ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Kerala Election 2021: ಕಾಂಗ್ರೆಸ್‌ನಲ್ಲಿ ಗುಂಪುಗಾರಿಕೆ; ಪಿಸಿ ಚಾಕೋ ರಾಜೀನಾಮೆ

Last Updated 10 ಮಾರ್ಚ್ 2021, 18:07 IST
ಅಕ್ಷರ ಗಾತ್ರ

ನವದೆಹಲಿ/ಕೊಚ್ಚಿನ್: ಚುನಾವಣೆ ಹೊಸ್ತಿಲಲ್ಲಿ ಕಾಂಗ್ರೆಸ್‌ನ ಕೇರಳ ಘಟಕಕ್ಕೆ ಆಘಾತ ಎದುರಾಗಿದ್ದು, ಹಿರಿಯ ಮುಖಂಡ ಪಿ.ಸಿ. ಚಾಕೊ ಪಕ್ಷಕ್ಕೆ ಬುಧವಾರ ರಾಜೀನಾಮೆ ನೀಡಿದ್ದಾರೆ. ವಿಧಾನಸಭಾ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆಯಲ್ಲಿ ಗುಂಪುಗಾರಿಕೆ ನಡೆಯುತ್ತಿದೆ ಎಂದು ಅವರು ಆರೋಪಿಸಿದ್ದಾರೆ.

ಪಕ್ಷದ ಕಾರ್ಯಕಾರಿ ಸಮಿತಿಯ ಸದಸ್ಯರಾಗಿದ್ದ ಚಾಕೊ ಅವರು, ಪಕ್ಷದ ರಾಷ್ಟ್ರೀಯ ನಾಯಕತ್ವವು ಕಳೆದ ಎರಡು ವರ್ಷಗಳಿಂದ ನಿಷ್ಕ್ರಿಯವಾಗಿದೆ ಎಂದು ಆರೋಪಿಸಿದ್ದಾರೆ.

ತಮ್ಮ ಮುಂದಿನ ನಡೆ ಏನು ಎಂದು ಸ್ಪಷ್ಟವಾಗಿ ಹೇಳದ ಅವರು, ‘ಬಿಜೆಪಿಯು ದಕ್ಷಿಣ ಭಾರತದಲ್ಲಿ ರಾಜಕೀಯ ಶಕ್ತಿ ಅಲ್ಲ’ ಎಂದು ಅಭಿಪ್ರಾಯಪಟ್ಟಿದ್ದಾರೆ.

‘ಕಾಂಗ್ರೆಸ್‌ನ ಕೇರಳ ಘಟಕದಲ್ಲಿ ಪ್ರಜಾಪ್ರಭುತ್ವ ಎಂಬುದೇ ಇಲ್ಲ. ರಾಜ್ಯ ಕಾಂಗ್ರೆಸ್ ಸಮಿತಿಯಲ್ಲಿ ಅಭ್ಯರ್ಥಿಗಳ ಪಟ್ಟಿ ಚರ್ಚೆಗೇ ಬಂದಿಲ್ಲ’ ಎಂದು ಚಾಕೊ ದೂರಿದ್ದಾರೆ. ‘ರಾಜ್ಯ ಘಟಕದಲ್ಲಿ ಎರಡು ಗುಂಪುಗಳಿವೆ. ಒಂದು ತಂಡದ ನೇತೃತ್ವವನ್ನು ಮಾಜಿ ಮುಖ್ಯಮಂತ್ರಿ ಉಮ್ಮನ್ ಚಾಂಡಿ ವಹಿಸಿದ್ದರೆ, ಮತ್ತೊಂದು ತಂಡವನ್ನು ರಮೇಶ್ ಚೆನ್ನಿತ್ತಲ ಮುನ್ನಡೆಸುತ್ತಿದ್ದಾರೆ. ಚುನಾವಣಾ ಕಣಕ್ಕೆ ಯಾರು ಧುಮುಕಬೇಕು ಎಂದು ಈ ಇಬ್ಬರೇ ನಿರ್ಧರಿಸುತ್ತಿದ್ದಾರೆ’ ಎಂದು ಚಾಕೊ ಆರೋಪಿಸಿದ್ದಾರೆ.

ಕೇರಳ: 33 ಹಾಲಿ ಶಾಸಕರಿಗೆ ಟಿಕೆಟ್ ಇಲ್ಲ
ತಿರುವನಂತಪುರ:
ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹಾಗೂ ಏಳು ಸಚಿವರಿಗೆ ಮುಂಬರುವ ಚುನಾವಣೆಯಲ್ಲಿ ಟಿಕೆಟ್ ಘೋಷಿಸಲಾಗಿದೆ.

ಪ್ರಕಟವಾಗಿರುವ 83 ಅಭ್ಯರ್ಥಿಗಳ ಪಟ್ಟಿಯಲ್ಲಿ ಥಾಮಸ್ ಐಸಾಕ್ ಸೇರಿದಂತೆ 33 ಮಂದಿ ಹಾಲಿ ಶಾಸಕರಿಗೆ ಜಾಗ ಸಿಕ್ಕಿಲ್ಲ.

ಯುವಜನತೆ ಹಾಗೂ ಮಹಿಳೆಯರನ್ನು ತಲುಪುವ ಗುರಿ ಹಾಕಿಕೊಂಡಿರುವ ಸಿಪಿಎಂ ನೇತೃತ್ವದ ಎಲ್‌ಡಿಎಫ್ ಮೈತ್ರಿಕೂಟವು ಹೊಸಮುಖಗಳಿಗೆ ಈ ಬಾರಿ ಹೆಚ್ಚು ಮಣೆ ಹಾಕಿದೆ. ವಿಧಾನಸಭೆ ಸ್ಪೀಕರ್ ಕೆ.ಶ್ರೀರಾಮಕೃಷ್ಣನ್ (73) ಅವರಿಗೆ ವಯಸ್ಸಿನ ಕಾರಣಕ್ಕೆ ಈ ಬಾರಿ ಟಿಕೆಟ್ ನೀಡಲಾಗಿಲ್ಲ.

ಹಿರಿಯ ಸಚಿವರಾದ ಇ.ಪಿ. ಜಯರಾಜನ್, ಎ.ಕೆ. ಬಾಲನ್, ಪ್ರೊ. ರವೀಂದ್ರನಾಥ್ ಹಾಗೂ ಸುಧಾಕರನ್ ಅವರು ಟಿಕೆಟ್ ವಂಚಿತರ ಪಟ್ಟಿಯಲ್ಲಿದ್ದಾರೆ.

ಪಕ್ಷ ಅಳವಡಿಸಿಕೊಂಡಿರುವ ಎರಡು ಅವಧಿಯ ಅಧಿಕಾರ ಸೂತ್ರದ ಅನ್ವಯ ಇವರನ್ನು ಕೈಬಿಟ್ಟು ಹೊಸಬರಿಗೆ ಆದ್ಯತೆ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ರಾಷ್ಟ್ರೀಯ ಮಟ್ಟದಲ್ಲಿ ಜಾತ್ಯತೀತ ಕಾರಣಗಳಿಗಾಗಿ ಹೋರಾಟವನ್ನು ಬಲಪಡಿಸಲು ಪಕ್ಷ ಮತ್ತೆ ಅಧಿಕಾರಕ್ಕೆ ಬರುವುದು ಅಗತ್ಯ ಎಂದು ಸಿಪಿಎಂ ರಾಜ್ಯ ಕಾರ್ಯದರ್ಶಿ ಎ. ವಿಜಯರಾಘವನ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT