ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾನ್ಪುರ ಹಿಂಸಾಚಾರದ ಸಂಚುಕೋರ ಸೇರಿ 24 ಜನರ ಬಂಧನ; ಪಿಎಫ್‌ಐ ನಂಟಿನ ಬಗ್ಗೆ ತನಿಖೆ

ಅಕ್ಷರ ಗಾತ್ರ

ಕಾನ್ಪುರ/ಲಖನೌ: ಉತ್ತರಪ್ರದೇಶದ ಕಾನ್ಪುರದಲ್ಲಿ ನಡೆದ ಕೋಮುಸಂಘರ್ಷದ ಹಿಂದಿನ ಪ್ರಮುಖ ಸಂಚುಕೋರ ಹಯಾತ್ ಜಫರ್ ಹಶ್ಮಿ ಎಂಬಾತನನ್ನು ಲಖನೌದಲ್ಲಿನ ಆತನ ಯುಟ್ಯೂಬ್ ಚಾನೆಲ್‌ನ ಕಚೇರಿಯಲ್ಲಿ ಶನಿವಾರ ಪೊಲೀಸರು ಬಂಧಿಸಿದ್ದಾರೆ.

‘ಬಿಜೆಪಿ ವಕ್ತಾರೆ ನೂಪುರ್ ಶರ್ಮಾ ಇಸ್ಲಾಂ ಧರ್ಮದ ಬಗ್ಗೆ ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡಿರುವುದನ್ನು ವಿರೋಧಿಸಿ ಕಾನ್ಪುರ ಬಂದ್‌ಗೆ ಕರೆ ನೀಡಿದ್ದ ಹಶ್ಮಿ, ಹಿಂಸಾಚಾರದ ನಂತರ ಓಡಿಹೋಗಿ ಲಖನೌದಲ್ಲಿ ತಲೆಮರೆಸಿಕೊಂಡಿದ್ದ. ಆತನ ಜತೆಗೆ ಇನ್ನೂ 24 ಮಂದಿಯನ್ನು ಬಂಧಿಸಲಾಗಿದೆ. ಸಾವಿರಕ್ಕೂ ಹೆಚ್ಚಿನ ಜನರ ವಿರುದ್ಧ ಪ್ರಕರಣ ದಾಖಲಾಗಿದೆ’ ಎಂದು ಕಾನ್ಪುರ ಪೊಲೀಸ್ ಆಯುಕ್ತ ವಿಜಯ್ ಸಿಂಗ್ ಮೀನಾ ತಿಳಿಸಿದ್ದಾರೆ.

‘ಹಿಂಸಾಚಾರವನ್ನು ಪ್ರಚೋದಿಸಲು ಹಶ್ಮಿ ಸಂಚು ರೂಪಿಸಿದ್ದ. ಬಿಜೆಪಿ ವಕ್ತಾರೆಯ ಹೇಳಿಕೆ ವಿರೋಧಿಸಿ ಮಣಿಪುರ ಮತ್ತು ಪಶ್ಚಿಮ ಬಂಗಾಳದಲ್ಲಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಬಂದ್‌ಗೆ ಕರೆ ನೀಡಿತ್ತು. ಹಾಗಾಗಿ, ಈ ಸಂಘಟನೆಯ ಜೊತೆಗೆ ಹಶ್ಮಿಯ ಸಂಪರ್ಕ ಇರುವ ಸಾಧ್ಯತೆ ಕುರಿತು ತನಿಖೆ ನಡೆಸಲಾಗುತ್ತಿದೆ.ವಿವಾದಾತ್ಮಕ ಪೌರತ್ವ ತಿದ್ದುಪಡಿ ಕಾಯ್ದೆಯ ನಂತರ ಕಾನ್ಪುರದಲ್ಲಿ ನಡೆದ ಹಿಂಸಾಚಾರದಲ್ಲಿ ಪಿಎಫ್‌ಐನ ಕೈವಾಡವೂ ಕಂಡುಬಂದಿತ್ತು’ ಎಂದು ಅವರು ಮಾಹಿತಿ ನೀಡಿದ್ದಾರೆ.

‘ಹಶ್ಮಿ ಸಾಮಾಜಿಕ ಮಾಧ್ಯಮವೊಂದರಲ್ಲಿ ಮೌಲಾನಾ ಮೊಹಮ್ಮದ್ ಅಲಿ ಜೌಹರ್ (ಎಂಎಂಎ) ಅಭಿಮಾನಿಗಳ ಸಂಘದ ಮುಖ್ಯಸ್ಥನಾಗಿದ್ದಾನೆ. ತನ್ನ ಫೇಸ್‌ಬುಕ್ ಖಾತೆಯಲ್ಲಿ ಪೋಸ್ಟ್‌ಗಳ ಮೂಲಕ ಜನರನ್ನು ತಮ್ಮ ಅಂಗಡಿಗಳು ಮತ್ತು ವ್ಯಾಪಾರಿ ಕೇಂದ್ರಗಳನ್ನು ಮುಚ್ಚುವಂತೆ ಪ್ರಚೋದನೆ ನೀಡುತ್ತಿದ್ದ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

‘ರಾಷ್ಟ್ರಪತಿ ರಾಮನಾಥ ಕೋವಿಂದ್ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರು ಕಾನ್ಪುರ ಗ್ರಾಮಾಂತರ ಜಿಲ್ಲೆಗೆ ಭೇಟಿ ನೀಡಿದ ದಿನದಂದೇ ಕಾನ್ಪುರ ಪಟ್ಟಣದಲ್ಲಿ ಹಿಂಸಾಚಾರ ನಡೆದಿದೆ. ಈ ಸಂಬಂಧ 50ಕ್ಕೂ ಹೆಚ್ಚು ಜನರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ’ ಎಂದೂ ಪೊಲೀಸರು ತಿಳಿಸಿದ್ದಾರೆ.

‘ಹಿಂಸಾಚಾರದಲ್ಲಿ ತೊಡಗಿದ್ದವರ ಆಸ್ತಿ ಮುಟ್ಟುಗೋಲು’
‘ಕಾನ್ಪುರದ ಹಿಂಸಾಚಾರದಲ್ಲಿ ತೊಡಗಿದ್ದವರ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುವುದು ಅಥವಾ ನೆಲಸಮ ಮಾಡಲಾಗುವುದು’ ಎಂದು ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕ (ಕಾನೂನು ಮತ್ತು ಸುವ್ಯವಸ್ಥೆ) ಪ್ರಶಾಂತ್ ಕುಮಾರ್ ತಿಳಿಸಿದ್ದಾರೆ.

‘ನಾವು ಸಿಸಿ ಟಿವಿಯ ದೃಶ್ಯಾವಳಿಗಳು ಮತ್ತು ಘಟನೆಗಳ ಇತರ ವಿಡಿಯೊ ರೆಕಾರ್ಡಿಂಗ್‌ಗಳ ಸಹಾಯದಿಂದ ಹಿಂಸಾಚಾರದಲ್ಲಿ ಭಾಗಿಯಾಗಿರುವ 36 ಜನರನ್ನು ಗುರುತಿಸಿದ್ದೇವೆ. ಒಟ್ಟು 24 ಜನರನ್ನು ಇದುವರೆಗೆ ಬಂಧಿಸಲಾಗಿದೆ. ಬಂಧಿತ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು. ಬಂಧಿತರ ವಿಚಾರಣೆ ನಡೆಸಲು ನಾವು 14 ದಿನಗಳ ಪೊಲೀಸ್ ವಶಕ್ಕೆ ಕೋರುತ್ತೇವೆ’ ಎಂದೂ ಅವರು ಹೇಳಿದ್ದಾರೆ.

ಮೂರು ಎಫ್ಐಆರ್‌ ದಾಖಲು
ಮಾರಕ ಆಯುಧಗಳಿಂದ ಗಲಭೆ ನಡೆಸಿದ ಆರೋಪದಲ್ಲಿ ಸುಮಾರು 500 ಜನರ ವಿರುದ್ಧ ಬೆಕ್ಕಂಗಂಜ್ ಸ್ಟೇಷನ್ ಠಾಣಾಧಿಕಾರಿ ನವಾಬ್ ಅಹ್ಮದ್ ನೀಡಿದ ದೂರಿನ ಮೇರೆಗೆ ಮೊದಲ ಎಫ್‌ಐಆರ್ ದಾಖಲಿಸಲಾಗಿದೆ.

ಸಬ್ ಇನ್‌ಸ್ಪೆಕ್ಟರ್ ಆಸಿಫ್ ರಜಾ ಅವರ ದೂರಿನ ಮೇರೆಗೆ ಎರಡನೇ ಎಫ್‌ಐಆರ್ ದಾಖಲಾಗಿದ್ದು, ಅದರಲ್ಲಿ 20 ಜನರನ್ನು ಹೆಸರಿಸಲಾಗಿದೆ. 350 ಅಪರಿಚಿತ ಜನರ ವಿರುದ್ಧ ಪ್ರಕರಣ ದಾಖಲಾಗಿದೆ.

‘ನೂರಾರು ಮುಸ್ಲಿಮರು ಕೋಲು ಮತ್ತು ಮಾರಕಾಸ್ತ್ರಗಳನ್ನು ಹಿಡಿದು ಇತರ ಸಮುದಾಯದವರನ್ನು ಕೊಲ್ಲುವ ಉದ್ದೇಶದಿಂದ ಹಲ್ಲೆ ನಡೆಸಿದ್ದಾರೆ’ ಎಂದು ಚಂದೇಶ್ವರ ಹಟದ ನಿವಾಸಿ ಮುಖೇಶ್ ಎಂಬುವವರು ನೀಡಿದ ದೂರಿನ ಮೇರೆಗೆ ಮೂರನೇ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದೆ.

‘ಘರ್ಷಣೆಯಲ್ಲಿ 20 ಮಂದಿ ಪೊಲೀಸರು ಸೇರಿದಂತೆ ಕನಿಷ್ಠ 40 ಜನರು ಗಾಯಗೊಂಡಿದ್ದಾರೆ’ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT