ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿಯ ಇಬ್ಬರು ನಾಯಕರ ವಿರುದ್ಧ ಮಾನನಷ್ಟ ಮೊಕದ್ದಮೆ: ಕೆಸಿಆರ್ ಮಗಳ ತೀರ್ಮಾನ

Last Updated 22 ಆಗಸ್ಟ್ 2022, 12:23 IST
ಅಕ್ಷರ ಗಾತ್ರ

ಹೈದರಾಬಾದ್‌: ದೆಹಯಲಿಯ ಅಬಕಾರಿ ಹಗರಣದಲ್ಲಿ ಭಾಗಿಯಾಗಿದ್ದಾರೆ ಎಂದು ತಮ್ಮ ವಿರುದ್ಧ ಆರೋಪ ಮಾಡಿರುವ ಬಿಜೆಪಿಯ ಇಬ್ಬರು ನಾಯಕರ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸುವುದಾಗಿ ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್‌ ಅವರ ಮಗಳು ಕೆ.ಕವಿತಾ ಸೋಮವಾರ ಹೇಳಿದ್ದಾರೆ.

ಬಿಜೆಪಿ ಸಂಸದ ಪರ್ವೇಶ್ ವರ್ಮಾ ಮತ್ತು ಮಾಜಿ ಶಾಸಕ ಮಂಜಿಂದರ್ ಸಿಂಗ್ ಸಿರ್ಸಾ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲಾಗುವುದು ಎಂದು ತೆಲಂಗಾಣ ವಿಧಾನ ಪರಿಷತ್ ಸದಸ್ಯೆಯೂ ಆಗಿರುವ ಕವಿತಾ ಅವರು ತಿಳಿಸಿದರು.

ತಮ್ಮ ವಿರುದ್ಧ ಆರೋಪಗಳನ್ನು ಮಾಡದಂತೆ ತಡೆಯಾಜ್ಞೆ ತರಲು ನ್ಯಾಯಾಲಯದ ಮೊರೆ ಹೋಗುವುದಾಗಿಯೂ ಅವರು ಹೇಳಿದರು.

ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರನ್ನು ಒಳಗೊಂಡ ಮದ್ಯ ನೀತಿ ಹಗರಣದಲ್ಲಿ ಕವಿತಾ ಅವರು ನಿರ್ಣಾಯಕ ಪಾತ್ರ ವಹಿಸಿದ್ದಾರೆ ಎಂದು ಬಿಜೆಪಿ ನಾಯಕರು ಭಾನುವಾರ ಆರೋಪಿಸಿದ್ದರು. ಈ ಹಿನ್ನೆಲೆಯಲ್ಲಿ ಅವರು ಮಾನನಷ್ಟ ಮೊಕದ್ದಮೆ ಹೂಡುವ ನಿರ್ಧಾರಕ್ಕೆ ಬಂದಿದ್ದಾರೆ.

ದೆಹಲಿಯ ಅಬಕಾರಿ ನೀತಿ ನಿರೂಪಣೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಸಿಸೋಡಿಯಾ ಮತ್ತು ಹೈದರಾಬಾದ್ ಮೂಲದ ಅರುಣ್ ರಾಮಚಂದ್ರನ್ ಪಿಳ್ಳೆ ಸೇರಿದಂತೆ ಹಲವರ ವಿರುದ್ಧ ಕೇಂದ್ರೀಯ ತನಿಖಾ ದಳ (ಸಿಬಿಐ) ಈಗಾಗಲೇ ಪ್ರಕರಣ ದಾಖಲಿಸಿದೆ. ದೆಹಲಿಯ ಹೊಸ ಮದ್ಯ ನೀತಿಯನ್ನು ಜಾರಿಗೊಳಿಸುವಲ್ಲಿ, ಹಣಕಾಸಿನ ಅಕ್ರಮಗಳಲ್ಲಿ ಇವರು ಭಾಗವಹಿಸಿದ್ದರು ಎಂದು ಸಿಬಿಐ ಆರೋಪಿಸಿದೆ.

ಕವಿತಾ ಅವರು ಒಬೆರಾಯ್ ಹೋಟೆಲ್‌ನಲ್ಲಿ ಸಭೆಗಳನ್ನು ನಡೆಸಿದ್ದರು. ದಕ್ಷಿಣ ಭಾರತದಿಂದ ಅವರು ಮದ್ಯದ ದೊರೆಗಳನ್ನು ಕರೆತಂದಿದ್ದರು ಎಂದು ಮಂಜಿಂದರ್ ಸಿಂಗ್ ಸಿರ್ಸಾ ಭಾನುವಾರ ಆರೋಪಿಸಿದ್ದರು.

ಈ ಆರೋಪ ಆಧಾರ ರಹಿತ ಎಂದು ಕವಿತಾ ತಳ್ಳಿಹಾಕಿದ್ದರು. ‘ಬಿಜೆಪಿ ಮತ್ತು ಅದರ ನಾಯಕರು ನನ್ನ ವಿರುದ್ಧ ಮಾಡಿರುವ ಆರೋಪಗಳು ಸಂಪೂರ್ಣ ನಿರಾಧಾರ. ಆರೋಪಗಳು ಖಂಡಿತವಾಗಿಯೂ ಆರೋಪಗಳಾಗಿಯೇ ಉಳಿಯುತ್ತವೆ’ ಎಂದು ಅವರು ಹೇಳಿದ್ದಾರೆ.

’ಬಿಜೆಪಿ ಸರ್ಕಾರವು ಎಲ್ಲಾ ತನಿಖಾ ಸಂಸ್ಥೆಗಳನ್ನು ತನ್ನ ಕೈಯಲ್ಲೇ ಇಟ್ಟುಕೊಂಡಿದೆ. ಅಗತ್ಯವಿರುವ ಯಾವುದೇ ತನಿಖೆಗಳನ್ನು ಅವರು ಮಾಡಬಹುದು. ಅದಕ್ಕೆ ಸಂಪೂರ್ಣವಾಗಿ ಸಹಕರಿಸುತ್ತೇನೆ’ ಎಂದು ಹೇಳಿದರು.

ಆಧಾರ ರಹಿತ ಆರೋಪ ಮಾಡುವ ಮೂಲಕ ಮುಖ್ಯಮಂತ್ರಿ ಕೆಸಿಆರ್ ಕುಟುಂಬದ ಪ್ರತಿಷ್ಠೆಗೆ ಬಿಜೆಪಿ ಮಸಿ ಬಳಿಯಲು ಯತ್ನಿಸುತ್ತಿದೆ ಎಂದು ಕವಿತಾ ಕಿಡಿಕಾರಿದ್ದಾರೆ.

‘ತೆಲಂಗಾಣದ ಮುಖ್ಯಮಂತ್ರಿಯಾಗಿರುವ ಕೆಸಿಆರ್ ಅವರು ಬಿಜೆಪಿ ಸರ್ಕಾರದ ನೀತಿಗಳನ್ನು ಟೀಕಿಸುವಲ್ಲಿ ತುಂಬಾ ತೀಕ್ಷ್ಣವಾಗಿ ಮಾತನಾಡಿದ್ದಾರೆ. ಕೆಸಿಆರ್‌ ಅವರ ತೀಕ್ಷ್ಣ ಟೀಕೆಗೆ ಕಂಗೆಟ್ಟಿರುವ ಬಿಜೆಪಿಯವರು ನಮ್ಮ ಕುಟುಂಬದ ಪ್ರತಿಷ್ಠೆಗೆ ಧಕ್ಕೆ ತರಲು ಯತ್ನಿಸುತ್ತಿದ್ದಾರೆ’ ಎಂದು ಅವರು ತಿಳಿಸಿದರು.

ದೆಹಲಿ ಅಬಕಾರಿ ನೀತಿ ನಿರೂಪಣೆ ಸಭೆಗಳಲ್ಲಿ ಕೆಸಿಆರ್‌ ಕುಟುಂಬ ಸದಸ್ಯರು ಭಾಗಿಯಾಗಿದ್ದರೆಂಬ ಸ್ಫೋಟಕ ಹೇಳಿಕೆಯನ್ನು ಬಿಜೆಪಿ ಸಂಸದ ಪರ್ವೇಶ್ ವರ್ಮಾ ಭಾನುವಾರ ನೀಡಿದ್ದರು.

‘ತೆಲಂಗಾಣ ಸಿಎಂ ಕೆ.ಚಂದ್ರಶೇಖರ ರಾವ್ ಅವರ ಕುಟುಂಬ ಸದಸ್ಯರು ದೆಹಲಿ ಅಬಕಾರಿ ನೀತಿ ರೂಪಿಸುವ ಸಭೆಗಳಲ್ಲಿ ಭಾಗವಹಿಸಿದ್ದರು. ಮನೀಶ್ ಸಿಸೋಡಿಯಾ ಮತ್ತು ಅರವಿಂದ್ ಕೇಜ್ರಿವಾಲ್ ನೇತೃತ್ವದಲ್ಲಿ ನಡೆದಿದ್ದ ಸಭೆಗಳಲ್ಲಿ ಕೆಸಿಆರ್‌ ಕುಟುಂಬ ಸದಸ್ಯರು ಭಾಗಿಯಾಗಿದ್ದರು. ಅವರ ಸಹಾಯದೊಂದಿಗೆ ದೆಹಲಿ ಅಬಕಾರಿ ನೀತಿಯನ್ನು ಸಿದ್ಧಪಡಿಸಲಾಗಿದೆ’ ಎಂದು ವರ್ಮಾ ಆರೋಪಿಸಿದ್ದಾರೆ.

ಇವುಗಳನ್ನೂ ಓದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT