ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಕ್ಷದ್ವೀಪದ ಆಡಳಿತಾಧಿಕಾರಿಯನ್ನು ವಾಪಸ್‌ ಕರೆಸಿಕೊಳ್ಳಿ: ಪಿಣರಾಯಿ ವಿಜಯನ್

ವಿಧಾನಸಭೆಯಲ್ಲಿ ಸಿಎಂ ಮಂಡಿಸಿದ ನಿರ್ಣಯ ಸರ್ವಾನುಮತದಿಂದ ಅಂಗೀಕಾರ
Last Updated 31 ಮೇ 2021, 8:59 IST
ಅಕ್ಷರ ಗಾತ್ರ

ತಿರುವನಂತರಪುಂ: ಲಕ್ಷದ್ವೀಪ ಸಮೂಹದಲ್ಲಿ ಅಲ್ಲಿನ ನಿವಾಸಿಗಳ ಜೀವನ ಶೈಲಿ ಮತ್ತು ಪರಿಸರ ವ್ಯವಸ್ಥೆಯನ್ನು ನಾಶಗೊಳಿಸುವಂತಹ ಕ್ರಮಗಳನ್ನು ಕೈಗೊಂಡಿರುವ ಆಡಳಿತಾಧಿಕಾರಿ ಪ್ರಫುಲ್ ಖೋಡಾ ಪಟೇಲ್ ಅವರನ್ನು ವಾಪಸ್ ಕರೆಸಿಕೊಳ್ಳಬೇಕೆಂದು ಕೋರಿ ಕೇರಳ ವಿಧಾನಸಭೆಯಲ್ಲಿ ಸೋಮವಾರ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮಂಡಿಸಿದ್ದ ನಿರ್ಣಯವನ್ನು ಸರ್ವಾನುಮತದಿಂದ ಅಂಗೀಕರಿಸಲಾಯಿತು.

ಲಕ್ಷದ್ವೀಪದ ಜನರೊಂದಿಗೆ ಒಗ್ಗಟ್ಟು ಪ್ರದರ್ಶಿಸುವ ನಿಟ್ಟಿನಲ್ಲಿ ಸೋಮವಾರ ಬೆಳಿಗ್ಗೆ ಪಿಣರಾಯಿ ವಿಜಯನ್ ಅವರು ವಿಧಾನಸಭೆಯಲ್ಲಿ ಈ ನಿರ್ಣಯವನ್ನು ಮಂಡಿಸಿದ್ದರು.

ಇತ್ತೀಚೆಗೆ ಲಕ್ಷದ್ವೀಪದ ಆಡಳಿತಾಧಿಕಾರಿ ಕೈಗೊಂಡಿರುವ ಕ್ರಮಗಳು ದ್ವೀಪ ಸಮೂಹದಲ್ಲಿನ ಸ್ಥಳೀಯ ಜೀವನಶೈಲಿ ಮತ್ತು ಪರಿಸರ ವ್ಯವಸ್ಥೆಯನ್ನು ನಾಶಮಾಡುವಂತದ್ದು. ಈ ಹಿನ್ನೆಲೆಯಲ್ಲಿ ಆಡಳಿತಾಧಿಕಾರಿ ಪ್ರಪುಲ್ ಪಟೇಲ್ ಅವರನ್ನು ವಾಪಸ್ ಕರೆಸಿಕೊಂಡು, ದ್ವೀಪವಾಸಿಗಳ ಜೀವನ ಮತ್ತು ಜೀವನವನ್ನು ರಕ್ಷಿಸಲು ಕೇಂದ್ರ ಮಧ್ಯಪ್ರವೇಶಿಸುವಂತೆ ನಿರ್ಣಯದಲ್ಲಿ ಕೋರಲಾಗಿದೆ.

ಈಗ ಕೈಗೊಂಡಿರುವ ಕ್ರಮಗಳು ದ್ವೀಪ ಸಮೂಹದಲ್ಲಿ ಹಿಂಬಾಗಿಲಿನ ಮೂಲಕ ‘ತನ್ನ ಕೇಸರಿ ಕಾರ್ಯಸೂಚಿ‘ಯನ್ನು ಜಾರಿಗೆ ತರುವ ಪ್ರಯತ್ನವಾಗಿದೆ. ಈ ಮೂಲಕ ಸ್ಥಳೀಯ ಜನರ ಜೀವನದ ಹಕ್ಕನ್ನು ನಿಯಂತ್ರಿಸಲಾಗುತ್ತಿದೆ. ಈ ಕಾರ್ಯಸೂಚಿಯ ಒಂದು ಉದಾಹರಣೆಯಾಗಿ ನಾವು ಅಲ್ಲಿ ತೆಂಗಿನ ಮರಗಳನ್ನು ಕೇಸರಿ ಬಣ್ಣದಿಂದ ಚಿತ್ರಿಸಿರುವುದನ್ನು ಕಾಣಬಹುದು. ಇದನ್ನು ನಾವು ವಿರೋಧಿಸುತ್ತೇವೆ ಎಂದು ನಿರ್ಣಯದಲ್ಲಿ ಉಲ್ಲೇಖಿಸಲಾಗಿದೆ.

ಇದೇ ವೇಳೆ, ಮುಖ್ಯಮಂತ್ರಿ ಪಿಣರಾಯಿ ವಿಜಯನ್, ‘ಲಕ್ಷದ್ವೀಪದಲ್ಲಿ ಕೇಸರಿ ಕಾರ್ಯಸೂಚಿ ಮತ್ತು ಸಾಂಸ್ಥಿಕ ಹಿತಾಸಕ್ತಿಗಳನ್ನು ಹೇರಲು ಮತ್ತು ಜಾರಿಗೆ ತರಲು ಪ್ರಯತ್ನ ನಡೆಯುತ್ತಿದೆ‘ ಎಂದು ಆರೋಪಿಸಿದರು. ಕೇಂದ್ರ ಸರ್ಕಾರ ತಕ್ಷಣವೇ ಈ ವಿಷಯದಲ್ಲಿ ಮಧ್ಯೆ ಪ್ರವೇಶಿಸಬೇಕು. ಲಕ್ಷದ್ವೀಪ ಜನರ ಹಿತಾಸಕ್ತಿ ಕಾಪಾಡುವುದು ಕೇಂದ್ರ ಸರ್ಕಾರದ ಜವಾಬ್ದಾರಿ‘ ಎಂದು ಒತ್ತಾಯಿಸಿದರು.

ಕೇರಳ ಮತ್ತು ಲಕ್ಷದ್ವೀಪಗಳ ನಡುವಿನ ಐತಿಹಾಸಿಕ ಮತ್ತು ಸಾಂಸ್ಕೃತಿಕ ಬಾಂಧವ್ಯವನ್ನು ನೆನಪಿಸುವ ಮತ್ತು ಅಲ್ಲಿನ ನೈಸರ್ಗಿಕ ಪ್ರಜಾಪ್ರಭುತ್ವವನ್ನು ನಾಶಮಾಡಲು ಯತ್ನಿಸುತ್ತಿದೆ ಎಂದು ಕೇರಳ ಸರ್ಕಾರ ಕೇಂದ್ರವನ್ನು ಟೀಕಿಸಿದೆ.

‘ಲಕ್ಷದ್ವೀಪದ ಭವಿಷ್ಯ ಕಳವಳಕಾರಿ ಸಂಗತಿಯಾಗಿದೆ ಎಂದು ಹೇಳಿದ ವಿಜಯನ್‌, ಅದರ ವಿಶಿಷ್ಟ ಸಂಸ್ಕೃತಿ ಮತ್ತು ಸ್ಥಳೀಯ ಜೀವನಶೈಲಿಯನ್ನು ದುರ್ಬಲಗೊಳಿಸುವ ಯಾವುದೇ ಪ್ರಯತ್ನ ಒಪ್ಪುವಂತಹದ್ದಲ್ಲ‘ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT