ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಳ್ಳಬಟ್ಟಿ ದುರಂತ: ಬಿಹಾರ ಸರ್ಕಾರದ ವಿರುದ್ಧ ವಿಪಕ್ಷಗಳ ಆಕ್ರೋಶ

* 26ಕ್ಕೇರಿದ ಸಾವಿನ ಸಂಖ್ಯೆ * ಲೋಕಸಭೆಯಲ್ಲೂ ವಿಷಯ ಪ್ರಸ್ತಾಪ
Last Updated 15 ಡಿಸೆಂಬರ್ 2022, 14:11 IST
ಅಕ್ಷರ ಗಾತ್ರ

ಪಟ್ನಾ: ಬಿಹಾರದ ಸರಣ್‌ ಜಿಲ್ಲೆಯಲ್ಲಿ ಸಂಭವಿಸಿದ ಕಳ್ಳಬಟ್ಟಿ ದುರಂತದಲ್ಲಿ ಸಾವನ್ನಪ್ಪಿದವರ ಸಂಖ್ಯೆ 26ಕ್ಕೆ ಏರಿಕೆಯಾಗಿದ್ದು, ರಾಜ್ಯದಲ್ಲಿ ಇರುವ ಮದ್ಯ ನಿಷೇಧ ಕಾನೂನಿನ ಔಚಿತ್ಯದ ಬಗ್ಗೆ ತೀವ್ರ ಟೀಕೆ ವ್ಯಕ್ತವಾಗಿದೆ.

ಬಿಹಾರ ವಿಧಾನಸಭೆಯ ಚಳಿಗಾಲದ ಅಧಿವೇಶನದಲ್ಲಿ ಸತತ ಎರಡನೇ ದಿನವೂ ವಿರೋಧ ಪಕ್ಷಗಳು ಸರಣ್‌ ದುರಂತದ ಕುರಿತು ಗದ್ದಲ ಎಬ್ಬಿಸಿದವು. ಸ್ಪೀಕರ್‌ ಪೀಠದ ಎದುರುಬಿಜೆಪಿ ಶಾಸಕರು ಫಲಕಗಳನ್ನು ಹಿಡಿದು, ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.

ಮಹಾಘಕಬಂಧನಕ್ಕೆ ಬೆಂಬಲ ನೀಡಿರುವ ಸಿಪಿಎಂ (ಎಂಎಲ್‌) ಲಿಬರೇಷನ್‌ ಪಕ್ಷ ಕೂಡ ಸರ್ಕಾರ ವಿರುದ್ಧ ಪ್ರತಿಭಟನೆ ನಡೆಸಿತು. ಮದ್ಯ ಸೇವಿಸಿ ಮೃತಪಟ್ಟರೆ ಅಂಥವರ ಕುಟುಂಬಕ್ಕೆ ಪರಿಹಾರ ನೀಡಲಾಗುವುದಿಲ್ಲ ಎಂಬ ನಿಯಮವು ಮದ್ಯ ನಿಷೇಧ ಕಾನೂನಿನಲ್ಲಿದೆ. ಕಾನೂನಿನ ಈ ಅಂಶದ ಕುರಿತು ಮರುಪರಿಶೀಲನೆ ನಡೆಸಬೇಕು ಎಂದು ಪಕ್ಷ ಆಗ್ರಹಿಸಿದೆ.

ಬಿಹಾರ ಸರ್ಕಾರದ ವಿರುದ್ಧ ಕ್ರಮ ಕೈಗೊಳ್ಳಿ (ನವದೆಹಲಿ ವರದಿ): ಸರಣ್‌ ಕಳ್ಳಬಟ್ಟಿ ದುರಂತವು ಲೋಕಸಭೆಯಲ್ಲೂ ಪ್ರತಿಧ್ವನಿಸಿತು. ಇದೊಂದು ‘ಸಾಮೂಹಿಕ ಹತ್ಯೆ’ಯಾಗಿದೆ. ಆದ್ದರಿಂದ ಬಿಹಾರ ಸರ್ಕಾರದ ವಿರುದ್ಧ ಕೇಂದ್ರ ಸರ್ಕಾರವು ಕ್ರಮ ಕೈಗೊಳ್ಳಬೇಕು ಎಂದು ಬಿಜೆಪಿ ಸದಸ್ಯರು ಆಗ್ರಹಿಸಿದರು.

‘ಪೊಲೀಸ್‌ ಅಧಿಕಾರಿಗಳ ರಕ್ಷಣೆಯಲ್ಲಿಬಿಹಾರದಲ್ಲಿ ಕಳ್ಳಬಟ್ಟಿ ದಂಧೆ ನಡೆಯುತ್ತಿದೆ. ಈ ದಂಧೆಯಲ್ಲಿ ಭಾಗಿಯಾಗಿ ಕೋಟಿ ಕೋಟಿ ಕಬಳಿಸಿರುವ ಪೊಲೀಸ್‌ ಅಧಿಕಾರಿಗಳ ವಿರುದ್ಧವೂ ಕ್ರಮ ಜರುಗಬೇಕು’ ಎಂದು ಸಂಜಯ್‌ ಜಸ್ವಾಲ್‌ ಆರೋಪಿಸಿದರು.

ಎಸ್‌ಐಟಿ ರಚನೆ: ಸರಣ್‌ ಕಳ್ಳಬಟ್ಟಿ ದುರಂತದ ತನಿಖೆಗೆ ವಿಶೇಷ ತನಿಖಾ ತಂಡವನ್ನು (ಎಸ್‌ಐಟಿ) ರಚಿಸಲಾಗಿದೆ ಎಂದು ಜಿಲ್ಲಾಧಿಕಾರಿ ರಾಜೇಶ್‌ ಮೀನಾ ಗುರುವಾರ ಹೇಳಿದರು.

‘ಕಳೆದ 48 ಗಂಟೆಗಳಲ್ಲಿ 126 ಕಳ್ಳಬಟ್ಟಿ ವ್ಯಾಪಾರಿಗಳನ್ನು ಬಂಧಿಸಲಾಗಿದೆ. 4 ಸಾವಿರ ಲೀಟರ್‌ ನಷ್ಟು ಅಕ್ರಮ ಮದ್ಯವನ್ನು ವಶಪಡಿಸಿಕೊಳ್ಳಲಾಗಿದೆ’ ಎಂದರು.

‘ಕಳ್ಳಬಟ್ಟಿಯಿಂದ ಸೇವನೆಯಿಂದ ಸಾವು: ಬಿಜೆಪಿ ಆಡಳಿತ ಇರುವ ರಾಜ್ಯಗಳಲ್ಲೇ ಹೆಚ್ಚು’
‘ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳಲ್ಲೇ ಕಳ್ಳಬಟ್ಟಿ ಸೇವನೆಯಿಂದ ಸಾವನ್ನಪ್ಪಿದವರು ಸಂಖ್ಯೆ ಹೆಚ್ಚಿದೆ’ ಎಂದುಬಿಹಾರದ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್‌ ಆರೋಪಿಸಿದರು.

‘ಕಳ್ಳಬಟ್ಟಿ ಸೇವನೆಯಿಂದ2016ರಿಂದ 2022ವರೆಗೆ ಮಧ್ಯಪ್ರದೇಶದಲ್ಲಿ 1,214 ಮಂದಿ ಸತ್ತಿದ್ದರೆ, ಕರ್ನಾಟಕದಲ್ಲಿ 909 ಮಂದಿ ಸತ್ತಿದ್ದಾರೆ.ನಿತೀಶ್‌ ಕುಮಾರ್‌ ಅವರ ರಾಜೀನಾಮೆ ಕೇಳುವ ಬಿಜೆಪಿ ಶಾಸಕರು, ಬಿಜೆಪಿಗರೇ ಅಧಿಕಾರದಲ್ಲಿರುವ ಈ ಮೂರು ರಾಜ್ಯಗಳ ಮುಖ್ಯಮಂತ್ರಿಗಳ ರಾಜೀನಾಮೆಯನ್ನೂ ಕೇಳುತ್ತಾರೆಯೇ?’ ಎಂದು ಅವರು ಪ್ರಶ್ನಿಸಿದರು.

ಜೋ ಪಿಯೇಗಾ, ವೋ ಮರೇಗಾ: ನಿತೀಶ್‌
ಕಳ್ಳಬಟ್ಟಿ ದುರಂತದ ಕುರಿತು ಪ್ರತಿಕ್ರಿಯಿಸಿದ ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌, ‘ಯಾರು ಕುಡಿಯುತ್ತಾರೊ ಅವರು ಸಾಯುತ್ತಾರೆ’ (ಜೋ ಪಿಯೆಗಾ, ವೋ ಮರೆಗಾ) ಎಂದರು. ನಿತೀಶ್‌ ಅವರ ಹೇಳಿಕೆಗೆ ವಿರೋಧ ಪಕ್ಷಗಳಿಂದ ಭಾರಿ ವಿರೋಧ ವ್ಯಕ್ತವಾಗಿದೆ.

‘ಕಳ್ಳಬಟ್ಟಿಯಿಂದಾದ ಸಾವಿಗೂ ಮದ್ಯ ನಿಷೇಧ ಕಾನೂನಿಗೂ ಸಂಬಂಧ ಕಲ್ಪಿಸುತ್ತಿರುವುದರಿಂದ ದಿಗ್ಬ್ರಾಂತನಾಗಿದ್ದೇನೆ. ಮದ್ಯ ನಿಷೇಧ ಕಾನೂನು ಜಾರಿಯಲ್ಲಿರದ ರಾಜ್ಯಗಳಲ್ಲೂ ಜನರು ಕಳ್ಳಬಟ್ಟಿ ಕುಡಿದು ಸಾಯುತ್ತಾರೆ’ ಎಂದು ನಿತೀಶ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT