ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಠುವಾ ಸಾಮೂಹಿಕ ಅತ್ಯಾಚಾರ ಆರೋಪಿ ವಯಸ್ಕ: ಸುಪ್ರೀಂ ಕೋರ್ಟ್ ತೀರ್ಪು

Last Updated 16 ನವೆಂಬರ್ 2022, 13:33 IST
ಅಕ್ಷರ ಗಾತ್ರ

ನವದೆಹಲಿ:ಕಠುವಾದಲ್ಲಿ ಎಂಟು ವರ್ಷದ ಅಲೆಮಾರಿ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ, ಕೊಲೆ ಮಾಡಿದ್ದ ಪ್ರಕರಣದ ಆರೋಪಿಗಳ ಪೈಕಿ ಒಬ್ಬ ಅಪರಾಧ ಕೃತ್ಯ ಎಸಗಿದ ಸಮಯದಲ್ಲಿ ಬಾಲಕ ಆಗಿರಲಿಲ್ಲ ಎಂಬುದನ್ನು‌ ಸುಪ್ರೀಂ ಕೋರ್ಟ್ ಬುಧವಾರ ಎತ್ತಿಹಿಡಿದಿದೆ.

ಆರೋಪಿಯ ವಯಸ್ಸಿನ ದೃಢೀಕರಣದ ಬಗ್ಗೆ ವೈದ್ಯಕೀಯ ಅಭಿಪ್ರಾಯ ಕೈಬಿಡಲು ಸಾಧ್ಯವಿಲ್ಲ. ಈಗ ಆತನನ್ನು ವಯಸ್ಕ ಎಂದು ಪರಿಗಣಿಸಿ ಈ ಪ್ರಕರಣದಲ್ಲಿ ಆತನ ವಿರುದ್ಧ ಹೊಸದಾಗಿ ವಿಚಾರಣೆ ಆರಂಭಿಸಬಹುದು ಎಂದು ನ್ಯಾಯಾಲಯ ಹೇಳಿದೆ.

ನ್ಯಾಯಮೂರ್ತಿಗಳಾದ ಅಜಯ್‌ ರಸ್ತೋಗಿ ಮತ್ತು ಜೆ.ಬಿ. ಪಾರ್ದೀವಾಲಾ ಅವರಿದ್ದ ಪೀಠವು, ‘ವೈದ್ಯಕೀಯ ಸಾಕ್ಷ್ಯ ಪರಿಗಣಿಸಬಹುದೇ ಅಥವಾ ಇಲ್ಲವೇ ಎಂಬುದು ಸಾಕ್ಷ್ಯದ ಮೌಲ್ಯವನ್ನು ಅವಲಂಬಿಸಿರುತ್ತದೆ. ಯಾವುದೇ ಇತರ ನಿರ್ಣಾಯಕ ಪುರಾವೆಗಳು ಇಲ್ಲದಿದ್ದಾಗ ಆರೋಪಿಯ ವಯಸ್ಸಿನ ಬಗ್ಗೆ ನಿರ್ಧಾರಕ್ಕೆ ಬರಲು ವೈದ್ಯಕೀಯ ಅಭಿಪ್ರಾಯ ಪರಿಗಣಿಸಬೇಕು’ ಎಂದು ಅಭಿಪ್ರಾಯಪಟ್ಟಿದೆ.

ಆರೋಪಿ ಶುಭಂ ಸಂಗ್ರಾ ಬಾಲ ಆರೋಪಿ ಎಂದುಕಠುವಾದಲ್ಲಿನಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ನೀಡಿದ್ದ ಆದೇಶದ ಮೇಲೆ ಪ್ರತ್ಯೇಕ ವಿಚಾರಣೆಗೆ ಒಳಪಡಿಸಿ ಜಮ್ಮು ಮತ್ತು ಕಾಶ್ಮೀರದ ಹೈಕೋರ್ಟ್‌ ನೀಡಿದ್ದ ಆದೇಶಗಳನ್ನು ಪೀಠವು ರದ್ದುಗೊಳಿಸಿತು.

‘ಅಪರಾಧ ಎಸಗಿದ ಸಮಯದಲ್ಲಿ ಆರೋಪಿಯು ಬಾಲಕ ಆಗಿರಲಿಲ್ಲ. ಹಾಗಾಗಿ ಕಠುವಾದ ಸಿಜೆಎಂ ಮತ್ತು ಹೈಕೋರ್ಟ್‌ ತೀರ್ಪುಗಳನ್ನು ವಜಾಗೊಳಿಸಿದ್ದೇವೆ’ ಎಂದು ನ್ಯಾಯಮೂರ್ತಿ ಪಾರ್ದೀವಾಲಾ ಅವರುತೀರ್ಪು ಪ್ರಕಟಿಸುವಾಗ ಹೇಳಿದರು.

2020ರಫೆಬ್ರವರಿ 7ರಂದು ಉನ್ನತ ನ್ಯಾಯಾಲಯವು ಸಂಗ್ರಾ ವಿರುದ್ಧ ಬಾಲಾಪರಾಧಿ ನ್ಯಾಯ ಮಂಡಳಿಯ (ಜೆಜೆಬಿ) ವಿಚಾರಣೆಗೆ ತಡೆ ನೀಡಿತ್ತು.ಅಪರಾಧದ ಸಮಯದಲ್ಲಿ ಆರೋಪಿ ಬಾಲಕ ಎಂದು ಪರಿಗಣಿಸಿದ ವಿಚಾರಣಾ ನ್ಯಾಯಾಲಯದ ಆದೇಶವನ್ನು ಜಮ್ಮು ಮತ್ತು ಕಾಶ್ಮೀರ ಹೈಕೋರ್ಟ್‌ ತಪ್ಪಾಗಿ ಸಿಂಧುಗೊಳಿಸಿದೆ ಎಂದು ಜಮ್ಮು ಮತ್ತು ಕಾಶ್ಮೀರ ಆಡಳಿತವು ಪ್ರತಿಪಾದಿಸಿದ ನಂತರ ವಿಚಾರಣೆಗೆ ಸುಪ್ರೀಂ ಕೋರ್ಟ್‌ ತಡೆ ನೀಡಿತ್ತು.

ಪ್ರಕರಣದ ಹಿನ್ನಲೆ:

2018ರಜನವರಿ 10ರಂದು ಅಲೆಮಾರಿ ಬಾಲಕಿಯನ್ನು ಅಪಹರಿಸಿ, ನಂತರ ಸಣ್ಣಹಳ್ಳಿಯೊಂದರ ದೇವಸ್ಥಾನದಲ್ಲಿ ನಾಲ್ಕು ದಿನಗಳ ಕಾಲ ಮತ್ತುಬರಿಸಿದ ಸ್ಥಿತಿಯಲ್ಲಿಟ್ಟು, ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ಮಾಡಿ, ನಂತರ ಬಡಿದು ಕೊಂದಿದ್ದರು.

ಪ್ರಕರಣದ ಸೂತ್ರಧಾರಿ, ದೇವಸ್ಥಾನದ ಉಸ್ತುವಾರಿ ಸಾಂಜಿ ರಾಮ್‌, ಪ್ರಮುಖ ಆರೋಪಿಗಳಾದ ವಿಶೇಷ ಪೊಲೀಸ್‌ ಅಧಿಕಾರಿ ದೀಪಕ್‌ ಖಾಜುರಿಯಾ, ಪ್ರವೀಶ್‌ ಕುಮಾರ್‌ ಎಂಬುವವರಿಗೆ ಜೀವನಪರ್ಯಂತ ಶಿಕ್ಷೆ ಅನುಭವಿಸುವಂತೆ ವಿಶೇಷ ನ್ಯಾಯಾಲಯ 2019ರ ಜೂನ್‌ 10ರಂದು ತೀರ್ಪು ನೀಡಿತ್ತು.

ಇತರ ಮೂವರು ಆರೋಪಿಗಳಾದ ಸಬ್‌ ಇನ್‌ಸ್ಪೆಕ್ಟರ್‌ ಆನಂದ್‌ ದತ್ತ, ಹೆಡ್‌ ಕಾನ್‌ಸ್ಟೆಬಲ್‌ ತಿಲಕ್‌ ರಾಜ್‌ ಮತ್ತು ವಿಶೇಷ ಪೊಲೀಸ್‌ ಅಧಿಕಾರಿ ಸುರೇಂದರ್‌ ವರ್ಮಾ ಅವರಿಗೆ ಸಾಕ್ಷ್ಯ ನಾಶಕ್ಕಾಗಿ ಐದು ವರ್ಷಗಳ ಜೈಲು ಶಿಕ್ಷೆ ಮತ್ತು ತಲಾ ₹50 ಸಾವಿರ ದಂಡ ವಿಧಿಸಲಾಗಿತ್ತು. 7ನೇ ಆರೋಪಿ, ಸಾಂಜಿ ರಾಮ್‌ ಪುತ್ರ ವಿಶಾಲ್‌ ಜಂಗೋತ್ರನನ್ನು ಸಂಶಯದ ಲಾಭದ ಮೇಲೆ ಖುಲಾಸೆಗೊಳಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT