ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಮತಾ, ದೇವೇಗೌಡರ ಬಳಿಕ ಕೆಸಿಆರ್‌ಗೆ ಬೆಂಬಲ ವ್ಯಕ್ತಪಡಿಸಿದ ಉದ್ಧವ್ ಠಾಕ್ರೆ

ಫೆ.20ರಂದು ಉಭಯ ನಾಯಕರ ಭೇಟಿ
Last Updated 16 ಫೆಬ್ರುವರಿ 2022, 9:45 IST
ಅಕ್ಷರ ಗಾತ್ರ

ನವದೆಹಲಿ: 2024ರ ಲೋಕಸಭೆ ಚುನಾವಣೆಗೂ ಮುನ್ನ ಬಿಜೆಪಿಯೇತರ ಪಕ್ಷಗಳನ್ನು ಒಟ್ಟುಗೂಡಿಸಲು ಮುಂದಾಗಿರುವ ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್ ಅವರು ಫೆ.20ರಂದು ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರನ್ನು ಭೇಟಿಯಾಗಿ ಚರ್ಚೆ ನಡೆಸಲಿದ್ದಾರೆ.

ಇಂದು ಬೆಳಿಗ್ಗೆ ಚಂದ್ರಶೇಖರ್‌ ರಾವ್‌ ಅವರೊಂದಿಗೆ ದೂರವಾಣಿ ಕರೆ ಮಾಡಿ ಠಾಕ್ರೆ ಮಾತನಾಡಿದ್ದಾರೆ. ಫೆ.20ರಂದು (ಭಾನುವಾರ) ಭೋಜನ ಕೂಟಕ್ಕೆ ಆಹ್ವಾನಿಸಿದ್ದಾರೆ ಎಂದು ಕೆಸಿಆರ್‌ ಕಚೇರಿ ಮೂಲಗಳು ದೃಢಪಡಿಸಿವೆ.

ಇದೇ ವೇಳೆ ‘ನೀವು (ಕೆಸಿಆರ್) ಉತ್ತಮ ಕೆಲಸ ಮಾಡುತ್ತಿದ್ದೀರಿ, ಅದನ್ನು ಮುಂದುವರಿಸಿ. ನಾವು ನಿಮ್ಮೊಂದಿಗಿದ್ದೇವೆ’ ಎಂದು ಠಾಕ್ರೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

‘ರಾಷ್ಟ್ರೀಯ ನಾಯಕತ್ವದಲ್ಲಿ ಬದಲಾವಣೆಯ ಅಗತ್ಯವಿದೆ. ಕೇಂದ್ರದ ಬಿಜೆಪಿ ಸರ್ಕಾರ ಸಹಕಾರಿ ಒಕ್ಕೂಟದ ಹಾದಿಯಲ್ಲಿ ಕೆಲಸ ಮಾಡಲು ವಿಫಲವಾಗಿದೆ. ಜನ ವಿರೋಧ ನೀತಿಗಳ ವಿರುದ್ಧ ಹೋರಾಟ ನಡೆಸುವ ಉದ್ದೇಶದಿಂದ ತೃತೀಯ ರಂಗ ರಚಿಸುವುದು ಅನಿವಾರ್ಯ’ ಎಂದು ಠಾಕ್ರೆ ಹೇಳಿದ್ದಾರೆ.

‘ಒಕ್ಕೂಟದ ವ್ಯವಸ್ಥೆಯನ್ನು ಎತ್ತಿಹಿಡಿಯಲು ಕೆಸಿಆರ್ ಅವರ ಹೋರಾಟಕ್ಕೆ ಸಂಪೂರ್ಣ ಬೆಂಬಲ ನೀಡುತ್ತೇನೆ’ ಎಂದು ಠಾಕ್ರೆ ಭರವಸೆ ನೀಡಿದ್ದಾರೆ.

ಕೋಮುವಾದಿ ಶಕ್ತಿಗಳ ವಿರುದ್ಧದ ಹೋರಾಟಕ್ಕೆ ಕರ್ನಾಟಕದ ಜೆಡಿಎಸ್‌ ಪಕ್ಷದ ನಾಯಕರು ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದ್ದಾರೆ ಎಂದು ಕೆಸಿಆರ್ ಕಚೇರಿ ಮೂ‌ಲಗಳು ತಿಳಿಸಿರುವುದಾಗಿ ಎನ್‌ಡಿಟಿವಿ ವರದಿ ಮಾಡಿದೆ.

ಇತ್ತೀಚಿಗೆ ಸುದ್ದಿಗಾರರೊಂದಿಗೆ ಮಾತನಾಡಿದ್ದ ಕೆಸಿಆರ್, ನಾನು ಪ್ರಧಾನಿಯಾಗಲು ಹೋರಾಡುತ್ತಿಲ್ಲ. ಆದರೆ, ರಾಷ್ಟ್ರಮಟ್ಟದಲ್ಲಿ ಬದಲಾವಣೆ ತರಲು ಹೋರಾಡುತ್ತೇನೆ’ ಎಂದು ಹೇಳುವ ಮೂಲಕ ‘ರಾಷ್ಟೀಯ ನಾಯಕತ್ವ’ ವಹಿಸಿಕೊಳ್ಳಲು ಸಿದ್ಧರಿರುವುದಾಗಿ ಘೋಷಿಸಿದ್ದರು.

ಕೆಸಿಆರ್‌ ಅವರು ಇತ್ತೀಚೆಗೆ ಕೇಂದ್ರ ವಿರೋಧ ಪಕ್ಷಗಳ ನಾಯಕರನ್ನು ಭೇಟಿಯಾಗುವ ಮೂಲಕ ‘ತೃತೀಯ ರಂಗ’ ರಚನೆ ಬಗ್ಗೆ ಊಹಾಪೋಹಗಳನ್ನು ಹುಟ್ಟುಹಾಕಿದ್ದಾರೆ.

2019ರ ಲೋಕಸಭೆ ಚುನಾವಣೆಗೂ ಮುನ್ನ ಕೆಸಿಆರ್‌ ಅವರು, ಕೇರಳ ಸಿಎಂ ಪಿಣರಾಯಿ ವಿಜಯನ್, ಡಿಎಂಕೆ ಮುಖ್ಯಸ್ಥ ಎಂ.ಕೆ. ಸ್ಟಾಲಿನ್ ಮತ್ತು ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ, ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ, ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಸೇರಿದಂತೆ ರಾಷ್ಟ್ರೀಯ ನಾಯಕರನ್ನು ಭೇಟಿ ಮಾಡಿ ಕೇಂದ್ರದಲ್ಲಿ ಬಿಜೆಪಿಯನ್ನು ಅಧಿಕಾರದಿಂದ ದೂರವಿಡಲು ತೃತೀಯ ರಂಗ ರಚಿಸುವಂತೆ ಒತ್ತಾಯಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT