ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಫ್‌ಐಆರ್‌ ರದ್ದುಗೊಳಿಸಲು ಹೈಕೋರ್ಟ್‌ ಮೆಟ್ಟಿಲೇರಿದ ಕಂಗನಾ

Last Updated 23 ನವೆಂಬರ್ 2020, 14:14 IST
ಅಕ್ಷರ ಗಾತ್ರ

ಮುಂಬೈ: ಸಾಮಾಜಿಕ ಜಾಲತಾಣಗಳಲ್ಲಿ ಅನುಚಿತ ಹೇಳಿಕೆಗಳನ್ನು ಪೋಸ್ಟ್‌ ಮಾಡುವ ಮುಖಾಂತರ ದ್ವೇಷ ಹಾಗೂ ಕೋಮುಗಲಭೆ ಸೃಷ್ಟಿಸಲು ಪ್ರಯತ್ನಿಸಿದ್ದಾರೆ ಎಂದು ಆರೋಪಿಸಿ ಮುಂಬೈ ಪೊಲೀಸರು ದಾಖಲಿಸಿರುವ ಎಫ್‌ಐಆರ್‌ ರದ್ದುಗೊಳಿಸಲು ಕೋರಿ, ನಟಿ ಕಂಗನಾ ರನೌತ್‌ ಹಾಗೂ ಅವರ ಸಹೋದರಿ ರಂಗೋಲಿ ಚಂಡೇಲ್‌ ಅವರು ಬಾಂಬೆ ಹೈಕೋರ್ಟ್‌ನಲ್ಲಿ ಸೋಮವಾರ ಅರ್ಜಿ ಸಲ್ಲಿಸಿದ್ದಾರೆ.

ರನೌತ್‌ ಹಾಗೂ ರಂಗೋಲಿ ಅವರ ವಿರುದ್ಧ ಮುನ್ನಾವಾರ್ಲಿ ಸಯೈದ್‌ ಎಂಬುವವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ್ದ ಬಾಂದ್ರಾ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯವು, ತನಿಖೆ ನಡೆಸಲು ಪೊಲೀಸರಿಗೆ ಆದೇಶಿಸಿತ್ತು. ಇದರ ಬೆನ್ನಲ್ಲೇ ದೇಶದ್ರೋಹ ಪ್ರಕರಣದಡಿ ಪೊಲೀಸರು ಎಫ್‌ಐಆರ್‌ ದಾಖಲಿಸಿಕೊಂಡಿದ್ದಾರೆ. ‘ಎಫ್‌ಐಆರ್‌ ಹಾಗೂ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯದ ಆದೇಶವನ್ನು ರದ್ದುಗೊಳಿಸಲು ಮತ್ತು ವಿಚಾರಣೆಗೆ ಹಾಜರಾಗಲು ಪೊಲೀಸರು ನೀಡಿರುವ ಸಮನ್ಸ್‌ಗೆ ತಡೆ ಕೋರಿ ಕಂಗನಾ ಹಾಗೂ ರಂಗೋಲಿ ಅವರು ಅರ್ಜಿ ಸಲ್ಲಿಸಿದ್ದಾರೆ’ ಎಂದು ಅವರ ಪರ ವಕೀಲ ರಿಜ್ವಾನ್‌ ಸಿದ್ದಿಖಿ ತಿಳಿಸಿದರು.

ನ.23 ಮತ್ತು 24ರಂದು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿ ಕಳೆದ ವಾರ ಮೂರನೇ ಬಾರಿ ಮುಂಬೈ ಪೊಲೀಸರು ಸಮನ್ಸ್‌ ನೀಡಿದ್ದರು. ‘ನಟ ಸುಶಾಂತ್‌ ಸಿಂಗ್‌ ರಜಪೂತ್‌ ಸಾವಿನ ಪ್ರಕರಣ, ಮಹಾರಾಷ್ಟ್ರದ ಪಾಲ್ಗರ್‌ ಜಿಲ್ಲೆಯಲ್ಲಿ ಇಬ್ಬರು ಸಾಧುಗಳ ಹತ್ಯೆ ಕುರಿತು ಹಾಗೂ ಮುಂಬೈ ಅನ್ನು ಪಾಕಿಸ್ತಾನ ಆಕ್ರಮಿತ ಕಾಶ್ಮೀರಕ್ಕೆ ಹೋಲಿಸಿ ಕಂಗನಾ ಹಾಗೂ ರಂಗೋಲಿ ಅವರು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದ್ದ ಪೋಸ್ಟ್‌ಗಳನ್ನು ಸೈಯದ್ ದೂರಿನಲ್ಲಿ ಉಲ್ಲೇಖಿಸಿದ್ದರು. ‘ಇಂಥ ಪೋಸ್ಟ್‌ಗಳನ್ನು ಹಾಕುವುದರ ಹಿಂದಿನ ಉದ್ದೇಶದ ಕುರಿತು ತನಿಖೆ ನಡೆಯಬೇಕು. ಇಂಥ ಹೇಳಿಕೆಗಳಿಂದ ಕೋಮುಗಲಭೆ ಸೃಷ್ಟಿಯಾಗುತ್ತದೆ’ ಎಂದು ಸೈಯದ್‌ ಆರೋಪಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT