಎಂದರು. 

ಸಚಿವರೇ ಉದ್ಘಾಟಿಸಿದ ಕಾಲೇಜು: ಮಹ್ತೊ 2005ರಲ್ಲಿ ಪ್ರಥಮ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದರು. 2006ರಲ್ಲಿ ದೇವಿ ಮಹ್ತೊ ಕಾಲೇಜನ್ನು ಇವರೇ ಉದ್ಘಾಟಿಸಿದ್ದರು. ಕಾಕತಾಳೀಯವೆಂಬಂತೆ ಈಗ ಮಹ್ತಾ ಅವರು ಅದೇ ಕಾಲೇಜಿನಲ್ಲಿ ವಿದ್ಯಾರ್ಥಿಯಾಗಿ ಶಿಕ್ಷಣ ಮುಂದುವರಿಸಲಿದ್ದಾರೆ.         

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು