ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಮಿಳುನಾಡು: ರಜನಿ–ಕಮಲ್‌ ಮೈತ್ರಿ?

Last Updated 15 ಡಿಸೆಂಬರ್ 2020, 20:26 IST
ಅಕ್ಷರ ಗಾತ್ರ

ಚೆನ್ನೈ: ದೀರ್ಘ ಕಾಲದ ಗೆಳೆಯ, ತಮಿಳು ನಟ ರಜನಿಕಾಂತ್‌ ಅವರ ಜತೆಗೆ ತಮಿಳುನಾಡಿನ ಒಳಿತಿಗಾಗಿ ಕೈಜೋಡಿಸಲು ಸಿದ್ಧ ಎಂದು ನಟ–ರಾಜಕಾರಣಿ ಕಮಲ್‌ಹಾಸನ್‌ ಅವರು ಮಂಗಳವಾರ ಹೇಳಿದ್ದಾರೆ. ಆದರೆ, ತಮ್ಮ ಸಿದ್ಧಾಂತಗಳು ಹೊಂದಾಣಿಕೆ ಆಗಬೇಕು ಎಂಬ ಷರತ್ತನ್ನೂ ಅವರು ಮುಂದಿಟ್ಟಿದ್ದಾರೆ.

2021ರ ತಮಿಳುನಾಡು ವಿಧಾನಸಭಾ ಚುನಾವಣೆಗೆ ತಮ್ಮ ಪಕ್ಷ ಮಕ್ಕಳ್‌ ನೀದಿ ಮಯ್ಯಂ (ಎಂಎನ್‌ಎಂ) ಪರವಾಗಿ ಕಮಲ್‌ ಅವರು ಪ್ರಚಾರವನ್ನು ಈಗಾಗಲೇ ಆರಂಭಿಸಿದ್ದಾರೆ. ರಜನಿಕಾಂತ್‌ ಅವರು ಮುಂದಿನ ಜನವರಿಯಲ್ಲಿ ಪಕ್ಷವನ್ನು ಆರಂಭಿಸುವ ಸುಳಿವು ನೀಡಿದ್ದಾರೆ. 1967ರಿಂದಲೇ ಡಿಎಂಕೆ ಮತ್ತು ಎಐಎಡಿಎಂಕೆ ಪರ್ಯಾಯವಾಗಿ ಅಧಿಕಾರಕ್ಕೆ ಬರುತ್ತಿರುವ ತಮಿಳು ನಾಡಿನ ರಾಜಕಾರಣದಲ್ಲಿ ಭಾರಿ ಬದಲಾವಣೆ ತರುವುದು ತಮ್ಮ ಉದ್ದೇಶ ಎಂದು ಇಬ್ಬರೂ ನಾಯಕರು ಹೇಳಿಕೊಂಡಿದ್ದಾರೆ.

ಈ ಇಬ್ಬರೂ ಜತೆಯಾಗಬಹುದು ಎಂಬ ವದಂತಿ ಅವರು ರಾಜಕೀಯಕ್ಕೆ ಬರುವುದಾಗಿ ಹೇಳಿ ದಾಗಿನಿಂದಲೂ ಇದೆ. ಮುಂದಿನ ವರ್ಷ ಪಕ್ಷ ಸ್ಥಾಪಿಸುವುದಾಗಿ ರಜನಿ ಹೇಳುವುದರೊಂದಿಗೆ ಈ ವದಂತಿ ರೆಕ್ಕೆಪುಕ್ಕ ಪಡೆದುಕೊಂಡಿದೆ. ರಜನಿ ಅವರು ಮುಖ್ಯಮಂತ್ರಿ ಅಭ್ಯರ್ಥಿ ಅಲ್ಲ ಎಂದು ಅವರ ಆಪ್ತರು ಹೇಳಿರುವುದು ಈ ವದಂತಿಗೆ ಮತ್ತಷ್ಟು ಪುಷ್ಟಿ ನೀಡಿದೆ.

ಇಬ್ಬರು ನಾಯಕರ ನಡುವೆ ಮೈತ್ರಿ ಏರ್ಪಡಬೇಕು ಎಂದು ಅವರ ಹಿತೈಷಿ ಗಳು ಮತ್ತು ಗೆಳೆಯರು ಪ್ರಯತ್ನಿಸುತ್ತಿದ್ದಾರೆ. ಆದರೆ, ಈ ದಿಸೆಯಲ್ಲಿ ದೃಢ ಕ್ರಮಗಳನ್ನು ಇಬ್ಬರೂ ಕೈಗೊಂಡಿಲ್ಲ.

ಕಮಲ್‌ ಹಾಸನ್‌ ಸ್ಪರ್ಧೆ ಸಾಧ್ಯತೆ
ಚೆನ್ನೈ: ಕಮಲ್‌ ಅವರು ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಸಾಧ್ಯತೆ ಇದೆ ಎಂದು ಎಂಎನ್‌ಎಂ ಮುಖಂಡರು ಸುಳಿವು ನೀಡಿದ್ದಾರೆ. ಚೆನ್ನೈನ ವೆಲಚೇರಿ ಕ್ಷೇತ್ರದಲ್ಲಿ ಅವರು ಅದೃಷ್ಟ ಪರೀಕ್ಷೆಗೆ ಇಳಿಯಬಹುದು ಎನ್ನಲಾಗಿದೆ.

2011ರ ಕ್ಷೇತ್ರ ಪುನರ್‌ವಿಂಗಡಣೆ ಬಳಿಕ ವೆಲಚೇರಿ ಕ್ಷೇತ್ರವು ಅಸ್ತಿತ್ವಕ್ಕೆ ಬಂದಿದೆ. ಇಲ್ಲಿ ಸುಮಾರು ಮೂರು ಲಕ್ಷ ಮತದಾರರಿದ್ದಾರೆ. ಮಾಹಿತಿ ತಂತ್ರಜ್ಞಾನ ವೃತ್ತಿಪರರು, ಮಧ್ಯಮ ವರ್ಗದವರು ಮತ್ತು ಸರ್ಕಾರದ ನಿವೃತ್ತ ನೌಕರರು ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಕಮಲ್ ಅವರ ನೀತಿಗಳು ಹಾಗೂ ವೈಯಕ್ತಿಕ ವರ್ಚಸ್ಸು ಇವರನ್ನು ಸೆಳೆಯಬಹುದು ಎಂದು ಪಕ್ಷವು ಅಂದಾಜಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT