ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾವೇರಿ | ಕರ್ನಾಟಕಕ್ಕೆ ಹೆಚ್ಚುವರಿ ನೀರಿನ ಹಕ್ಕಿಲ್ಲ; 'ಸುಪ್ರೀಂ’ಗೆ ತಮಿಳುನಾಡು

Last Updated 28 ಜುಲೈ 2022, 2:55 IST
ಅಕ್ಷರ ಗಾತ್ರ

ನವದೆಹಲಿ: ‘ಕರ್ನಾಟಕದಲ್ಲಿ ಕಾವೇರಿ ಜಲಾನಯನ ಪ್ರದೇಶದಲ್ಲಿ ಸಂಗ್ರಹವಾಗುವ ಹೆಚ್ಚುವರಿ ನೀರನ್ನು ಅಲ್ಲಿನ ಜಲಾಶಯಗಳಲ್ಲಿ ಸಂಗ್ರಹಿಸಬೇಕು ಹಾಗೂ ಅದನ್ನು ಮುಂದಿನ ವರ್ಷಕ್ಕೆ ಬಳಸಲು ಮೀಸಲಿಡಬೇಕು’ ಎಂದು ತಮಿಳುನಾಡು ಸರ್ಕಾರವು ಸುಪ್ರೀಂ ಕೋರ್ಟ್‌ಗೆ ಹೇಳಿದೆ.

‘ಮೇಕೆದಾಟು ಜಲಾಶಯ ನಿರ್ಮಾಣಕ್ಕೆ ಅವಕಾಶ ನೀಡಬಾರದು ಹಾಗೂ ಈ ಯೋಜನೆಯ ಸಮಗ್ರ ಯೋಜನಾ ವರದಿಯ ಬಗ್ಗೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದಲ್ಲಿ ಚರ್ಚಿಸಬಾರದು. ಈ ಬಗ್ಗೆ ನಿರ್ದೇಶನ ನೀಡಬೇಕು’ ಎಂದು ತಮಿಳುನಾಡು ಸರ್ಕಾರವು ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದೆ. ‘ಬೆಂಗಳೂರಿನ ಜನರಿಗೆ ಕುಡಿಯುವ ನೀರು ಒದಗಿಸಲು ಮೇಕೆದಾಟು ಯೋಜನೆಯನ್ನು ಜಾರಿಗೊಳಿಸಲಾಗುತ್ತಿದೆ. ತಮಿಳುನಾಡಿಗೆ ವಿದ್ಯುತ್‌ ಒದಗಿಸಲಾಗುತ್ತದೆ’ ಎಂದು ಕರ್ನಾಟಕ ಸರ್ಕಾರವು ಸುಪ್ರೀಂ ಕೋರ್ಟ್‌ಗೆ ಪ್ರಮಾಣಪತ್ರ ಸಲ್ಲಿಸಿದೆ.

ಸುಪ್ರೀಂ ಕೋರ್ಟ್‌ಗೆ ಪ್ರಮಾಣಪತ್ರ ಸಲ್ಲಿಸಿರುವ ತಮಿಳುನಾಡು ಸರ್ಕಾರ, ಕಾವೇರಿ ನದಿಯ ಹೆಚ್ಚುವರಿ ನೀರನ್ನು ಬಳಸಿಕೊಳ್ಳಲು ಕರ್ನಾಟಕ ಸರ್ಕಾರವು ಮೇಕೆದಾಟು ಸೇರಿದಂತೆ ಯಾವುದೇ ಅಣೆಕಟ್ಟು ನಿರ್ಮಿಸಬಾರದು. ಕರ್ನಾಟಕ ಸರ್ಕಾರಕ್ಕೆ ಆ ಅಧಿಕಾರ ಇಲ್ಲ ಎಂದು ವಾದಿಸಿದೆ.

‘ಕಾವೇರಿ ಜಲಾನಯನ ಪ್ರದೇಶದಲ್ಲಿ ಏತ ನೀರಾವರಿ ಯೋಜನೆಯನ್ನು ಅನುಷ್ಠಾನಗೊಳಿಸಲು ಕರ್ನಾಟಕ ಸರ್ಕಾರ ಈ ಹಿಂದೆ ಉದ್ದೇಶಿಸಿತ್ತು. ಕರ್ನಾಟಕದ ಪ್ರಸ್ತಾವನೆಯನ್ನು ಕಾವೇರಿ ಜಲ ವಿವಾದ ನ್ಯಾಯಾಧೀಕರಣ ತಿರಸ್ಕರಿಸಿತ್ತು.
ನ್ಯಾಯಾಧೀಕರಣದ ಅಂತಿಮ ತೀರ್ಪಿನ ‍ಪ್ರಕಾರ, ಕರ್ನಾಟಕಕ್ಕೆ ಹೆಚ್ಚುವರಿ ನೀರನ್ನು ಬಳಸಿಕೊಳ್ಳುವ ಅಧಿಕಾರ ಇಲ್ಲ. ಹೆಚ್ಚುವರಿ ನೀರನ್ನು ಸಂರಕ್ಷಿಸಬೇಕು ಹಾಗೂ ಮುಂದಿನ ವರ್ಷಕ್ಕೆ ಉಳಿಸಬೇಕು’ ಎಂದು ತಮಿಳುನಾಡು ಸರ್ಕಾರ ಹೇಳಿದೆ.

ಹೆಚ್ಚುವರಿ ನೀರಿನ ಬಳಕೆಗಾಗಿ ಕರ್ನಾಟಕ ಸರ್ಕಾರವು ಯಾವುದೇ ಯೋಜನೆ
ಯನ್ನು ಕೈಗೆತ್ತಿಕೊಂಡರೆ ಅದು ನ್ಯಾಯಾಧೀಕರಣದ ಅಂತಿಮ ತೀರ್ಪಿನ ಉಲ್ಲಂಘನೆ ಆಗುತ್ತದೆ ಎಂದೂ ಪ್ರಮಾಣಪತ್ರದಲ್ಲಿ ತಿಳಿಸಿದೆ.

ಕುಡಿಯುವ ನೀರು ಪೂರೈಕೆಗಾಗಿ ಮೇಕೆದಾಟು ಅಣೆಕಟ್ಟು ನಿರ್ಮಾಣ ಮಾಡಲಾಗುತ್ತಿದೆ ಎಂದು ಕರ್ನಾಟಕ ಸರ್ಕಾರ ಹೇಳಿಕೊಂಡಿದೆ. ಆದರೆ, ಕರ್ನಾಟಕವು ನೀರಾವರಿ ಪ್ರದೇಶಗಳನ್ನು ಹೆಚ್ಚಿಸಿಕೊಳ್ಳುವ ಮೂಲಕ ನ್ಯಾಯಾಧೀಕ ರಣದ ಆದೇಶವನ್ನು ಉಲ್ಲಂಘಿಸಿದೆ. ಈ ವಿಚಾರವನ್ನು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಗಮನಕ್ಕೆ ತರಲಾಗಿದೆ ಎಂದು ಹೇಳಿದೆ.

‘ಹೇಮಾವತಿ– ನೇತ್ರಾವತಿ ನದಿಯನ್ನು ಜೋಡಣೆ ಮಾಡುವ ಪ್ರಸ್ತಾವ ಇದೆ. ಬೆಂಗಳೂರಿನ ಕುಡಿಯುವ ನೀರನ್ನು ಪೂರೈಸಲು ಅಲ್ಲಿನ ನೀರನ್ನು ಬಳಸಿಕೊಳ್ಳಬಹುದು. ಬೆಂಗಳೂರಿನಲ್ಲಿ ನೀರಿನ ಸಮಸ್ಯೆ ಸೃಷ್ಟಿಯಾದಾಗ ಪ್ರತಿ ಸಲವೂ ಕಾವೇರಿ ನದಿಯತ್ತ ದೃಷ್ಟಿ ಹರಿಸಲಾಗುತ್ತದೆ. ಇದು ಸರಿಯಲ್ಲ. ತಮಿಳುನಾಡಿನ ಜನರಿಗೆ ಅನ್ಯಾಯ ಮಾಡಿ ಕರ್ನಾಟಕ ಸರ್ಕಾರವು ಯೋಜನೆಗಳನ್ನು ರೂಪಿಸುವುದು ಸರಿಯಲ್ಲ’ ಎಂದೂ ಪ್ರಮಾಣಪತ್ರದಲ್ಲಿ ತಿಳಿಸಿದೆ.

ಮೇಕೆದಾಟು ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ನಲ್ಲಿ ಆಗಸ್ಟ್‌ 10ರಂದು ಮುಂದಿನ ವಿಚಾರಣೆ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT