ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರ್ನಾಟಕದಲ್ಲಿ ರೈಲ್ವೆ ಮಾರ್ಗ: 1,411 ಕಿ.ಮೀ. ನಿರ್ಮಾಣಕ್ಕೆ ಸಮೀಕ್ಷೆ

Last Updated 3 ಆಗಸ್ಟ್ 2022, 21:30 IST
ಅಕ್ಷರ ಗಾತ್ರ

ನವದೆಹಲಿ: ಕರ್ನಾಟಕದಲ್ಲಿ ಕಳೆದ ಮೂರು ವರ್ಷಗಳಲ್ಲಿ1411 ಕಿ.ಮೀ. ಉದ್ದದ 15 ರೈಲು ಮಾರ್ಗಗಳ ನಿರ್ಮಾಣಕ್ಕೆ ಸಮೀಕ್ಷೆ ನಡೆಸಲು ಒಪ್ಪಿಗೆ ನೀಡಲಾಗಿದೆ ಎಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌ ತಿಳಿಸಿದ್ದಾರೆ.

ಲೋಕಸಭೆಯಲ್ಲಿ ಬೆಂಗಳೂರು ಗ್ರಾಮಾಂತರ ಸಂಸದ ಡಿ.ಕೆ. ಸುರೇಶ್‌ ಅವರ ಪ್ರಶ್ನೆಗೆ ಬುಧವಾರ ಲಿಖಿತ ಉತ್ತರ ನೀಡಿರುವ ಸಚಿವರು, ‘ಸಮೀಕ್ಷೆಗಾಗಿ ಕಳೆದ ಮೂರು ವರ್ಷಗಳಲ್ಲಿ ₹47.83 ಕೋಟಿ ಅನುದಾನ ಮೀಸಲಿಡಲಾಗಿದ್ದು, ₹19.30 ಕೋಟಿ ವೆಚ್ಚ ಮಾಡಲಾಗಿದೆ’ ಎಂದು ಹೇಳಿದ್ದಾರೆ.

ರಾಜ್ಯ ಸರ್ಕಾರಕ್ಕೆ 2016ರಲ್ಲಿ ಪ್ರಸ್ತಾವನೆ: ‘ಬೆಂಗಳೂರು–ಕನಕಪುರ– ಚಾಮರಾಜನಗರ– ಸತ್ಯಮಂಗಲಂ ರೈಲು ಮಾರ್ಗ ನಿರ್ಮಾಣಕ್ಕೆ 1997–98ರಲ್ಲಿ ಅನುಮೋದನೆ ನೀಡಲಾಗಿತ್ತು. ರೈಲು ಮಾರ್ಗ ಮೀಸಲು ಅರಣ್ಯದಲ್ಲಿ ಹಾದು ಹೋಗಬೇಕಿತ್ತು. ಹೀಗಾಗಿ, ಚಾಮರಾಜನಗರ– ಸತ್ಯಮಂಗಲಂ ಮಾರ್ಗದ ಕಾಮಗಾರಿಯನ್ನು ಕೈಬಿಟ್ಟು ಬೆಂಗಳೂರು–ಚಾಮರಾಜನಗರ (142 ಕಿ.ಮೀ) ಮಾರ್ಗ ನಿರ್ಮಾಣಕ್ಕೆ ನಿರ್ಣಯಿಸಲಾಯಿತು. ಈ ಮಾರ್ಗಕ್ಕೆ ಬೇಕಿರುವ ಜಾಗವನ್ನು ಉಚಿತವಾಗಿ ನೀಡಲು ಹಾಗೂ ಯೋಜನೆಯ ಶೇ 50 ಮೊತ್ತ ಭರಿಸಲು ಕರ್ನಾಟಕ ಸರ್ಕಾರ ಒಪ್ಪಿಕೊಂಡಿತು. ಯೋಜನೆಗೆ ಬೇಕಿರುವ ಭೂಮಿಯ ಪ್ರಸ್ತಾವನೆಯನ್ನು ಕರ್ನಾಟಕ ಸರ್ಕಾರಕ್ಕೆ 2016ರಲ್ಲಿ ಸಲ್ಲಿಸಲಾಗಿದೆ’ ಎಂದು ಸಚಿವರು ಉತ್ತರ
ನೀಡಿದ್ದಾರೆ.

ಬೆಂಗಳೂರು–ಹೆಜ್ಜಾಲೆ–ಚಾಮ ರಾಜನಗರ ರೈಲು ಮಾರ್ಗದ ಕಾಮಗಾರಿ ಯಾವಾಗ ಆರಂಭವಾಗಿ ಪೂರ್ಣಗೊಳ್ಳುತ್ತದೆ ಎಂಬ ಪ್ರಶ್ನೆಗೆ ಉತ್ತರಿಸಿರುವ ಸಚಿವರು, ‘ಯೋಜನಾ ಮೊತ್ತಕ್ಕೆ ಆಯಾ ರಾಜ್ಯ ಪಾಲು ನೀಡುವುದು, ತ್ವರಿತವಾಗಿ ಭೂಸ್ವಾಧೀನ ಪ್ರಕ್ರಿಯೆ, ಅರಣ್ಯ ಭೂಮಿಗಳ ಸ್ವಾಧೀನಕ್ಕಾಗಿ ಒಪ್ಪಿಗೆ, ವಿವಿಧ ಪ್ರಾಧಿಕಾರಗಳಿಂದ ಅನುಮೋದನೆ, ಭೌಗೋಳಿಕ ಸನ್ನಿವೇಶ, ಕಾನೂನು ಮತ್ತು ಸುವ್ಯವಸ್ಥೆ ಮತ್ತಿತರ ಅಂಶಗಳು ಯಾವುದೇ ರೈಲ್ವೆ ಯೋಜನೆ ಪೂರ್ಣಗೊಳ್ಳುವಲ್ಲಿ ಪರಿಣಾಮ ಬೀರುತ್ತವೆ’ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT