ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉದ್ಧವ್, ಪವಾರ್ ಜತೆ ಚಂದ್ರಶೇಖರ್‌ ಭೇಟಿ

ವಿಪಕ್ಷಗಳ ಒಕ್ಕೂಟ ರಚನೆ ಯತ್ನ: ಸೇನಾ, ಎನ್‌ಸಿಪಿ ನಾಯಕರ ಭೇಟಿ ನಂತರ ಕೆ.ಸಿ.ಆರ್‌ ಹೇಳಿಕೆ
Last Updated 20 ಫೆಬ್ರುವರಿ 2022, 20:51 IST
ಅಕ್ಷರ ಗಾತ್ರ

ಮುಂಬೈ: ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್ (ಕೆಸಿಆರ್‌) ಅವರು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಮತ್ತು ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರನ್ನು ಇಲ್ಲಿ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. 2024ರ ಲೋಕಸಭಾ ಚುನಾವಣೆಗೆ ಬಿಜೆಪಿಯೇತರ ಪಕ್ಷಗಳ ಒಕ್ಕೂಟವನ್ನು ರಚಿಸುವ ದಿಸೆಯಲ್ಲಿ ಈ ಭೇಟಿ ಮಹತ್ವದ್ದು ಎನ್ನಲಾಗಿದೆ.

ಕಾಂಗ್ರೆಸ್‌ ಅನ್ನು ಹೊರಗಿರಿಸಿ, ಬಿಜೆಪಿ ವಿರೋಧಿ ಪಕ್ಷಗಳ ಒಕ್ಕೂಟವನ್ನು ರಚಿಸುವ ಪ್ರಸ್ತಾವವನ್ನು ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರು ಪ್ರಾದೇಶಿಕ ಪಕ್ಷಗಳ ಮುಂದೆ ಇಟ್ಟಿದ್ದರು. ಇದರ ಭಾಗವಾಗಿಯೇ ಅವರು ಕೆ.ಸಿ.ರಾವ್ ಅವರ ಜತೆ ದೂರವಾಣಿಯಲ್ಲಿ ಕಳೆದ ವಾರ ಮಾತುಕತೆ ನಡೆಸಿದ್ದರು. ಆ ಮಾತುಕತೆಯ ನಂತರ ‘ಮುಂದಿನ ಭಾನುವಾರ ಉದ್ಧವ್‌ ಠಾಕ್ರೆ ಅವರನ್ನು ಭೇಟಿ ಮಾಡುತ್ತೇನೆ’ ಎಂದು ರಾವ್ ಅವರು ಹೇಳಿದ್ದರು. ಇಂತಹ ಒಂದು ಒಕ್ಕೂಟವನ್ನು ರಚಿಸುವ ಯತ್ನದ ಭಾಗವಾಗಿಯೇ ಅವರು ಭಾನುವಾರ ಈ ಇಬ್ಬರೂ ನಾಯಕರನ್ನು ಭೇಟಿ ಮಾಡಿದ್ದಾರೆ.

ಠಾಕ್ರೆ ಅವರ ಮಲಬಾರ್ ಹಿಲ್‌ ಅಧಿಕೃತ ನಿವಾಸದಲ್ಲಿ ರಾವ್ ಅವರಿಗೆ ಮಧ್ಯಾಹ್ನದ ಭೋಜನದ ವ್ಯವಸ್ಥೆ ಮಾಡಲಾಗಿತ್ತು. ಅಲ್ಲಿಯೇ ಇಬ್ಬರೂ ನಾಯಕರ ಮಧ್ಯೆ ಮಾತುಕತೆ ನಡೆಯಿತು. ಈ ಭೇಟಿಯ ವೇಳೆ ಶಿವಸೇನಾ ಮತ್ತು ತೆಲಂಗಾಣ ರಾಷ್ಟ್ರ ಸಮಿತಿಯ ಹಲವು ನಾಯಕರು ಉಪಸ್ಥಿತರಿದ್ದರು. ಬಹುಭಾಷಾ ಚಿತ್ರನಟ ಮತ್ತು ಮೋದಿ ಟೀಕಾಕಾರರಾದ ಪ್ರಕಾಶ್ ರಾಜ್ ಅವರು ಈ ಭೇಟಿಯ ವೇಳೆ ಉಪಸ್ಥಿತರಿದ್ದರು. ಪಿಟಿಐ ಬಿಡುಗಡೆ ಮಾಡಿರುವ ಭೇಟಿಯ ಚಿತ್ರದಲ್ಲಿ, ರಾವ್ ಮತ್ತು ಠಾಕ್ರೆ ಅವರ ಜತೆ ಪ್ರಕಾಶ್ ರಾಜ್ ಅವರೂ ಇದ್ದಾರೆ.

ಸಂಜೆಯ ವೇಳೆಗೆ ಶರದ್ ಪವಾರ್ ಅವರ ಬ್ರೀಚ್ ಕ್ಯಾಂಡಿಯಲ್ಲಿನ ಸಿಲ್ವರ್ ಓಕ್ ನಿವಾಸದಲ್ಲಿ ರಾವ್ ಅವರಿಗೆ ಚಹಾಕೂಟ ಏರ್ಪಡಿಸಲಾಗಿತ್ತು. ಆ ವೇಳೆ ಇಬ್ಬರೂ ನಾಯಕರು ವಿರೋಧ ಪಕ್ಷಗಳ ಒಕ್ಕೂಟ ರಚಿಸುವ ಬಗ್ಗೆ ಮಾತುಕತೆ ನಡೆಸಿದ್ದಾರೆ. ತೆಲಂಗಾಣ ಚಳವಳಿಯನ್ನು ಬೆಂಬಲಿಸಿದ್ದಕ್ಕೆ ಶರದ್ ಪವಾರ್ ಅವರಿಗೆ ರಾವ್ ಅವರು ಧನ್ಯವಾದ ಹೇಳಿದ್ದಾರೆ. ಠಾಕ್ರೆ ಅವರನ್ನು ಹೈದರಾಬಾದ್‌ಗೆ ಆಹ್ವಾನಿಸಿದ್ದಾರೆ.

ಕಾಂಗ್ರೆಸ್‌ ಇರಲಿದೆಯೇ?

ಉದ್ಧವ್ ಠಾಕ್ರೆ ಮತ್ತು ಶರದ್ ಪವಾರ್ ಅವರನ್ನು ಭೇಟಿ ಮಾಡಿದ ನಂತರ ಕೆ.ಸಿ.ರಾವ್ ಅವರು ಮಾಧ್ಯಮ ಪ್ರತಿನಿಧಿಗಳ ಜತೆಗೆ ಸಭೆಯ ವಿವರಗಳನ್ನು ಹಂಚಿಕೊಂಡರು. ‘ಬಿಜೆಪಿಯನ್ನು ಅಧಿಕಾರದಿಂದ ದೂರವಿಡಲು ಸಮಾನ ಮನಸ್ಕ ಪಕ್ಷಗಳು ಒಟ್ಟಾಗುವ ಸಮಯ ಈಗ ಬಂದಿದೆ’ ಎಂದು ಅವರು ಹೇಳಿದರು.

ಆಗ ಪತ್ರಕರ್ತರು, ‘ಕಾಂಗ್ರೆಸ್‌ ಇಲ್ಲದ ವಿರೋಧ ಪಕ್ಷಗಳ ಒಕ್ಕೂಟವನ್ನು ರಚಿಸಲು ಸಾಧ್ಯವೇ’ ಎಂದು ಪ್ರಶ್ನಿಸಿದರು. ಇದಕ್ಕೆ ರಾವ್ ಅವರು, ‘ಒಕ್ಕೂಟ ರಚಿಸುವ ಪ್ರಕ್ರಿಯೆಯನ್ನು ಇನ್ನಷ್ಟೇ ಆರಂಭಿಸಿದ್ದೇವೆ. ಮುಂದಿನ ದಿನಗಳಲ್ಲಿ ಇತರರನ್ನೂ ಭೇಟಿ ಮಾಡಲಿದ್ದೇವೆ’ ಎಂದು ಅವರು ಹೇಳಿದ್ದಾರೆ.

ಮಹಾರಾಷ್ಟ್ರದ ಮಹಾ ವಿಕಾಸ ಅಘಾಡಿ ನೇತೃತ್ವದ ಸರ್ಕಾರದಲ್ಲಿ ಶಿವಸೇನಾ ಮತ್ತು ಎನ್‌ಸಿಪಿಯ ಜತೆ ಕಾಂಗ್ರೆಸ್‌ ಸಹ ಮೈತ್ರಿಕೂಟದ ಪಾಲುದಾರ. ಆದರೆ ಕಾಂಗ್ರೆಸ್‌ ಅನ್ನು ಹೊರತುಪಡಿಸಿ ಒಕ್ಕೂಟ ರಚಿಸುವ ಬಗ್ಗೆ ಈ ಹಿಂದೆ ಸ್ಪಷ್ಟವಾಗಿ ಮಾತನಾಡಿದ್ದ ರಾವ್ ಅವರು, ಭಾನುವಾರದ ಭೇಟಿಯ ನಂತರ ಇತರರ ಜತೆ ಚರ್ಚಿಸಿ ತೀರ್ಮಾನಿಸುತ್ತೇವೆ ಎಂದು ಹೇಳಿದ್ದಾರೆ.

‘ಬಾರಾಮತಿಯಲ್ಲಿ ಮತ್ತೆ ಎಲ್ಲಾ ಸಭೆ ಸೇರಲಿದ್ದೇವೆ. ನಮ್ಮ ಜತೆ ಸೇರಬೇಕು ಎಂದಿರುವವರು, ನಮ್ಮೊಂದಿಗೆ ಸೇರಲಿ. ನಾವು ನಮ್ಮ ಕಾರ್ಯಸೂಚಿಯನ್ನು ಮುಂದಿಡುತ್ತೇವೆ’ ಎಂದಷ್ಟೇ ಅವರು ಹೇಳಿದ್ದಾರೆ.

ಕಾಂಗ್ರೆಸ್ ಅನ್ನು ಒಕ್ಕೂಟದಲ್ಲಿ ಸೇರಿಸಿಕೊಳ್ಳುವ ಬಗ್ಗೆ ಶಿವಸೇನಾ ಮತ್ತು ಎನ್‌ಸಿಪಿ ಭಾನುವಾರ ಏನನ್ನೂ ಹೇಳಿಲ್ಲ.

* ಶಿವಸೇನಾ, ಟಿಆರ್‌ಎಸ್‌ ಬಿಜೆಪಿ ಮಿತ್ರಪಕ್ಷಗಳಾಗಿದ್ದವು. ಅವನ್ನು ಮುಗಿಸುವ ಬಿಜೆಪಿ ತಂ‌ತ್ರ ಅವರಿಗೆ ಅರ್ಥವಾಗಿದೆ. ಆದರೆ ಕಾಂಗ್ರೆಸ್‌ ಇಲ್ಲದ ಇಂತಹ ಒಕ್ಕೂಟ ಸಾಧ್ಯವಿಲ್ಲ.

-ನಾನಾ ಪಟೋಲೆ, ಮಹಾರಾಷ್ಟ್ರ ಕಾಂಗ್ರೆಸ್‌ ಅಧ್ಯಕ್ಷ

* ನಮ್ಮ ಸಭೆ ಫಲಪ್ರದವಾಗಿತ್ತು. ಮುಂದಿನ ದಿನಗಳಲ್ಲಿ ಮತ್ತಷ್ಟು ಸಭೆಗಳನ್ನು ನಡೆಸುತ್ತೇವೆ. ದೇಶ ಸ್ವಾತಂತ್ರ್ಯದ 75ನೇ ವರ್ಷವನ್ನು ಪೂರೈಸುತ್ತಿದೆ. ಆದರೆ ಹಲವು ಸಮಸ್ಯೆಗಳು ಇನ್ನೂ ಇವೆ. ಕೇಂದ್ರ ಸರ್ಕಾರವು ತನಿಖಾ ಸಂಸ್ಥೆಗಳನ್ನು ಗರಿಷ್ಠ ಪ್ರಮಾಣದಲ್ಲಿ ದುರ್ಬಳಕೆ ಮಾಡಿಕೊಳ್ಳುತ್ತಿದೆ. ನಾವೆಲ್ಲರೂ ಒಟ್ಟಾಗಿ ಬದುಕಬೇಕು. ಹೀಗಾಗಿ ಹಲವು ರಾಷ್ಟ್ರೀಯ ನಾಯಕರು ಮತ್ತು ಪ್ರಾದೇಶಿಕ ನಾಯಕರನ್ನು ಭೇಟಿ ಮಾಡುತ್ತಿದ್ದೇವೆ. ನಮ್ಮ ಮುಂದೆ ಹೊಸ ಭರವಸೆ ಇದೆ. ಹೊಸ ಹುರುಪು ಮತ್ತು ಹೊಸ ಕಾರ್ಯಸೂಚಿಯೊಂದಿಗೆ ಸಮಾನ ಮನಸ್ಕರೆಲ್ಲರನ್ನೂ ಒಳಗೊಳ್ಳುತ್ತಿದ್ದೇವೆ

-ಕೆ. ಚಂದ್ರಶೇಖರ ರಾವ್, ತೆಲಂಗಾಣ ಮುಖ್ಯಮಂತ್ರಿ

* ನಮ್ಮದು ಸೇಡಿನ ಹಿಂದುತ್ವವಲ್ಲ. ಸೇಡಿನ ರಾಜಕಾರಣ ಹಿಂದುತ್ವವೂ ಅಲ್ಲ, ಭಾರತೀಯ ಸಂಸ್ಕೃತಿಯೂ ಅಲ್ಲ. ಈ ಸ್ಥಿತಿ ಬದಲಾಗಬೇಕು. ಇದೇ ಸ್ಥಿತಿ ಮುಂದುವರಿದರೆ ಭಾರತದ ಸ್ಥಿತಿ ಏನಾಗಬಹುದು? ನಮ್ಮ ರಾಜಕೀಯ ಎದುರಾಳಿಗಳು ತಮ್ಮ ಅವಧಿಯಲ್ಲಿನ ಅಭಿವೃದ್ಧಿಯ ಬಗ್ಗೆ ಮಾತನಾಡುವ ಬದಲಿಗೆ ಸುಳ್ಳು, ತಪ್ಪು ಮಾಹಿತಿಗಳನ್ನು ಹರಡುತ್ತಿದ್ದಾರೆ

-ಉದ್ಧವ್ ಠಾಕ್ರೆ, ಮಹಾರಾಷ್ಟ್ರ ಮುಖ್ಯಮಂತ್ರಿ

* ನಾವು ಭೇಟಿ ಮಾಡಿದಾಗಲೆಲ್ಲಾ ರಾಜಕಾರಣದ ಬಗ್ಗೆ ಚರ್ಚಿಸುತ್ತೇವೆ. ನಿರುದ್ಯೋಗ, ಬಡತನ, ರೈತರ ಸಾವು ಮತ್ತು ದೇಶದ ಇತರ ಪ್ರಮುಖ ಸಮಸ್ಯೆಗಳ ಬಗ್ಗೆ ಚರ್ಚಿಸುತ್ತೇವೆ. ರಾಜಕಾರಣದ ಚರ್ಚೆ ಎಂಬುದು ಅಭಿವೃದ್ಧಿಯ ಚರ್ಚೆ ಮಾತ್ರ. ತೆಲಂಗಾಣ ಸರ್ಕಾರವು ರೈತರ ಸಮಸ್ಯೆಗಳನ್ನು ಬಗೆಹರಿಸಿದ ಬಗ್ಗೆಯೂ ಚರ್ಚಿಸಿದ್ದೇವೆ

-ಶರದ್ ಪವಾರ್, ಎನ್‌ಸಿಪಿ ಮುಖ್ಯಸ್ಥ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT