ಸೋಮವಾರ, ಜೂನ್ 27, 2022
26 °C
ಅಖಿಲ ಭಾರತ ಉನ್ನತ ಶಿಕ್ಷಣ ಸಮೀಕ್ಷೆ ಬಿಡುಗಡೆ l ರಾಜ್ಯದಲ್ಲಿ ಗರಿಷ್ಠ ಸಂಖ್ಯೆಯ ಕಾಲೇಜು

ಉನ್ನತ ಶಿಕ್ಷಣ ಸೌಲಭ್ಯ: ರಾಜ್ಯಕ್ಕೆ 3ನೇ ಸ್ಥಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಉನ್ನತ ಶಿಕ್ಷಣ

ನವದೆಹಲಿ: ಉನ್ನತ ಶಿಕ್ಷಣ ಬೋಧಿಸುವ 4,407 ಕಾಲೇಜುಗಳನ್ನು ಹೊಂದಿರುವ ಕರ್ನಾಟಕ, ದೇಶದಲ್ಲೇ 3ನೇ ಸ್ಥಾನದಲ್ಲಿದೆ. ಇಲ್ಲಿ ಉನ್ನತ ಶಿಕ್ಷಣಕ್ಕೆ ಅರ್ಹರಿರುವ ಪ್ರತಿ ಲಕ್ಷ ವಿದ್ಯಾರ್ಥಿಗಳಿಗೆ 59 ಕಾಲೇಜುಗಳಿವೆ.

ಬೆಂಗಳೂರು ನಗರವು 1,009 ಕಾಲೇಜುಗಳನ್ನು ಹೊಂದಿದ್ದು, ಗರಿಷ್ಠ ಸಂಖ್ಯೆಯ ಕಾಲೇಜುಗಳನ್ನು ಹೊಂದಿರುವ ಜಿಲ್ಲೆಗಳ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದೆ. ನಂತರದ ಸ್ಥಾನದಲ್ಲಿರುವ ಜೈಪುರದಲ್ಲಿ 606 ಕಾಲೇಜುಗಳಿವೆ ಎಂದು ಅಖಿಲ ಭಾರತ ಉನ್ನತ ಶಿಕ್ಷಣ ಸಮೀಕ್ಷೆ (ಎಐಎಸ್‌ಎಚ್‌ಇ) 2019-20 ತಿಳಿಸಿದೆ.

ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್ ನಿಶಾಂಕ್ ಅವರು ಗುರುವಾರ ಸಮೀಕ್ಷಾ ವರದಿಯನ್ನು ಬಿಡುಗಡೆ ಮಾಡಿದ್ದಾರೆ.

ದೇಶದ ಶೇ 16.6ರಷ್ಟು ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ದಾಖಲಾತಿ ಪ್ರಮಾಣ 100ಕ್ಕಿಂತ ಕಡಿಮೆ ಇದ್ದರೆ, ಶೇ 48.9ರಷ್ಟು ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ 100ರಿಂದ 500ರಷ್ಟಿದೆ. ಕೇವಲ ಶೇ 4ರಷ್ಟು ಕಾಲೇಜುಗಳಲ್ಲಿ 3,000ಕ್ಕಿಂತ ಹೆಚ್ಚು ವಿದ್ಯಾರ್ಥಿಗಳ ದಾಖಲಾತಿ ಇದೆ.

ಉನ್ನತ ಶಿಕ್ಷಣ ದಾಖಲಾತಿಯಲ್ಲಿ ಏರಿಕೆ: ದೇಶದಲ್ಲಿ ಉನ್ನತ ಶಿಕ್ಷಣ ದಾಖಲಾತಿ ಪ್ರಮಾಣ ಐದು ವರ್ಷಗಳಲ್ಲಿ ಶೇ 11.4ರಷ್ಟು ಏರಿಕೆ ಕಂಡಿದೆ. ಈ ಅವಧಿಯಲ್ಲಿ ಉನ್ನತ ಶಿಕ್ಷಣ ಪ್ರವೇಶಿಸುತ್ತಿರುವ ಮಹಿಳೆಯರ ಪ್ರಮಾಣ ಶೇ 18.2ರಷ್ಟು ಏರಿಕೆಯಾಗಿದೆ ಎಂದು ಸಮೀಕ್ಷೆ ತಿಳಿಸಿದೆ.

ಭಾರತದಲ್ಲಿ ಉನ್ನತ ಶಿಕ್ಷಣ ದಾಖಲಾತಿ ಅನುಪಾತ (ಜಿಇಆರ್‌) 27.1ರಷ್ಟಿದೆ (2018–19ರಲ್ಲಿ 26.3ರಷ್ಟಿತ್ತು). ಪುರುಷರ ದಾಖಲಾತಿ ಪ್ರಮಾಣ 26.9ರಷ್ಟಿದ್ದರೆ, ಮಹಿಳೆಯರ ದಾಖಲಾತಿ ಪ್ರಮಾಣ 27.3 ರಷ್ಟಿದೆ. ಉನ್ನತ ಶಿಕ್ಷಣ ಪ್ರವೇಶಿಸುತ್ತಿರುವ ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳ ಜಿಇಆರ್‌ 23.4ರಷ್ಟಿದ್ದರೆ, ಪರಿಶಿಷ್ಟ ಪಂಗಡದವರ ಜಿಇಆರ್‌ 18ರಷ್ಟಿದೆ ಎಂದು ಸಮೀಕ್ಷೆ ಅಂಕಿ ಅಂಶಗಳನ್ನು ಒದಗಿಸಿದೆ.

ಉನ್ನತ ಶಿಕ್ಷಣದಲ್ಲಿ ಒಟ್ಟು ದಾಖಲಾತಿ ಸುಮಾರು 3.85 ಕೋಟಿ ಇದೆ (2018–19ರಲ್ಲಿ 3.74 ಕೋಟಿ ಇತ್ತು). ಇದರಲ್ಲಿ 1.96 ಕೋಟಿ ಪುರುಷರಾಗಿದ್ದರೆ, 1.89 ಕೋಟಿ ಮಹಿಳೆಯರಾಗಿದ್ದಾರೆ. ಒಟ್ಟು ದಾಖಲಾತಿಯಲ್ಲಿ ಮಹಿಳೆಯರು ಶೇ 49ರಷ್ಟಿದ್ದಾರೆ ಎಂದು ಸಮೀಕ್ಷೆ ತಿಳಿಸಿದೆ. ಶೇಕಡ 79.5ರಷ್ಟು ವಿದ್ಯಾರ್ಥಿಗಳು ಪದವಿ ಕೋರ್ಸ್‌ಗಳ ವ್ಯಾಸಂಗ ಮಾಡುತ್ತಿದ್ದರೆ, ಶೇ 11.2 ವಿದ್ಯಾರ್ಥಿಗಳು ಸ್ನಾತಕೋತ್ತರ ಪದವಿ ಕೋರ್ಸ್‌ಗಳಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು