ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುನಾವಣೆ ನಡೆಯಲಿರುವ ರಾಜ್ಯಗಳಲ್ಲಿ ದ್ವೇಷ ಹರಡಲು ಬಿಜೆಪಿ ಯತ್ನ: ಕಾಂಗ್ರೆಸ್‌

ಅಕ್ಷರ ಗಾತ್ರ

ನವದೆಹಲಿ: ಚುನಾವಣೆ ನಡೆಯಲಿರುವ ರಾಜ್ಯಗಳಲ್ಲಿ ದ್ವೇಷ ಹರಡಲು ಬಿಜೆಪಿ ಯತ್ನಿಸುತ್ತಿದೆ ಎಂದು ಕಾಂಗ್ರೆಸ್‌ ಆರೋಪಿಸಿದೆ.

ರಾಜಸ್ಥಾನದ ಜೋಧಪುರದಲ್ಲಿ ಎರಡು ಸಮುದಾಯಗಳ ನಡುವೆ ನಡೆದ ಘರ್ಷಣೆ ಬಳಿಕ ಕಾಂಗ್ರೆಸ್‌ ಪಕ್ಷವು ಈ ಆರೋಪವನ್ನು ಮಾಡಿದೆ.

ರಾಜಸ್ಥಾನ, ಗುಜರಾತ್, ಹಿಮಾಚಲ ಪ್ರದೇಶ, ಮಧ್ಯಪ್ರದೇಶ ಮತ್ತು ಕರ್ನಾಟಕ ಸೇರಿದಂತೆ ವಿಧಾನಸಭೆ ಚುನಾವಣೆ ನಡೆಯಲಿರುವ ರಾಜ್ಯಗಳಲ್ಲಿ ಬಿಜೆಪಿ ದ್ವೇಷವನ್ನು ಹರಡುತ್ತಿದೆ ಎಂದು ಕಾಂಗ್ರೆಸ್ ಪಕ್ಷದ ವಕ್ತಾರ ರಣದೀಪ್ ಸುರ್ಜೆವಾಲ ವಾಗ್ದಾಳಿ ನಡೆಸಿದ್ದಾರೆ.

ಉತ್ತರ ಪ್ರದೇಶ ಅಥವಾ ಉತ್ತರಾಖಂಡದಲ್ಲಿ ಈಗ ಯಾವುದೇ ಕೋಮು ಗಲಭೆಗಳು ನಡೆಯುವುದಿಲ್ಲ. ಏಕೆಂದರೆ ಅಲ್ಲಿ ಚುನಾವಣೆಗಳು ಮುಗಿದಿವೆ. ಆದರೆ, ಮುಂದೆ ಚುನಾವಣೆಗಳು ನಡೆಯಲಿರುವ ರಾಜ್ಯಗಳಲ್ಲಿ ಬಿಜೆಪಿಯು ದ್ವೇಷಪೂರಿತ ಕಾರ್ಯಸೂಚಿಯನ್ನು ಬಿಡುಗಡೆ ಮಾಡಿದೆ ಎಂದು ಸುರ್ಜೇವಾಲ ಆರೋಪಿಸಿದ್ದಾರೆ.

ಜನರನ್ನು ವಿಭಜಿಸುವುದು ಮತ್ತು ಮೂರ್ಖರನ್ನಾಗಿಸುವುದು ಬಿಜೆಪಿಯ ಅಜೆಂಡಾ ಆಗಿದೆ. ಹಿಂದೂ– ಮುಸಲ್ಮಾನ, ಸ್ಮಶಾನ–ಕಬರಿಸ್ತಾನಗಳ ಮೇಲೆ ಬಿಜೆಪಿಯವರು ರಾಜಕಾರಣ ಮಾಡುತ್ತಾರೆ. ಇದರಿಂದ ಹಣದುಬ್ಬರ ಹಾಗೂ ನಿರುದ್ಯೋಗದಂತಹ ಸಮಸ್ಯೆಗಳ ಕುರಿತ ಚರ್ಚೆಗಳು ಕಸದ ಬುಟ್ಟಿಗೆ ತಳ್ಳಲ್ಪಟ್ಟಿವೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಹಿಂದೂ ಧರ್ಮವು ಮಾನವೀಯತೆ ಹಾಗೂ ಸಹಾನುಭೂತಿಯನ್ನು ಕಲಿಸುತ್ತದೆ. ಹಿಂದೂ ಧರ್ಮವು ಎಲ್ಲಾ ಧರ್ಮಗಳನ್ನು ಗೌರವಿಸುತ್ತದೆ. ಹಿಂದೂ ಧರ್ಮ ವಿಭಜನೆಯ ಸಾಧನವಲ್ಲ. ಗೋಡ್ಸೆಯ ಮಕ್ಕಳು ಹಾಗೂ ಗೋಡ್ಸೆಯ ಉತ್ತರಾಧಿಕಾರಿಗಳು ಮಾತ್ರ ಹಿಂದೂ ಧರ್ಮದ ತತ್ವಗಳನ್ನು ಅವಮಾನಿಸುವ ಮೂಲಕ ವಿಕೃತಿಗಳನ್ನು ಮೆರೆಯುತ್ತಿದ್ದಾರೆ’ ಎಂದು ಸುರ್ಜೇವಾಲ ಟೀಕಿಸಿದ್ದಾರೆ.

ಬಿಜೆಪಿಯ ಕೋಮು ವಿಭಜನೆ, ದ್ವೇಷ ಮತ್ತು ಧ್ರುವೀಕರಣದ ಕಾರ್ಯಸೂಚಿಗೆ ಬಲಿಯಾಗಬೇಡಿ ಎಂದು ಜನರಲ್ಲಿ ಸುರ್ಜೇವಾಲ ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT