ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಂದೂ ಸಮಾಜ ದಲಿತರನ್ನು ಗುಲಾಮರಂತೆ ಕಂಡಿದೆ: ಜಿತನ್ ರಾಂ ಮಾಂಝಿ

ಮಾಂಝಿ ಹೇಳಿಕೆಯಿಂದ ಹಿಂದೂಗಳ ಭಾವನೆ ಧಕ್ಕೆ –ಬಿಜೆಪಿ ಆರೋಪ
Last Updated 5 ನವೆಂಬರ್ 2022, 14:41 IST
ಅಕ್ಷರ ಗಾತ್ರ

ಪಟ್ನಾ: ‘ಹಿಂದೂ ಸಮಾಜವು ದಲಿತರನ್ನು ‘ಗುಲಾಮ’ರಂತೆ ನಡೆಸಿಕೊಂಡಿದೆ. ಅದರಲ್ಲೂ ವಿಶೇಷವಾಗಿ ಪುರೋಹಿತಷಾಹಿ ವರ್ಗವು ಅವರನ್ನು ಅಸ್ಪೃಶ್ಯರನ್ನಾಗಿ ಪರಿಗಣಿಸಿದೆ’ ಎಂದು ಬಿಹಾರದ ಮಾಜಿ ಮುಖ್ಯಮಂತ್ರಿ ಜಿತನ್ ರಾಂ ಮಾಂಝಿ ಅವರು ಶನಿವಾರ ಹೇಳಿಕೆ ನೀಡಿದ್ದಾರೆ.

ಮಾಂಝಿ ಅವರು ಆಡಳಿತಾರೂಢ ‘ಮಹಾ ಘಟಬಂಧನ್‌’ನ ಭಾಗವಾಗಿರುವ ಹಿಂದೂಸ್ತಾನಿ ಅವಾಮ್ ಮೋರ್ಚಾದ ಮುಖ್ಯಸ್ಥರಾಗಿದ್ದು,ಮೊಕಾಮಾ ಮತ್ತು ಗೋಪಾಲ್‌ಗಂಜ್ ವಿಧಾನಸಭಾ ಕ್ಷೇತ್ರಗಳಲ್ಲಿ ನಡೆದ ಉಪಚುನಾವಣೆಯಲ್ಲಿ ಬಿಜೆಪಿ ದಲಿತರ ಮತಗಳನ್ನು ಪಡೆಯುವಲ್ಲಿ ಸಫಲವಾಗಿದೆಯೇ ಎಂದು ಕೇಳಿದಾಗ ಈ ರೀತಿ ಪ್ರತಿಕ್ರಿಯೆ ನೀಡಿದರು.

‘ನಿಮ್ಮನ್ನು (ದಲಿತರು) ನೀವು ಹಿಂದೂಗಳೆಂದು ಭಾವಿಸುತ್ತೀರಿ. ಆದರೆ, ಕಳೆದ 75 ವರ್ಷಗಳಿಂದಲೂ ನಿಮ್ಮನ್ನು ಗುಲಾಮರಂತೆ ನಡೆಸಿಕೊಳ್ಳಲಾಗಿದೆ ಎಂದು ನಾನು ದಲಿತರಿಗೆ ಹೇಳುತ್ತೇನೆ. ಪುರೋಹಿತರು ನೀವಿರುವ ಸ್ಥಳಗಳಲ್ಲಿ ಸಮಾರಂಭಗಳನ್ನು ಮಾಡಲು ಹಿಂಜರಿಯುತ್ತಾರೆ.ಮಾಂಸವನ್ನು ತಿನ್ನುವ ಮತ್ತು ಮದ್ಯ ಸೇವಿಸುವ ಅನೇಕ ಬ್ರಾಹ್ಮಣರಿದ್ದಾರೆ. ಆದರೆ, ನೀವು ತಯಾರಿಸಿದ ಆಹಾರವನ್ನೂ ಸೇವಿಸಲು ಅವರು ಒಪ್ಪುವುದಿಲ್ಲ’ ಎಂದು ಮಾಂಝಿ ಹೇಳಿದರು.

ಬಿಜೆಪಿ ಪ್ರತಿಕ್ರಿಯೆ: ‘ಜಿತನ್ ರಾಂ ಮಾಂಝಿ ಅವರು ಹಿರಿಯ ಗೌರವಾನ್ವಿತ ನಾಯಕ. ಅವರು ಹಿಂದೂಗಳಿಗೆ ಅವಮಾನವಾಗುವ, ಅವರ ಭಾವನೆಗಳಿಗೆ ಧಕ್ಕೆ ತರುವ ಇಂಥ ಹೇಳಿಕೆಗಳನ್ನು ನೀಡಬಾರದು. ಅವರು ತಾವು ಹಿಂದೂ ಅಲ್ಲ ಎಂದು ಭಾವಿಸುವುದಾದರೆ ಅವರು ತಮ್ಮ ಸ್ವಂತ ಧಾರ್ಮಿಕ ಗುರುತನ್ನು ಸ್ಪಷ್ಟಪಡಿಸಬೇಕು’ ಎಂದು ಬಿಹಾರ ರಾಜ್ಯ ಘಟಕದ ಬಿಜೆಪಿ ವಕ್ತಾರ ಮತ್ತು ಒಬಿಸಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ನಿಖಿಲ್ ಆನಂದ್ ಪ್ರತಿಕ್ರಿಯೆ ನೀಡಿದ್ದಾರೆ.

ಬಿಜೆಪಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಮಾಂಝಿ ಪಕ್ಷದ ಮುಖ್ಯ ವಕ್ತಾರ ದಾನಿಷ್ ರಿಜ್ವಾನ್, ‘ಬಿಜೆಪಿ ತನ್ನ ರಾಜಕೀಯ ಬಲವನ್ನು ಖಚಿತಪಡಿಸಿಕೊಳ್ಳಲು ನ್ಯಾಯಾಂಗದಲ್ಲಿ ಮೀಸಲಾತಿ ವ್ಯವಸ್ಥೆ ಜಾರಿಗೆ ತಂದು, ಆಡಳಿತದ ಉನ್ನತ ಹುದ್ದೆಗಳಲ್ಲಿ ದಲಿತರಿಗೆ ಸ್ಥಾನ ಕಲ್ಪಿಸಲಿ’ ಎಂದು ಎಂದು ಸವಾಲೆಸೆದಿದ್ದಾರೆ.

ಬಿಜೆಪಿ ಜತೆಗೆ ಗುರುತಿಸಿಕೊಂಡಿದ್ದ ಮಾಂಝಿ ಇತ್ತೀಚೆಗೆ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಜೆಡಿಯು ಜತೆ ಗುರುತಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT