ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಸರಗೋಡಿನ ಕನ್ನಡ ಗ್ರಾಮಗಳ ಹೆಸರು ಬದಲಾವಣೆ ಇಲ್ಲ: ಮಂಜೇಶ್ವರ ಶಾಸಕ ಅಶ್ರಫ್

ಅಕ್ಷರ ಗಾತ್ರ

ಕಾಸರಗೋಡು: ಕಾಸರಗೋಡು ಮತ್ತು ಮಂಜೇಶ್ವರದಲ್ಲಿ ಕನ್ನಡ ಹೆಸರು ಹೊಂದಿರುವ ಕೆಲವು ಗ್ರಾಮಗಳ ಹೆಸರುಗಳನ್ನು ಮಲಯಾಳೀಕರಣಗೊಳಿಸುವಂತೆ ಕೇರಳ ಸರ್ಕಾರ ಆದೇಶಿಸಿಲ್ಲ ಎಂದು ಮಂಜೇಶ್ವರ ಶಾಸಕ ಎ.ಕೆ.ಎಂ.ಅಶ್ರಫ್ ಸ್ಪಷ್ಟನೆ ನೀಡಿದ್ದಾರೆ.

ಕನ್ನಡ ಗ್ರಾಮಗಳ ಹೆಸರು ಬದಲಾಯಿಸಲಾಗುತ್ತಿದೆ ಎಂಬ ವಿಚಾರ ವ್ಯಾಪಕ ಚರ್ಚೆಗೆ ಗ್ರಾಸವಾಗಿರುವ ಬೆನ್ನಲ್ಲೇ ಈ ಕುರಿತು ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ ಶಾಸಕರು ಸ್ಪಷ್ಟನೆ ನೀಡಿದ್ದಾರೆ.

‘ಕೇರಳ ಮುಖ್ಯ ಮಂತ್ರಿ ಕಚೇರಿ, ಮುಖ್ಯಮಂತ್ರಿಗಳ ಆಪ್ತ ಸಹಾಯಕ ಮತ್ತು ಕಾಸರಗೋಡು ಜಿಲ್ಲಾಧಿಕಾರಿಗಳನ್ನು ದೂರವಾಣಿ ಮೂಲಕ ಸಂಪರ್ಕಿಸಿ ಮಾಹಿತಿ ಪಡೆಯಲಾಗಿದೆ. ಹೆಸರು ಬದಲಾವಣೆಗೆ ಸಂಬಂಧಿಸಿದ ಯಾವುದೇ ಸುತ್ತೋಲೆ ಕೇರಳ ಸರ್ಕಾರ ಹೊರಡಿಸಿಲ್ಲ. ಅಂತಹ ಯೋಚನೆಯು ಸರ್ಕಾರದ ಮುಂದಿಲ್ಲ. ಆದರೆ ಪಡಿತರ ಕಾರ್ಡ್‌ಗಳಲ್ಲಿ ಸಾಫ್ಟ್‌ವೇರ್ ಕಾರಣದಿಂದ ಕೆಲವು ಹೆಸರುಗಳಲ್ಲಿ ಬದಲಾವಣೆ ಆಗಿರುವುದು ಸತ್ಯ. ಆದರೆ ಇದು ತಾಂತ್ರಿಕ ಕಾರಣದಿಂದ ಉಂಟಾದ ಲೋಪ. ಇದನ್ನು ಸರಿಪಡಿಸಲು ತುರ್ತು ಕ್ರಮ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ’ ಎಂದು ಅಶ್ರಫ್‌ ಫೇಸ್‌ಬುಕ್‌ ಸಂದೇಶದಲ್ಲಿ ಉಲ್ಲೇಖಿಸಿದ್ದಾರೆ.

‘ಕೇರಳ ವಿಧಾನ ಸಭೆಯಲ್ಲಿ ಮಂಜೇಶ್ವರದ ಶಾಸಕನೆಂಬ ನೆಲೆಯಲ್ಲಿ ಕೆಲವು ವಿಚಾರಗಳನ್ನು ನಿಮ್ಮ ಮುಂದಿಡುತ್ತೇನೆ. ಕಳೆದ ಕೆಲವು ದಿನಗಳಿಂದ ಕಾಸರಗೋಡು ಜಿಲ್ಲೆಯ ವಿವಿಧ ಪ್ರದೇಶಗಳ ಹೆಸರುಗಳನ್ನು ಬದಲಾಯಿಸಲಾಗಿದೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಕರ್ನಾಟಕದ ಮಾಜಿ ಮುಖ್ಯಮಂತ್ರಿ, ಕೇಂದ್ರ ಸಚಿವರು ಈ ವಿಚಾರದಲ್ಲಿ ಟ್ಟೀಟ್ ಮಾಡುವ ಮೂಲಕ ಚರ್ಚೆ ಮಹತ್ವ ಪಡೆದುಕೊಂಡಿದೆ. ಕರ್ನಾಟಕದ ಗಡಿ ಅಭಿವೃದ್ಧಿ ಪ್ರಾಧಿಕಾರವು ಈ ವಿಚಾರದಲ್ಲಿ ಮನವಿಯನ್ನು ನೀಡಿರುವುದು ಈ ಎಲ್ಲಾ ಚರ್ಚೆಗೆ ಕಾರಣವಾಯಿತು’ ಎಂದು ಅವರು ಹೇಳಿದ್ದಾರೆ.

‘ಅಧಿಕೃತವಾಗಿ ಯಾವುದೇ ಸುತ್ತೋಲೆ ಇಲ್ಲದೆ ಕೇವಲ ಸಾಮಾಜಿಕ ಜಾಲತಾಣದಲ್ಲಿ ಬರುವ ಸುದ್ದಿಗಳ ಆಧಾರದಲ್ಲಿ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮಾಡಿರುವ ಟ್ವೀಟ್, ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು ನೀಡಿದ ಹೇಳಿಕೆ ಜನರಲ್ಲಿ ಗೊಂದಲ ಉಂಟುಮಾಡಿದೆ. ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು ನೀಡಿದ ಅನಗತ್ಯ ಹೇಳಿಕೆಯು ವಿಷಾದನೀಯ. ಭಾಷಾ ಅಲ್ಪಸಂಖ್ಯಾತ ಕನ್ನಡಿಗರ ಪರವಾಗಿ ಕೆಲವು ಪೂರಕ ಕ್ರಮಗಳನ್ನು ಕೇರಳದಲ್ಲಿ ಎಲ್ಲಾ ಸರ್ಕಾರಗಳು ಕೈಗೊಂಡಿವೆ. ಭಾಷಾ ಅಲ್ಪಸಂಖ್ಯಾತರಿಗೆ ಸಮಸ್ಯೆ ಆಗುವ ವಿಚಾರಗಳನ್ನು ಸರ್ಕಾರದ ಗಮನಕ್ಕೆ ತರಲಾಗಿದೆ. ಈ ಬಗ್ಗೆ ಸರ್ಕಾರ ಧನಾತ್ಮಕವಾಗಿ ಸ್ಪಂದಿಸುವ ವಾತಾವರಣ ಕೇರಳದಲ್ಲಿದೆ. ಪರಿಹಾರವಾಗಬೇಕಾದ ಸಮಸ್ಯೆಗಳು ಇನ್ನೂ ಇರುವುದು ವಾಸ್ತವ. ಇದನ್ನು ಸಂಘಟಿತ ಪ್ರಯತ್ನದಿಂದ ಪರಿಹರಿಸಲು ಸಾಧ್ಯವಾಗುವ ವಾತಾವರಣ ನಿರ್ಮಾಣವಾಗಬೇಕು. ನಾಡಿನ ಭಾಷಾ ಸಾಮರಸ್ಯವನ್ನು, ಸಾಂಸ್ಕೃತಿಕ ವೈವಿಧ್ಯತೆಯನ್ನು ಉಳಿಸಿ ಬೆಳೆಸುವಲ್ಲಿ ಯಾವುದೇ ಗೊಂದಲ ಸೃಷ್ಟಿಯಾಗಬಾರದು’ ಎಂದು ಅವರು ಬರೆದಿದ್ದಾರೆ.

‘ಮಂಜೇಶ್ವರದ ಶಾಸಕ ಹಾಗೂ ಒಬ್ಬ ಅಪ್ಪಟ ಕನ್ನಡಿಗನೆಂಬ ನೆಲೆಯಲ್ಲಿ ಕಾಸರಗೋಡಿನ ಯಾವುದೇ ಪ್ರದೇಶದ ಸ್ಥಳನಾಮವನ್ನು ಬದಲಾಯಿಸುವ ಷಡ್ಯಂತ್ರವೋ, ಸರ್ಕಾರದ ಅದೇಶವೆನಾದರೂ ಬಂದರೆ ಆದರ ವಿರುದ್ದದ ಹೋರಾಟಕ್ಕೆ ನೇತೃತ್ವ ನೀಡಲು ನಾನು ಸಿದ್ಧ. ಕನ್ನಡ ಅಲ್ಪಸಂಖ್ಯಾತರ ಸಂವಿಧಾನ ಬದ್ಧ ಹಕ್ಕುಗಳ ಸಂರಕ್ಷಣೆಯಲ್ಲಿ ಸದಾ ಜಾಗೃತನಾಗಿರುತ್ತೇನೆ’ ಎಂದೂ ಅಶ್ರಫ್ ಅವರು ಭರವಸೆ ನೀಡಿದ್ದಾರೆ.

ಕಾಸರಗೋಡಿನ ಕನ್ನಡ ಗ್ರಾಮಗಳ ಹೆಸರು ಬದಲಾವಣೆ ವಿಚಾರ ಕಳೆದ ಕೆಲವು ದಿನಗಳಿಂದ ಸುದ್ದಿಯಲ್ಲಿದ್ದು, ಇದಕ್ಕೆ ಮೈಸೂರು–ಕೊಡಗು ಸಂಸದ ಪ್ರತಾಪ್ ಸಿಂಹ, ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿ, ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಆಕ್ಷೇಪ ವ್ಯಕ್ತಪಡಿಸಿದ್ದರು. ಕನ್ನಡ ಮತ್ತು ಸಂಸ್ಕೃತಿ ಸಚಿವ ಅರವಿಂದ ಲಿಂಬಾವಳಿ ಕೂಡ ಈ ಬಗ್ಗೆ ಕ್ರಮವಹಿಸುವಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಪತ್ರ ಬರೆದು ಮನವಿ ಮಾಡಿದ್ದರು.

ಇದರ ಬೆನ್ನಲ್ಲೇ, ಮುಖ್ಯಮಂತ್ರಿ ಅವರನ್ನು ಸೋಮವಾರ ಭೇಟಿ ಮಾಡಿದ್ದ ಕರ್ನಾಟಕ ಪ್ರದೇಶ ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಿ. ಸೋಮಶೇಖರ, ಮಲಯಾಳ ಭಾಷೆಯ ಆಧಾರದ ಹೆಸರುಗಳನ್ನಾಗಿ ಬದಲಾಯಿಸಲಾಗುತ್ತಿದೆ ಎಂಬ ಬಗ್ಗೆ ಗಮನಕ್ಕೆ ತಂದಿದ್ದರು. ಇದರ ಆಧಾರದಲ್ಲಿ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಪತ್ರವನ್ನೂ ಬರೆದಿದ್ದಾರೆ.

ಇನ್ನಷ್ಟು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT