ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನಧಿಕೃತ ಮಾಧ್ಯಮ ನ್ಯಾಯಾಲಯ ಆರೋಗ್ಯಕರ ಪ್ರಜಾಪ್ರಭತ್ವಕ್ಕೆ ಹಾನಿಕಾರಕ: ಸಿಜೆಐ

Last Updated 23 ಜುಲೈ 2022, 9:30 IST
ಅಕ್ಷರ ಗಾತ್ರ

ರಾಂಚಿ: ನಿರ್ದಿಷ್ಟ ಅಜೆಂಡಾದೊಂದಿಗೆ ಮಾಧ್ಯಮಗಳು ಚರ್ಚೆ ಹೆಸರಲ್ಲಿ ನಡೆಸುತ್ತಿರುವ ವಿಚಾರಣೆಯ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಎನ್.ವಿ. ರಮಣ, ಇಂತಹ ಅನಧಿಕೃತ ಮಾಧ್ಯಮ ನ್ಯಾಯಾಲಯಗಳು (ಕಾಂಗರೂ ಕೋರ್ಟ್) ಆರೋಗ್ಯಕರ ಪ್ರಜಾಪ್ರಭತ್ವ ವ್ಯವಸ್ಥೆಗೆ ಹಾನಿಕಾರಕವಾಗಿದೆ ಎಂದು ಶನಿವಾರ ಹೇಳಿದ್ದಾರೆ.

ನ್ಯಾಯಮೂರ್ತಿ ಎಸ್.ಬಿ. ಸಿನ್ಹಾ ಸ್ಮರಣಾರ್ಥ ರಾಂಚಿಯ ನ್ಯಾಷನಲ್ ಯೂನಿವರ್ಸಿಟಿ ಆಫ್ ಸ್ಟಡಿ ಆ್ಯಂಡ್ ರಿಸರ್ಚ್ ಇನ್ ಲಾ ಆಯೋಜಿಸಿದ್ದ 'ನ್ಯಾಯಾಧೀಶರ ಜೀವನ' ಕುರಿತು ಉಪನ್ಯಾಸ ಉದ್ಘಾಟಿಸಿ ಮಾತನಾಡಿದ ಸಿಜೆಐ ರಮಣ, ಅನಧಿಕೃತ ಮಾಧ್ಯಮ ವಿಚಾರಣೆಯು ನ್ಯಾಯಾಂಗದ ನ್ಯಾಯಯುತ ಕಾರ್ಯನಿರ್ವಹಣೆ ಹಾಗೂ ನ್ಯಾಯಾಲಯಗಳ ಸ್ವಾತಂತ್ರ್ಯಕ್ಕೆ ಅಡ್ಡಿಯಾಗುತ್ತಿದೆ ಎಂದು ಹೇಳಿದ್ದಾರೆ.

ಪ್ರಕರಣಗಳಲ್ಲಿ ತೀರ್ಪು ಕಲ್ಪಿಸಲು ಮಾಧ್ಯಮ ವಿಚಾರಣೆಗಳು ಮಾನದಂಡವಾಗಬಾರದು. ಮಾಧ್ಯಮಗಳು ಕಾಂಗರೂ ನ್ಯಾಯಾಲಯವನ್ನು ನಡೆಸುವುದರಿಂದ ಅನುಭವಿ ನ್ಯಾಯಾಧೀಶರು ಸಹ ತೀರ್ಪು ನಿರ್ಧರಿಸಲು ಸಮಸ್ಯೆಯನ್ನು ಎದುರಿಸುತ್ತಾರೆ. ನಿರ್ದಿಷ್ಟ ಅಜೆಂಡಾದೊಂದಿಗಿನ ಮಾಧ್ಯಮ ಚರ್ಚೆಗಳು ಆರೋಗ್ಯಕರ ಪ್ರಜಾಪ್ರಭುತ್ವಕ್ಕೆ ಹಾನಿಕಾರಕ ಎಂದು ಹೇಳಿದರು.

ಪಕ್ಷಪಾತದಿಂದ ಕೂಡಿದ ಮಾಧ್ಯಮಗಳ ದೃಷ್ಟಿಕೋನವು ಜನರ ಮೇಲೆ ಪರಿಣಾಮ ಬೀರುತ್ತವೆ. ಇದರಿಂದ ಪ್ರಜಾಪ್ರಭುತ್ವ ದುರ್ಬಲಗೊಳ್ಳುತ್ತದೆ. ಅಲ್ಲದೆ ನ್ಯಾಯಾಂಗ ವ್ಯವಸ್ಥೆಗೆ ಹಾನಿಯನ್ನುಂಟು ಮಾಡುತ್ತದೆ. ಈ ಪ್ರಕ್ರಿಯೆ ತೀರ್ಪಿನ ಮೇಲೂ ಅಡ್ಡ ಪರಿಣಾಮ ಬೀರುತ್ತದೆ. ಮಾಧ್ಯಮಗಳು ಜವಾಬ್ದಾರಿ ಮೀರುವ ಹಾಗೂ ಉಲ್ಲಂಘಿಸುವ ಮೂಲಕ ಪ್ರಜಾಪ್ರಭುತ್ವ ಎರಡು ಹೆಜ್ಜೆ ಹಿಂದಕ್ಕೆ ಹೋಗುತ್ತದೆ ಎಂದು ಕಳವಳ ವ್ಯಕ್ತಪಡಿಸಿದರು.

ಪ್ರಿಂಟ್ ಮಾಧ್ಯಮವು ಅಲ್ಪ ಮಟ್ಟಿಗೆ ಹೊಣೆಗಾರಿಕೆಯನ್ನು ಹೊಂದಿದೆ. ಆದರೆ ಎಲೆಕ್ಟ್ರಾನಿಕ್ ಮಾಧ್ಯಮವು ಕಿಂಚಿತ್ತೂ ಜವಾಬ್ದಾರಿಯನ್ನು ಹೊಂದಿಲ್ಲ. ಕೆಲವೊಮ್ಮೆ ಸಾಮಾಜಿಕ ಮಾಧ್ಯಮಗಳಲ್ಲಿ ನ್ಯಾಯಾಧೀಶರ ವಿರುದ್ಧ ಸಂಘಟಿತ ಅಭಿಯಾನ ನಡೆಯುತ್ತದೆ ಎಂದು ಹೇಳಿದರು.

ಮಾಧ್ಯಮಗಳಿಂದ ಆಗಾಗ್ಗೆ ಉಂಟಾಗುತ್ತಿರುವ ಉಲ್ಲಂಘನೆ ಹಾಗೂ ಅಶಾಂತಿಯಿಂದ ಮಾಧ್ಯಮಗಳ ಮೇಲೂ ಕಠಿಣ ನಿಯಮಗಳ ಹೇರಿಕೆಗೆ ಬೇಡಿಕೆ ಹೆಚ್ಚಾಗುತ್ತಿದೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT