ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯೋಗಿ ಸರ್ಕಾರದ ವಿರುದ್ಧ ವಿಶ್ವಸಂಸ್ಥೆಗೆ ಕಫೀಲ್‌ ಖಾನ್‌ ಪತ್ರ

Last Updated 21 ಸೆಪ್ಟೆಂಬರ್ 2020, 11:22 IST
ಅಕ್ಷರ ಗಾತ್ರ

ಲಖನೌ: ‘ಉತ್ತರ ಪ್ರದೇಶ ಸರ್ಕಾರವು ‘ಭಿನ್ನಾಭಿಪ್ರಾಯದ ಧ್ವನಿ’ಯನ್ನು ಹತ್ತಿಕ್ಕಲು ಕಾನೂನು ಕ್ರಮಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದು, ಹಕ್ಕುಗಳನ್ನು ಉಲ್ಲಂಘಿಸುತ್ತಿದೆ’ ಎಂದು ಆರೋಪಿಸಿ ಇತ್ತೀಚೆಗಷ್ಟೇ ಜೈಲಿನಿಂದ ಬಿಡುಗಡೆ ಆಗಿರುವ ಗೋರಖ್‌‌ಪುರ ಮೂಲದ ವೈದ್ಯಕಫೀಲ್‌ ಖಾನ್‌ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಆಯೋಗಕ್ಕೆ(ಯುಎನ್‌ಎಚ್‌ಆರ್‌ಸಿ) ಪತ್ರ ಬರೆದಿದ್ದಾರೆ.

ಅಲೀಗಡ ಮುಸ್ಲಿಂ ವಿಶ್ವವಿದ್ಯಾಲಯದಲ್ಲಿ(ಎಎಂಯು) ಪೌರತ್ವ (ತಿದ್ದುಪಡಿ) ಕಾಯ್ದೆಯ ಕುರಿತು ಪ್ರಚೋದನಾತ್ಮಕ ಭಾಷಣವನ್ನು ಮಾಡಿದ್ದಾರೆ ಎಂಬ ಆರೋಪದಡಿಕಫೀಲ್‌ ಅವರನ್ನು ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ(ಎನ್‌ಎಸ್‌ಎ) ಮುಂಬೈನಲ್ಲಿ ಕಳೆದ ಜನವರಿಯಲ್ಲಿ ಬಂಧಿಸಲಾಗಿತ್ತು.ಅವರ ಮೇಲಿದ್ದ ಪ್ರಕರಣವನ್ನು ಅಲಹಾಬಾದ್‌ ಹೈಕೋರ್ಟ್‌ ಇತ್ತೀಚೆಗೆ ರದ್ದುಗೊಳಿಸಿತ್ತು.

‘ಸರ್ಕಾರವು ಎನ್‌ಎಸ್‌ಎ, ಅಕ್ರಮ ಚಟುವಟಿಕೆ(ತಡೆ) ಕಾಯ್ದೆ(ಯುಎಪಿಎ) ಮುಂತಾದ ಕಠಿಣ ಕಾನೂನುಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ. ಇದು ಭಾರತದಲ್ಲಿನ ಬಡವರು ಹಾಗೂ ಅಪ್ರಧಾನವಾದ ಸಮುದಾಯಗಳ ಮೇಲೆ ಪರಿಣಾಮ ಬೀರಲಿದೆ’ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

‘ಉತ್ತರ ಪ್ರದೇಶದ ಮಥುರಾ ಜೈಲಿನಲ್ಲಿ ಇದ್ದ ಸಂದರ್ಭದಲ್ಲಿ, ಹಲವು ದಿನಗಳ ಕಾಲ ನನಗೆ ಕುಡಿಯಲು ನೀರು, ಊಟ ನೀಡಿರಲಿಲ್ಲ. ಅಮಾನವೀಯವಾಗಿ ನನ್ನಜೊತೆ ನಡೆದುಕೊಂಡರು. ನಾನಿದ್ದ ಜೈಲಿನಲ್ಲಿ ಕೈದಿಗಳ ಸಂಖ್ಯೆ ಜೈಲಿನ ಸಾಮರ್ಥ್ಯಕ್ಕಿಂತ ಅಧಿಕವಾಗಿತ್ತು’ ಎಂದಿದ್ದಾರೆ.

ಸುಳ್ಳು ಆಪಾದನೆಗಳನ್ನು ಹೊರಿಸಿ ಉತ್ತರ ಪ್ರದೇಶ ಸರ್ಕಾರ ತನ್ನನ್ನು ಮತ್ತೆ ಜೈಲಿಗಟ್ಟಬಹುದು, ಏಕೆಂದರೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಮಗುವಿನಂತೆ ‘ಹಠಮಾರಿ’ ಎಂದು ಕಫೀಲ್‌ ಜೈಲಿನಿಂದ ಬಿಡುಗಡೆ ಆದ ನಂತರ ಹೇಳಿದ್ದರು. ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರ ಸಲಹೆಯಂತೆ ಕಫೀಲ್‌ ಅವರನ್ನು ಕಾಂಗ್ರೆಸ್‌ ಆಡಳಿತ ಇರುವ ರಾಜಸ್ಥಾನಕ್ಕೆ ಸ್ಥಳಾಂತರಿಸಲಾಗಿದೆ. ಪ್ರಿಯಾಂಕಾ ಗಾಂಧಿ ಅವರನ್ನು ಕಫೀಲ್ ಭಾನುವಾರ ಭೇಟಿಯಾಗಿದ್ದಾರೆ ಎಂದು ಮೂಲಗಳು ತಿಳಿಸಿದ್ದು, ಅವರು ಕಾಂಗ್ರೆಸ್‌ ಸೇರ್ಪಡೆಯಾಗಲಿದ್ದಾರೆ ಎನ್ನುವ ಊಹಾಪೋಹಗಳಿಗೆ ಎಡೆಮಾಡಿಕೊಟ್ಟಿದೆ.

ಆಮ್ಲಜನಕದ ಕೊರತೆಯಿಂದಾಗಿ ಗೋರಖ್‌ಪುರದ ವೈದ್ಯಕೀಯ ಕಾಲೇಜಿನಲ್ಲಿ 60 ಮಕ್ಕಳು ಮೃತಪಟ್ಟ ಘಟನೆಯಲ್ಲಿ ಕಫೀಲ್‌ 9 ತಿಂಗಳು ಸೆರೆಮನೆವಾಸ ಅನುಭವಿಸಿ, ಜಾಮೀನಿನ ಮೇಲೆ ಹೊರಬಂದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT