ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂದರ್ಶನ| ತಮಿಳುನಾಡಿಗೆ ಹೊಸ ದಿಕ್ಕು ತೋರಿಸುವ ಸಾಮರ್ಥ್ಯ ಬಿಜೆಪಿಗಿದೆ: ಅಣ್ಣಾಮಲೈ

Last Updated 25 ಆಗಸ್ಟ್ 2020, 9:39 IST
ಅಕ್ಷರ ಗಾತ್ರ

ಚೆನ್ನೈ: ಕರ್ನಾಟಕದಲ್ಲಿ ವಿಭಿನ್ನ ಶೈಲಿಯಲ್ಲಿ ಕಾರ್ಯನಿರ್ವಹಿಸಿ ‘ಸಿಂಗಂ’ ಎಂದೇ ಖ್ಯಾತಿ ಪಡೆದಿದ್ದ ಮಾಜಿ ಐಪಿಎಸ್‌ ಅಧಿಕಾರಿ ಕೆ. ಅಣ್ಣಾಮಲೈ ಮಂಗಳವಾರ ಬಿಜೆಪಿ ಸೇರಿದ್ದಾರೆ.

2021ರಲ್ಲಿ ನಡೆಯುವ ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಅಣ್ಣಾಮಲೈ ಸ್ಪರ್ಧಿಸುವ ಸಾಧ್ಯತೆಗಳಿವೆ. ಮುಂದಿನ ರಾಜಕೀಯ ನಡೆಯ ಬಗ್ಗೆ ಅವರು ಇಲ್ಲಿ ವಿವರಿಸಿದ್ದಾರೆ.

ಪ್ರಶ್ನೆ: ಬಿಜೆಪಿ ಸೇರುವ ವರದಿಗಳನ್ನು ನಿರಾಕರಿಸಿದ್ದೀರಿ. ಆದರೆ, ಈಗ ನಿರ್ಧಾರ ಬದಲಾಯಿಸಲು ಕಾರಣ?

ಉ: ನಾನು ರಾಷ್ಟ್ರೀಯವಾದಿ. ರಾಷ್ಟ್ರೀಯವಾದಿ ಮನೋಭಾವದಿಂದಾಗಿಯೇ ಐಪಿಎಸ್‌ ಸೇರಿದೆ. ಯಾವುದೇ ರಾಜಕೀಯ ಪಕ್ಷದ ಜತೆ ಗುರುತಿಸಿಕೊಳ್ಳದೆ ಜನರ ಸೇವೆ ಮಾಡುವ ಉದ್ದೇಶದಿಂದ ಐಪಿಎಸ್‌ಗೆ ರಾಜೀನಾಮೆ ನೀಡಿದೆ. ನಾನು ನಾನಾಗಿಯೇ ಇದ್ದುಕೊಂಡು ಸಾಮಾಜಿಕ ಬದಲಾವಣೆ ಮಾಡುವ ಉದ್ದೇಶ ಹೊಂದಿದ್ದೆ. ಆದರೆ, ರಾಜಕೀಯ ಬದಲಾವಣೆಯೂ ಅಗತ್ಯವಿದೆ ಎನ್ನುವುದನ್ನು ಅರಿತುಕೊಂಡೆ. ವಿಶೇಷವಾಗಿ ತಮಿಳುನಾಡಿನಂತಹ ರಾಜ್ಯಕ್ಕೆ ವಿಭಿನ್ನವಾದ ದಿಕ್ಕು ತೋರಿಸಬೇಕಾಗಿದೆ. ಪ್ರಸ್ತುತ ಸನ್ನಿವೇಶದಲ್ಲಿ ನರೇಂದ್ರ ಮೋದಿ ಅವರ ಕಾರ್ಯವೈಖರಿಯೂ ನನಗೆ ಇಷ್ಟವಾಗಿತ್ತು. ಎಲ್ಲ ಅಂಶಗಳನ್ನು ಸಮಗ್ರವಾಗಿ ಅವಲೋಕಿಸಿದಾಗ ಬಿಜೆಪಿ ಆಯ್ಕೆ ಮಾಡಿಕೊಳ್ಳುವುದು ಅತ್ಯುತ್ತಮ ನಿರ್ಧಾರ ಎಂದು ಅನಿಸಿತು. ಇದೇ ಸಂದರ್ಭದಲ್ಲಿ ತಮಿಳುನಾಡಿನ ಅಸ್ಮಿತೆ ಮತ್ತು ಗೌರವವನ್ನು ಕಾಪಾಡಿಕೊಳ್ಳಬೇಕು. ತಮಿಳುನಾಡಿನ ಅಭಿವೃದ್ಧಿಗಾಗಿ ಹೊಸ ದೂರದೃಷ್ಟಿ ಮತ್ತು ದಿಕ್ಕು ತೋರಿಸಬೇಕಾಗಿದೆ. ಬಿಜೆಪಿ ತಮಿಳುನಾಡಿಗೆ ಹೊಸ ದಿಕ್ಕು ತೋರಿಸುತ್ತದೆ ಎನ್ನುವುದು ನನಗೆ ಮನವರಿಕೆಯಾಗಿದೆ.

ಪ್ರಶ್ನೆ: ತಮಿಳುನಾಡು ಬಿಜೆಪಿಯಲ್ಲಿ ನಿಮ್ಮ ಪಾತ್ರ ಏನು?

ಉ: ಈ ಬಗ್ಗೆ ನನಗಿನ್ನೂ ಏನೂ ಗೊತ್ತಿಲ್ಲ. ನಾನು ಯಾವುದೇ ಷರತ್ತುಗಳಿಲ್ಲದೇ ಬಿಜೆಪಿ ಸೇರುತ್ತಿದ್ದೇನೆ. ನನಗೆ ನೀಡುವ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತೇನೆ. ಬಹಳ ದೀರ್ಘವಾಗಿ ಆಲೋಚಿಸಿ, ಪಕ್ಷ ಸೇರುವ ನಿರ್ಧಾರವನ್ನು ತೆಗೆದುಕೊಂಡಿದ್ದೇನೆ.

ಪ್ರಶ್ನೆ : ಸಂಘಪರಿವಾರದ ಹಲವು ಯೋಜನೆಗಳನ್ನು ತಮಿಳುನಾಡಿನಲ್ಲಿ ಜಾರಿಗೊಳಿಸುವುದಕ್ಕಾಗಿಯೇ ನಿಮ್ಮನ್ನು ಪಕ್ಷಕ್ಕೆ ಸೇರಿಸಿಕೊಳ್ಳಲಾಗುತ್ತಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಈ ಬಗ್ಗೆ ನಿಮ್ಮನ್ನು ಟ್ವಿಟರ್‌ಗಳಲ್ಲಿ ಟ್ರೋಲ್ ಮಾಡಲಾಗುತ್ತಿದೆ. ಇವೆಲ್ಲ ನಡೆದ ನಂತರ ನೀವು ಬಿಜೆಪಿ ಸೇರುತ್ತಿದ್ದೀರಿ ಎನ್ನಲಾಗುತ್ತಿದೆ. ಈ ಬಗ್ಗೆ ನಿಮ್ಮ ಪ್ರತಿಕ್ರಿಯೆ ಏನು?

ಉ: ನಾನು ಹಲವು ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದೇನೆ. ಹಲವು ದೇವಸ್ಥಾನಗಳಿಗೆ ಹೋಗಿದ್ದೇನೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಅವರ ನಾಯಕತ್ವವನ್ನು ಬಹಳ ಇಷ್ಟಡುತ್ತೇನೆ. ಇಂಥ ವಿಷಯಗಳಲ್ಲಿ ನನ್ನ ಅಭಿಪ್ರಾಯವನ್ನು ಎಂದಿಗೂ ಮರೆಮಾಚಿಲ್ಲ. ಎಲ್ಲವನ್ನೂ ಬಹಿರಂಗವಾಗಿ ಹೇಳಿಕೊಂಡಿದ್ದೇನೆ. ಆದರೆ, ಬಿಜೆಪಿ ಸೇರ್ಪಡೆ ಸ್ವಲ್ಪ ತಡವಾಯಿತಷ್ಟೇ.

ಆರಂಭದಲ್ಲಿ ಒಂದು ವರ್ಷ ಜನರನ್ನು ಯಾವ ರೀತಿಯಲ್ಲಿ (ರಾಜಕೀಯ ಹೊರತುಪಡಿಸಿ) ತಲುಪಬಹುದು ಎಂಬುದರ ಬಗ್ಗೆ ಒಂದಷ್ಟು ಪ್ರಯೋಗ ಮಾಡಿದೆ. ಆದರೆ, ಇನ್ನಷ್ಟು ಪರಿಣಾಮಕಾರಿಯಾಗಿ ಜನರ ಸಮಸ್ಯೆಗೆ ಸ್ಪಂದಿಸಬೇಕು ಎಂದು ಯೋಚಿಸಿದಾಗ, ರಾಜಕೀಯ ಸೇರಲು ನಿರ್ಧರಿಸಿದೆ. ಈಗಾಗಲೇ ಯಾವ ರೀತಿ ಜನ ನನ್ನನ್ನು ಗುರುತಿಸಿದ್ದಾರೋ, ಆ ಅಸ್ಮಿತೆ ಮತ್ತು ನಂಬಿಕೆಯನ್ನು ಉಳಿಸಿಕೊಳ್ಳುವ ವಿಶ್ವಾಸವಿದೆ.

ಪ್ರಶ್ನೆ: ಬಿಜೆಪಿ ತಮಿಳುನಾಡಿನಲ್ಲಿ ಜನಪ್ರಿಯ ಪಕ್ಷವೇನಲ್ಲ. ಹಿಂದಿ ಮತ್ತು ಸಂಸ್ಕೃತ ಭಾಷೆ ಹೇರಿಕೆ ವಿಚಾರ ಸೇರಿದಂತೆ ಹಲವು ವಿಷಯಗಳಲ್ಲಿ ಬಿಜೆಪಿಯನ್ನು ಕಟುವಾಗಿ ಟೀಕಿಸಲಾಗಿದೆ. ನೀವು ಹೇಳುತ್ತಿದ್ದೀರಿ, ರಾಜಕೀಯದ ಮೂಲಕ ಬದಲಾವಣೆ ತರುತ್ತೇನೆ ಎಂದು. ನಿಮಗೆ ಜನ ಬೆಂಬಲವಿಲ್ಲದ ಪಕ್ಷವೊಂದರಿಂದ ಇದೆಲ್ಲ ಸಾಧ್ಯ ಎಂದು ನಿಮಗನ್ನಿಸುತ್ತದೆಯೇ ?

ತಮಿಳುನಾಡಿನ ಜನರಲ್ಲಿ ಬಿಜೆಪಿ ಬಗ್ಗೆ ತಪ್ಪು ಅಭಿಪ್ರಾಯ ಮೂಡಿಸಲಾಗಿದೆ. ಬಿಜೆಪಿ, ತಮಿಳುನಾಡು ಜನರು ಈಗ ಹೇಗೆ ಸ್ವೀಕರಿಸಿದ್ದಾರೆ ಹಾಗಿಲ್ಲ. ನಾನು ಕರ್ನಾಟಕ ಸೇರಿದಂತೆ ಬೇರೆ ಬೇರೆ ರಾಜ್ಯಗಳಲ್ಲಿರುವ ಬಿಜೆಪಿ ಚಟುವಟಿಕೆಗಳನ್ನು ನೋಡಿದ್ದೇನೆ. ಈ ಪಕ್ಷದಲ್ಲಿ ಅಭಿಪ್ರಾಯಗಳನ್ನು ಮುಕ್ತವಾಗಿ ವ್ಯಕ್ತಪಡಿಸಲು ಅವಕಾಶವಿದೆ. ಪ್ರಜಾಪ್ರಭುತ್ವದ ರೀತಿ ನೀತಿಯಡಿ ಪಕ್ಷದ ರಾಜ್ಯ ಘಟಕಗಳ ಕಾರ್ಯಚಟುವಟಿಕೆಗಳು ನಡೆಯುತ್ತಿವೆ. ನನ್ನ ಪ್ರಕಾರ, ತಮಿಳುನಾಡಿನಲ್ಲಿ ಹಿಂದಿ ಭಾಷೆ ವಿಚಾರವನ್ನು ತಪ್ಪಾಗಿ ಅರ್ಥೈಸಲಾಗುತ್ತಿದೆ. ಪಕ್ಷಕ್ಕೆ ಸೇರ್ಪಡೆಗೊಂಡ ಮೇಲೆ, ಖಂಡಿತಾ ಹಿಂದಿ ಭಾಷಾ ವಿಷಯಕ್ಕೆ ಸಂಬಂಧಿಸಿದಂತೆ ನನ್ನ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತೇನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT