ಶನಿವಾರ, ಡಿಸೆಂಬರ್ 5, 2020
21 °C

ಪಂಜಾಬ್‌ನಲ್ಲಿ ಮೋದಿ ಪ್ರತಿಕೃತಿ ದಹನ: ಕಾಂಗ್ರೆಸ್‌ ವಿರುದ್ಧ ನಡ್ಡಾ ಕಿಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಕೇಂದ್ರದ ನೂತನ ಕೃಷಿ ಮಸೂದೆಗಳನ್ನು ವಿರೋಧಿಸಿ ಯುವ ಕಾಂಗ್ರೆಸ್‌ ಕಾರ್ಯಕರ್ತರು, ದಸರಾ ಹಬ್ಬದ ದಿನ ಪಂಜಾಬ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಪ್ರತಿಕೃತಿಗಳನ್ನು ದಹಿಸಿದ್ದಾರೆ. ಯುವ ಕಾಂಗ್ರೆಸ್‌ನ ಈ ನಡೆಯ ವಿರುದ್ಧ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಕಿಡಿಕಾರಿದ್ದಾರೆ.

‘ಭಾನುವಾರ ಪಂಜಾಬ್‌ನ ಎಲ್ಲಾ ಭಾಗಗಳಲ್ಲೂ ಪ್ರಧಾನಿ ಮೋದಿ ಪ್ರತಿಕೃತಿಗಳನ್ನು ಸುಡಲಾಗಿದೆ. ಮೋದಿ ವಿರುದ್ಧ ಆ ರಾಜ್ಯದಲ್ಲಿ ಜನಾಕ್ರೋಶ ವ್ಯಕ್ತವಾಗುತ್ತಿದೆ. ಇದು ಅಪಾಯಕಾರಿ ಬೆಳವಣಿಗೆ. ಈಗಲಾದರೂ ಪ್ರಧಾನಿಯವರು ಎಚ್ಚೆತ್ತುಕೊಳ್ಳಬೇಕು. ಶೀಘ್ರವೇ ಪಂಜಾಬ್‌ಗೆ ಭೇಟಿ ಕೊಟ್ಟು ಅಲ್ಲಿನ ಜನರ ಸಮಸ್ಯೆಗಳನ್ನು ಆಲಿಸಬೇಕು. ಅವರ ಬೇಡಿಕೆಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸಬೇಕು’ ಎಂದು ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ ಹೇಳಿಕೆ ನೀಡಿದ್ದರು.

ಇದರಿಂದ ಸಿಡಿಮಿಡಿಗೊಂಡಿರುವ ನಡ್ಡಾ, ‘ಇದು ರಾಹುಲ್‌ ಗಾಂಧಿ ಅವರ ಅಣತಿಯಂತೆಯೇ ನಡೆಯುತ್ತಿರುವ ನಾಟಕ. ಪ್ರಧಾನಿ ಅವರ ಪ್ರತಿಕೃತಿಗಳನ್ನು ದಹಿಸಿರುವುದು ನಾಚಿಕೆಯ ವಿಷಯ. ಇದು ಅನಿರೀಕ್ಷಿತವೇನಲ್ಲ’ ಎಂದಿದ್ದಾರೆ.

‘ನೆಹರೂ–ಗಾಂಧಿ ಕುಟುಂಬದವರು ಪ್ರಧಾನಿ ಕಚೇರಿಯನ್ನು ಎಂದೂ ಗೌರವಿಸಲಿಲ್ಲ. ಯುಪಿಎ ಆಡಳಿತಾವಧಿಯಲ್ಲಿ (2004–2014) ಪ್ರಧಾನಿಯ ಅಧಿಕಾರವನ್ನು ದುರ್ಬಲಗೊಳಿಸುವ ಪ್ರಯತ್ನ ನಡೆದಿದ್ದನ್ನು ಎಲ್ಲರೂ ನೋಡಿದ್ದಾರೆ’ ಎಂದು ಅವರು ದೂರಿದ್ದಾರೆ.

ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಕೃಷಿ ಮಸೂದೆಗಳು ರೈತರ ಹಿತಕ್ಕೆ ಮಾರಕವಾಗಿದ್ದು, ಇದರಿಂದ ಕನಿಷ್ಠ ಬೆಂಬಲ ಬೆಲೆ ನೀತಿಯೂ ರದ್ದಾಗಲಿದೆ ಎಂದು ಆರೋ‍‍ಪಿಸಿ ಮೊದಲಿನಿಂದಲೂ ಪಂಜಾಬ್‌ನಲ್ಲಿ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಕಾಂಗ್ರೆಸ್‌ ಪಕ್ಷವು ಕೃಷಿ ಮಸೂದೆಗಳ ಬಗ್ಗೆ ತಪ್ಪು ಮಾಹಿತಿ ನೀಡುವ ಮೂಲಕ ರೈತರ ದಾರಿ ತಪ‍್ಪಿಸುವ ಕೆಲಸ ಮಾಡುತ್ತಿದೆ ಎಂದು ಬಿಜೆಪಿ ಆರೋಪಿಸಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು