ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಾರಾಷ್ಟ್ರದ ವಿದರ್ಭ ಮಾರುಕಟ್ಟೆಗೆ ಕಾಲಿಟ್ಟ ನಂದಿನಿ ಹಾಲಿನ ಉತ್ಪನ್ನಗಳು

Last Updated 2 ಆಗಸ್ಟ್ 2021, 13:32 IST
ಅಕ್ಷರ ಗಾತ್ರ

ಮುಂಬೈ: ನಂದಿನಿ ಹಾಲು ಮತ್ತು ಹಾಲಿನ ಉತ್ಪನ್ನಗಳ ಬ್ರಾಂಡ್ ಹೊಂದಿರುವ ಕರ್ನಾಟಕ ಹಾಲು ಒಕ್ಕೂಟ (ಕೆಎಂಎಫ್) ಸೋಮವಾರ ಮಹಾರಾಷ್ಟ್ರದ ವಿದರ್ಭ ಪ್ರದೇಶಕ್ಕೆ ಪದಾರ್ಪಣೆ ಮಾಡಿರುವುದಾಗಿ ತಿಳಿಸಿದೆ. ₹ 1,000 ಕೋಟಿ ವೆಚ್ಚದಲ್ಲಿ ಮಹಾರಾಷ್ಟ್ರ ಮತ್ತು ಗೋವಾ ರಾಜ್ಯಗಳಲ್ಲಿ ಡೈರಿ ಸಂಸ್ಕರಣಾ ಘಟಕಗಳನ್ನು ಸ್ಥಾಪಿಸಲು ಕೆಎಂಎಫ್ ಮುಂದಾಗಿದೆ ಎಂದು ಪಿಟಿಐ ವರದಿ ಮಾಡಿದೆ.

ಕೆಎಂಎಫ್ ಭಾನುವಾರ ತನ್ನ ನಂದಿನಿ ಬ್ರಾಂಡ್‌ನ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ವಿದರ್ಭ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ. ನಾಗ್ಪುರ, ವಾರ್ಧಾ, ಯಾವತ್ಮಲ್ ಮತ್ತು ಚಂದ್ರಪುರದಲ್ಲಿ ಮಾರುಕಟ್ಟೆಗಳಿಗೂ ವಿಸ್ತರಿಸಲು ಯೋಜಿಸುತ್ತಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಇದರೊಂದಿಗೆ, ಕರ್ನಾಟಕದ ವಿಜಯಪುರದ ಡೈರಿಯಲ್ಲಿ ಸಂಸ್ಕರಿಸಿದ ಹಾಲು ಸುಮಾರು 650 ಕಿಮೀ ಸಾಗಿ ನಂತರ ಚಂದ್ರಪುರವನ್ನು ತಲುಪುತ್ತದೆ. ಅಲ್ಲಿ ಅದನ್ನು ಸ್ಥಳೀಯ ಡೈರಿ ಬ್ರಾಂಡ್ ಸ್ವಪ್ನಪೂರ್ತಿಯ ಸಹಯೋಗದೊಂದಿಗೆ ಪ್ಯಾಕ್ ಮಾಡಲಾಗುತ್ತದೆ.

‘ನಾವು ಮುಂಬೈನಲ್ಲಿ ಎರಡು ಮತ್ತು ಗೋವಾ ಹಾಗೂ ಪುಣೆಯಲ್ಲಿ ತಲಾ ಒಂದು ಪ್ಲಾಂಟ್ ಖರೀದಿಸಲು ಯೋಜಿಸುತ್ತಿದ್ದೇವೆ. ಮುಂಬೈನಲ್ಲಿ ಸ್ವಾಧೀನಕ್ಕೆ ಟೆಂಡರ್ ಕರೆಯಲಾಗಿದೆ. ಡೈರಿ ಸಂಸ್ಕರಣಾ ಘಟಕಗಳನ್ನು ಸ್ವಾಧೀನಪಡಿಸಿಕೊಂಡು ನಾವು ₹1,000 ಕೋಟಿ ವೆಚ್ಚದಲ್ಲಿ ವಿಸ್ತರಣಾ ಯೋಜನೆಯನ್ನು ರೂಪಿಸಿದ್ದೇವೆ.’ ಎಂದು ಕೆಎಂಎಫ್‌ನ ವ್ಯವಸ್ಥಾಪಕ ನಿರ್ದೇಶಕ ಬಿ.ಸಿ. ಸತೀಶ್ ಹೇಳಿದ್ದಾರೆ.

ಸದ್ಯ, ಕೆಎಂಎಫ್, ಕರ್ನಾಟಕ, ಗೋವಾ ಮತ್ತು ಮುಂಬೈ, ಪುಣೆ, ಸೊಲ್ಲಾಪುರ, ಚೆನ್ನೈ, ಹೈದರಾಬಾದ್, ವಿಜಯವಾಡ ಸೇರಿದಂತೆ ದೇಶದ ಇತರ ನಗರಗಳಲ್ಲಿ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದೆ. ಇದೀಗ, ನಾಗ್ಪುರ, ವಾರ್ಧಾ, ಯಾವತ್ಮಲ್, ಚಂದ್ರಪುರ ಸೇರಿದಂತೆ ವಿದರ್ಭ ಪ್ರದೇಶಕ್ಕೆ ಕೊಂಡೊಯ್ಯುವುದು ಕೆಂಎಎಫ್ ಹೆಜ್ಜೆಯಾಗಿದೆ.

23,600 ಗ್ರಾಮಗಳು, 14,500 ಹಾಲು ಉತ್ಪಾದಕ ಸಹಕಾರ ಸಂಘಗಳು, 14 ಜಿಲ್ಲಾ ಹಾಲು ಒಕ್ಕೂಟಗಳು, 25 ಲಕ್ಷ ಹಾಲು ಉತ್ಪಾದಕ ಸದಸ್ಯರು 90.62 ಲಕ್ಷ ಲೀಟರ್ ಹಾಲು ಸಂಗ್ರಹಣೆಯೊಂದಿಗೆ ಪ್ರತಿದಿನ ರೈತರಿಗೆ ₹ 24 ಕೋಟಿಗಳನ್ನು ಕೆಎಂಎಫ್ ಪಾವತಿಸುತ್ತದೆ.

ಕೆಎಂಎಫ್ 140ಕ್ಕೂ ಹೆಚ್ಚು ಹಾಲಿನ ಉತ್ಪನ್ನಗಳನ್ನು ಹೊಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT