ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನ್ಯಾಯಮೂರ್ತಿಗಳು ನಿರ್ಭೀತಿಯಿಂದ ನಿರ್ಧಾರ ತೆಗೆದುಕೊಳ್ಳಬೇಕು

ನ್ಯಾಯಮೂರ್ತಿ ಎನ್. ವಿ. ರಮಣ‌‌ ಅಭಿಮತ
Last Updated 18 ಅಕ್ಟೋಬರ್ 2020, 8:00 IST
ಅಕ್ಷರ ಗಾತ್ರ

ನವದೆಹಲಿ: ‘ನ್ಯಾಯಾಂಗದ ಮೇಲೆ ಜನರು ಇಟ್ಟಿರುವ ನಂಬಿಕೆ ಮತ್ತು ವಿಶ್ವಾಸವೇ ನ್ಯಾಯಾಂಗದ ಬಹುದೊಡ್ಡ ಶಕ್ತಿ. ನ್ಯಾಯಾಧೀಶರು ಒತ್ತಡಗಳನ್ನು ನಿಗ್ರಹಿಸುತ್ತಾ, ತಮ್ಮ ತತ್ವಗಳಿಗೆ ಬದ್ಧರಾಗಿ, ನಿರ್ಭೀತಿಯಿಂದ ನಿರ್ಧಾರ ತೆಗೆದುಕೊಳ್ಳಬೇಕು‘ ಎಂದು ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿ ಎನ್‌.ವಿ.ರಮಣ ಅಭಿಪ್ರಾಯಪಟ್ಟರು.

ಆಂಧ್ರಪ್ರದೇಶದ ಮುಖ್ಯಮಂತ್ರಿ ವೈ.ಎಸ್.ಜಗನ್ ಮೋಹನ್ ರೆಡ್ಡಿ ಅವರು ರಮಣ ವಿರುದ್ಧ ಕೆಲವೊಂದು ಆರೋಪಗಳನ್ನು ಹೊರಿಸಿ ಇತ್ತೀಚೆಗೆ ಮುಖ್ಯ ನ್ಯಾಯಮೂರ್ತಿ ಎಸ್. ಎ. ಬೊಬಡೆ ಅವರಿಗೆ ಪತ್ರ ಬರೆದಿದ್ದರು. ಈ ಹಿನ್ನೆಲೆಯಲ್ಲಿ ರಮಣ್‌ ಅವರ ಈ ಅಭಿಪ್ರಾಯಗಳು ಮಹತ್ವ ಪಡೆದುಕೊಂಡಿವೆ.

ಆಗಸ್ಟ್ 27 ರಂದು ನಿಧನರಾದ ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎ.ಆರ್.ಲಕ್ಷ್ಮಣನ್ ಸ್ಮರರ್ಣಾಥ ಏರ್ಪಡಿಸಿದ್ದ ಸಂತಾಪ ಸಭೆಯಲ್ಲಿ ಮಾತನಾಡಿದ ನ್ಯಾಯಮೂರ್ತಿ ರಮಣ‌, ‘ನ್ಯಾಯಾಂಗದ ಬಹುದೊಡ್ಡ ಶಕ್ತಿ ಎಂದರೆ, ಅದರ ಮೇಲಿರುವ ಜನರ ನಂಬಿಕೆ. ಈ ನಂಬಿಕೆ, ವಿಶ್ವಾಸ ಮತ್ತು ಸ್ವೀಕಾರಾರ್ಹತೆಯನ್ನು ಆಜ್ಞಾಪಿಸಲು ಆಗುವುದಿಲ್ಲ, ಬದಲಿಗೆ ಅವುಗಳನ್ನು ಪಡೆದುಕೊಳ್ಳಬೇಕು‘ ಎಂದು ಹೇಳಿದರು.

ಆಂಧ್ರದ ಮುಖ್ಯಮಂತ್ರಿ, ಮುಖ್ಯ ನ್ಯಾಯಮೂರ್ತಿಯವರಿಗೆ ಪತ್ರ ಬರೆದ ನಂತರ ನ್ಯಾಯಮೂರ್ತಿ ರಮಣ ಅವರು ಇದೇ ಮೊದಲ ಬಾರಿಗೆ ಆ ವಿಷಯದ ಬಗ್ಗೆ ಸಾರ್ವಜನಿಕವಾಗಿ ಮಾತನಾಡಿದ್ದಾರೆ.

‘ಒಬ್ಬ ವ್ಯಕ್ತಿ ಉತ್ತಮವಾಗಿ ಜೀವಿಸಬೇಕಾದರೆ, ಅವನಲ್ಲಿ ಅಸಂಖ್ಯವಾದ ಗುಣಗಳಿರಬೇಕು. ಅದರಲ್ಲಿ ಮಾನವೀಯತೆ, ತಾಳ್ಮೆ, ದಯೆ, ಅದಮ್ಯವಾದ ನೈತಿಕತೆ ಮತ್ತು ನಿರಂತರವಾದ ಕಲಿಕೆ, ಕಲಿಯುವ ಉತ್ಸಾಹ ಮತ್ತು ನಮ್ಮನ್ನು ಸುಧಾರಿಸಿಕೊಳ್ಳುವಂತಹ ಗುಣ ಬಹಳ ಮುಖ್ಯವಾದವು‘ ಎಂದು ರಮಣ ಹೇಳಿದರು.

‘ವಿಶೇಷವಾಗಿ ನ್ಯಾಯಾಧೀಶರಲ್ಲಿ, ತಮ್ಮ ತತ್ವಗಳಿಗೆ ಬದ್ಧರಾಗಿದ್ದು, ನಿರ್ಭಯವಾಗಿ ತೀರ್ಪುಗಳನ್ನು ನೀಡುವ ಗುಣ ಬೆಳೆಸಿಕೊಳ್ಳಬೇಕು. ಎಂಥದ್ದೇ ಅಡೆತಡೆಗಳ ನಡುವೆ, ಎಲ್ಲ ಒತ್ತಡಗಳನ್ನು ನಿಗ್ರಹಿಸುತ್ತಾ, ಧೈರ್ಯವಾಗಿ ತೀರ್ಮಾನಗಳನ್ನು ತೆಗೆದುಕೊಳ್ಳುವಂತಹ ಗುಣಗಳನ್ನು ಬೆಳೆಸಿಕೊಳ್ಳಬೇಕು‘ ಎಂದರು.

‘ಇತ್ತೀಚೆಗೆ ನಿಧನರಾದ ನ್ಯಾಯಮೂರ್ತಿ ಲಕ್ಷ್ಮಣನ್ ಅವರು ಇಂಥ ಎಲ್ಲ ಗುಣಗಳನ್ನು ಬೆಳೆಸಿಕೊಂಡು, ದೇಶದಲ್ಲೇ ಉತ್ತಮ ನ್ಯಾಯಮೂರ್ತಿಗಳೆಂದು ಹೆಸರು ಪಡೆದಿದ್ದರು‘ ಎಂದು ರಮಣ ಸ್ಮರಿಸಿದರು.

ನ್ಯಾಯಮೂರ್ತಿ ಲಕ್ಷ್ಮಣನ್, ತಮಿಳುನಾಡು ಮೂಲದವರು. 1990ರಲ್ಲಿ ಮದ್ರಾಸ್ ಹೈಕೋರ್ಟ್‌ನ ಕಾಯಂ ನ್ಯಾಯಮೂರ್ತಿಯಾಗಿ ನೇಮಕಗೊಂಡರು. ನಂತರ ರಾಜಸ್ಥಾನ ಹೈಕೋರ್ಟ್‌ನಲ್ಲಿ ಮುಖ್ಯ ನ್ಯಾಯಮೂರ್ತಿಯಾಗಿ, ನಂತರ ಆಂಧ್ರಪ್ರದೇಶ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸಿದ್ದರು. 2002ರಿಂದ ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸಿ 2007ರಲ್ಲಿ ನಿವೃತ್ತಿಯಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT