ಸೋಮವಾರ, ಏಪ್ರಿಲ್ 19, 2021
31 °C
ಸರ್ವ ಪಕ್ಷ ಸಭೆಯಲ್ಲಿ ಚರ್ಚೆ; ಜಾರಕಿಹೊಳಿ

ಕಾವೇರಿ: ಕೇಂದ್ರಕ್ಕೆ ಮನವಿ ಸಲ್ಲಿಸಲು ನಿರ್ಧಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಕಾವೇರಿಯ 45 ಟಿಎಂಸಿ ಅಡಿ ಹೆಚ್ಚುವರಿ ನೀರನ್ನು ಬಳಸುವ ಉದ್ದೇಶದಿಂದ ತಮಿಳುನಾಡು ಸರ್ಕಾರ ರೂಪಿಸಿರುವ ನದಿ ಜೋಡಣೆ ಯೋಜನೆಯು ರಾಜ್ಯದ ರೈತರ ಹಿತಾಸಕ್ತಿಗೆ ಮಾರಕವಾಗದಂತೆ ಕ್ರಮ ಕೈಗೊಳ್ಳಬೇಕು ಎಂದು ಕೋರಿ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲು ಕರ್ನಾಟಕ ಸರ್ಕಾರ ನಿರ್ಧರಿಸಿದೆ.

ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ನೇತೃತ್ವದಲ್ಲಿ ಇಲ್ಲಿನ ಕರ್ನಾಟಕ ಭವನದಲ್ಲಿ ಭಾನುವಾರ ನಡೆದ ಅಧಿಕಾರಿಗಳು ಹಾಗೂ ಕಾನೂನು ತಂಡದ ಸದಸ್ಯರೊಂದಿಗೆ ನಡೆಸಲಾದ ಸಭೆಯಲ್ಲಿ ಈ ಕುರಿತ ನಿರ್ಣಯ ಕೈಗೊಳ್ಳಲಾಗಿದೆ.

ವೈಗೈ, ವೆಲ್ಲಾರು ಮತ್ತು ಗುಂಡಾರು ನದಿಗಳೊಂದಿಗೆ ಕಾವೇರಿಯನ್ನು ಜೋಡಿಸಲು ತಮಿಳುನಾಡು ಕೈಗೆತ್ತಿಕೊಂಡಿರುವ ಯೋಜನೆಯು ಕಾವೇರಿಯ ಹೆಚ್ಚುವರಿ ನೀರು ಬಳಸಿಕೊಳ್ಳಲು ರಾಜ್ಯ ರೂಪಿಸಿರುವ ‘ಮೇಕೆದಾಟು’ ಮತ್ತು ‘ಮಾರ್ಕಂಡೇಯ’ ಯೋಜನೆಗಳಿಗೆ ಮಾರಕವಾಗದಂತೆ ಆದೇಶ ನೀಡುವಂತೆ ಕೇಂದ್ರದ ಜಲಶಕ್ತಿ ಸಚಿವರನ್ನು ಆಗ್ರಹಿಸಲಾಗುವುದು ಎಂದು ಸಚಿವ ಜಾರಕಿಹೊಳಿ ಸಭೆಯ ನಂತರ ಸುದ್ದಿಗಾರರಿಗೆ ತಿಳಿಸಿದರು.

ಕಾವೇರಿಯ ಹೆಚ್ಚುವರಿ ನೀರಿನ ಬಳಕೆಗೆ ತಮಿಳುನಾಡಿಗೆ ಅನುಮತಿ ನೀಡಿದಲ್ಲಿ ರಾಜ್ಯ ಸರ್ಕಾರ ಕೈಗೆತ್ತಿಕೊಂಡಿರುವ ಯೋಜನೆಗಳಿಗೂ ಅನುಮತಿ ನೀಡುವಂತೆ ಕೇಂದ್ರವನ್ನು ಕೋರಲಾಗುವುದು. ಒಂದೊಮ್ಮೆ ಕೇಂದ್ರ ಸರ್ಕಾರ ಸ್ಪಂದಿಸದಿದ್ದರೆ ಕಾನೂನು ಹೋರಾಟ ಅನಿವಾರ್ಯವಾಗಲಿದೆ ಎಂದು ಅವರು ಹೇಳಿದರು.

ರಾಜ್ಯದ ಯೋಜನೆಗಳಿಗೆ ಈಗಾಗಲೇ ಆಕ್ಷೇಪ ಸಲ್ಲಿಸಿರುವ ತಮಿಳುನಾಡು ವಿರುದ್ಧ ಸೂಕ್ತ ಕಾನೂನು ಹೋರಾಟ ನಡೆಸುವ ನಿಟ್ಟಿನಲ್ಲಿ ಸಭೆಯಲ್ಲಿ ಚರ್ಚಿಸಲಾಗಿದೆ. ಈ ಸಂಬಂಧ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರೊಂದಿಗೂ ಚರ್ಚಿಸಲಾಗುವುದು ಎಂದು ಅವರು ಹೇಳಿದರು.

ಕಾವೇರಿಯ ಹೆಚ್ಚುವರಿ ನೀರನ್ನು ಬಳಸಿಕೊಳ್ಳುವ ರಾಜ್ಯದ ಯೋಜನೆಗಳು ಹಾಗೂ ತಮಿಳುನಾಡು ಕೈಗೆತ್ತಿಕೊಂಡಿರುವ ಯೋಜನೆಯನ್ನು ವಿರೋಧಿಸುವ ನಿಟ್ಟಿನಲ್ಲಿ ಸರ್ವ ಪಕ್ಷಗಳ ಮುಖಂಡರ ಅಭಿಪ್ರಾಯ ಸಂಗ್ರಹಿಸುವ ಸಂಬಂಧ ಸಭೆ ಕರೆದು ಚರ್ಚಿಸಲೂ ಸರ್ಕಾರ ಚಿಂತನೆ ನಡೆಸಿದೆ ಎಂದು ಅವರು ವಿವರಿಸಿದರು.

ಮಹದಾಯಿ: ಇಂದು ‘ಸುಪ್ರೀಂ’ ವಿಚಾರಣೆ

ನವದೆಹಲಿ: ಮಹದಾಯಿ ನದಿ ನೀರು ಹಂಚಿಕೆ ಮಾಡಿ ನ್ಯಾಯಮಂಡಳಿ ನೀಡಿರುವ ಐತೀರ್ಪನ್ನು ವಿರೋಧಿಸಿ ಕರ್ನಾಟಕ ಸೇರಿದಂತೆ ಕಣಿವೆ ವ್ಯಾಪ್ತಿಯ ರಾಜ್ಯಗಳು ಸಲ್ಲಿಸಿರುವ ಮೇಲ್ಮನವಿಯ ವಿಚಾರಣೆ ಸುಪ್ರೀಂ ಕೋರ್ಟ್‌ನಲ್ಲಿ ಸೋಮವಾರ ನಡೆಯಲಿದೆ.

‘ನ್ಯಾಯಮೂರ್ತಿ ಜೆ.ಎಂ. ಪಾಂಚಾಲ್‌ ನೇತೃತ್ವದ ಮಹದಾಯಿ ಜಲವಿವಾದ ನ್ಯಾಯಮಂಡಳಿಯು ಕಡಿಮೆ ಪ್ರಮಾಣದ ನೀರನ್ನು ಹಂಚಿಕೆ ಮಾಡಿ ಐತೀರ್ಪು ನೀಡಿದೆ’ ಎಂದು ಕರ್ನಾಟಕ ಸರ್ಕಾರ ಮೇಲ್ಮನವಿ ಸಲ್ಲಿಸಿದೆ. ಇದಕ್ಕೆ ಪ್ರತಿಯಾಗಿ,  ಕರ್ನಾಟಕಕ್ಕೆ ಮಹದಾಯಿ ನೀರಿನಲ್ಲಿ ಪಾಲು ನೀಡಬಾರದು ಎಂದು ಗೋವಾ ಮನವಿ ಮಾಡಿದೆ. ಅಲ್ಲದೆ, ಖಾನಾಪುರ ತಾಲ್ಲೂಕಿನ ಕಣಕುಂಬಿ ಬಳಿ ಕಳಸಾ ನಾಲೆಯನ್ನು ತಿರುಗಿಸಿ ಮಲಪ್ರಭಾ ನದಿಗೆ ಅಕ್ರಮವಾಗಿ ನೀರು ಹರಿಸುವ ಮೂಲಕ ಕರ್ನಾಟಕವು ನ್ಯಾಯಾಂಗ ನಿಂದನೆ ಎಸಗಿದೆ ಎಂದೂ ಗೋವಾ ದೂರಿದೆ.

ಕಾವೇರಿ–ಗುಂಡಾರು ನದಿ ಜೋಡಣೆ ಯೋಜನೆಗೆ ಭೂಮಿಪೂಜೆ

ಪುದುಕೊಟೆ, ತಮಿಳುನಾಡು: ಕಾವೇರಿ, ವೈಗೈ ಹಾಗೂ ಗುಂಡಾರು ನದಿಗಳನ್ನು ಜೋಡಿಸುವ ₹ 14,400 ಕೋಟಿ ವೆಚ್ಚದ ಮಹತ್ವಾಕಾಂಕ್ಷೆ ಯೋಜನೆಯ ಮೊದಲ ಹಂತದ ಕಾಮಗಾರಿಗೆ ತಮಿಳುನಾಡು ಸರ್ಕಾರ ಭಾನುವಾರ ಭೂಮಿಪೂಜೆ ನೆರವೇರಿಸಿತು.

ಒಣಭೂಮಿಯೇ ಹೆಚ್ಚಾಗಿರುವ ರಾಜ್ಯದ ದಕ್ಷಿಣ ಭಾಗಕ್ಕೆ ನೀರಾವರಿ ಸೌಲಭ್ಯ ಕಲ್ಪಿಸಲು 6,000 ಘನ ಅಡಿಗಳಷ್ಟು ಹೆಚ್ಚುವರಿ ನೀರನ್ನು ಈ ಯೋಜನೆಯಡಿ ತಿರುಗಿಸಲಾಗುತ್ತದೆ.

ಜಿಲ್ಲೆಯ ಕುಣತ್ತೂರು ಎಂಬಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಕೆ.ಪಳನಿಸ್ವಾಮಿ, ಉಪಮುಖ್ಯಮಂತ್ರಿ ಒ.ಪನ್ನೀರ್‌ಸೆಲ್ವಂ ಭೂಮಿಪೂಜೆ ನೆರವೇರಿಸಿದರು.

ಮೊದಲ ಹಂತದಲ್ಲಿ ₹ 6,941 ಕೋಟಿ ವೆಚ್ಚದ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುತ್ತದೆ. ಈ ಯೋಜನೆಯಡಿ ಒಟ್ಟು 262 ಕಿ.ಮೀ. ಉದ್ದದ ಕಾಲುವೆಯನ್ನು ಅಭಿವೃದ್ಧಿಪಡಿಸಲಾಗುತ್ತಿದೆ.ಈ ಪೈಕಿ ಮೊದಲ ಹಂತದಲ್ಲಿ 118 ಕಿ.ಮೀ. ಉದ್ದದ ಕಾಲುವೆಯನ್ನು ನಿರ್ಮಿಸಲಾಗುತ್ತದೆ. ಕಾವೇರಿ ನದಿಯಲ್ಲಿನ ಹೆಚ್ಚುವರಿ ನೀರನ್ನು ಕಾಲುವೆ ಮೂಲಕ ಗುಂಡಾರು ನದಿಗೆ ಹರಿಸಲಾಗುತ್ತದೆ ಎಂದು ಮೂಲಗಳು ಹೇಳಿವೆ.

ಪ್ರವಾಹ ಕಂಡು ಬಂದ ದಿನಗಳಲ್ಲಿ ಕಾವೇರಿ, ವೈಗೈ, ದಕ್ಷಿಣ ವೆಲ್ಲಾರ್‌ ನದಿಗಳಲ್ಲಿನ ಹೆಚ್ಚುವರಿ ನೀರನ್ನು ಈ ಕಾಲುವೆಗಳ ಮೂಲಕ ಗುಂಡಾರು ನದಿಗೆ ಹರಿಸಲಾಗುವುದು. ಇದರಿಂದ ದಕ್ಷಿಣ ತಮಿಳುನಾಡಿನ ಜಿಲ್ಲೆಗಳಲ್ಲಿ ಅಂತರ್ಜಲ ಮಟ್ಟ ಹೆಚ್ಚಿಸಲು ಸಾಧ್ಯವಾಗುವುದು.

ತಿರುಚಿರಾಪಳ್ಳಿ, ಪುದುಕೊಟ್ಟೈ, ಶಿವಗಂಗಾ, ವಿರುಧುನಗರ, ರಾಮನಾಥಪುರಂ ಹಾಗೂ ಕರೂರು ಜಿಲ್ಲೆಗಳಿಗೆ ಈ ಯೋಜನೆಯಿಂದ ಅನುಕೂಲವಾಗುವುದು. ಈ ಜಿಲ್ಲೆಗಳಲ್ಲಿರುವ ಸಾವಿರಕ್ಕೂ ಅಧಿಕ ಕೆರೆಗಳ ಪುನಶ್ಚೇತನ ಸಾಧ್ಯವಾಗಲಿದೆ ಎಂದು ಇವೇ ಮೂಲಗಳು ಹೇಳಿವೆ.

ಸರ್ಕಾರದ ನಡೆಗೆ ದೇವೇಗೌಡ ಬೇಸರ

ಹಾಸನ: ‘45 ಟಿಎಂಸಿ ಅಡಿ ಹೆಚ್ಚುವರಿ ಕಾವೇರಿ ನದಿ ನೀರು ಬಳಕೆಗೆ ತಮಿಳುನಾಡು ಸರ್ಕಾರ ಕೈಗೊಂಡಿರುವ ಬೃಹತ್‌ ಯೋಜನೆಗೆ ರಾಜ್ಯ ಸರ್ಕಾರ ಚಕಾರವೆತ್ತದಿರುವುದು ಸರಿಯಲ್ಲ. ಇದು ಗಂಭೀರವಾದ ವಿಷಯ’ ಎಂದು ರಾಜ್ಯಸಭಾ ಸದಸ್ಯ ಎಚ್‌.ಡಿ.ದೇವೇಗೌಡ ಭಾನುವಾರ ಇಲ್ಲಿ ಹೇಳಿದರು.

‘ರಾಜ್ಯದ ಪಾಲಿನ ನೀರು ಕಬಳಿಸಲು ತಮಿಳುನಾಡು ಸರ್ಕಾರ ಪ್ರಧಾನಿ ಮೇಲೆ ಒತ್ತಡ ಹೇರುತ್ತಿದೆ. ರಾಜ್ಯದ ಹಿತರಕ್ಷಿಸುವಲ್ಲಿ ಕಾಂಗ್ರೆಸ್‌, ಬಿಜೆಪಿ ವಿಫಲವಾಗಿವೆ. ಎಐಎಡಿಎಂಕೆ ಜತೆ ಹೊಂದಾಣಿಕೆ ಮಾಡಿಕೊಂಡು ಬಿಜೆಪಿ ಹಲವು ಯೋಜನೆಗಳನ್ನು ಘೋಷಿಸಿದೆ. ರಾಜ್ಯದ ಜನರಿಗೆ ಅನ್ಯಾಯವಾಗಲು ಬಿಡುವುದಿಲ್ಲ, ಬೀದಿಗಿಳಿದು ಹೋರಾಟಮಾಡುತ್ತೇನೆ’ ಎಂದು ಎಚ್ಚರಿಸಿದರು.

‘ಹಲವು ಸಮಾಜಗಳು ಮೀಸಲಾತಿಗಾಗಿ ಹೋರಾಟ ಮಾಡುತ್ತಿವೆ. ಇದಕ್ಕೆ ವಿರೋಧ ವ್ಯಕ್ತಪಡಿಸುವುದಿಲ್ಲ. ಆದರೆ, ಮೀಸಲಾತಿ ಪ್ರಮಾಣ ಶೇ 50 ಮೀರುವಂತಿಲ್ಲ ಎಂದು ಸುಪ್ರೀಂಕೋರ್ಟ್ ಆದೇಶ ನೀಡಿದೆ. ಮುಖ್ಯಮಂತ್ರಿ ಯಡಿಯೂರಪ್ಪ ಇದನ್ನು ಹೇಗೆ ಬಗೆಹರಿಸುತ್ತಾರೋ ಗೊತ್ತಿಲ್ಲ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

‘ದೆಹಲಿಯಲ್ಲಿ ರೈತರ ಹೋರಾಟವನ್ನು ಸರ್ಕಾರದ ಶಕ್ತಿ ಬಳಸಿ, ಮಣಿಸಲು ಸಾಧ್ಯವಿಲ್ಲ. ಮಾತುಕತೆ ಮೂಲಕ ಬಗೆಹರಿಸುವಂತೆ ಪ್ರಧಾನಿಗೆ ಸಲಹೆ ನೀಡಿದ್ದೇನೆ. ನನ್ನನ್ನು ಆಹ್ವಾನಿಸಿದರೆ ಸಲಹೆ ನೀಡಲು ಸಿದ್ಧ. ರೈತರ ಮೇಲೆ ಪ್ರಕರಣ ದಾಖಲಿಸುತ್ತಾ ಹೋದರೆ ಅವರಿಗೂ ತೊಂದರೆ. ರೈತರನ್ನು ಕೆಣಕಿದರೆ ಹೋರಾಟ ತೀವ್ರಗೊಳ್ಳಬಹುದು’ ಎಂದು ಕಿವಿಮಾತು ಹೇಳಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು