ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರ ಪ್ರದೇಶವು ಕೇರಳವಾದರೆ ಉತ್ತಮ: ಪಿಣರಾಯಿ ತಿರುಗೇಟು

Last Updated 10 ಫೆಬ್ರುವರಿ 2022, 20:30 IST
ಅಕ್ಷರ ಗಾತ್ರ

ಲಖನೌ : ಉತ್ತರ ಪ್ರದೇಶವು ಕಾಶ್ಮೀರ, ಕೇರಳ ಅಥವಾ ಪಶ್ಚಿಮ ಬಂಗಾಳದಂತೆ ಆಗುವುದು ಬೇಡದಿದ್ದರೆ ಬಿಜೆಪಿಗೆ ಮತ ಹಾಕಿ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಹೇಳಿರುವುದು ಬಿಜೆಪಿಯೇತರ ಪಕ್ಷಗಳ ತೀವ್ರ ಟೀಕೆಗೆ ಕಾರಣವಾಗಿದೆ.

ಉತ್ತರ ಪ್ರದೇಶದಲ್ಲಿ ಮೊದಲ ಹಂತದ ಮತದಾನಕ್ಕೆ ಮುನ್ನಾದಿನ ಆರು ನಿಮಿಷಗಳ ವಿಡಿಯೊವನ್ನು ಟ್ವಿಟರ್‌ನಲ್ಲಿ ಆದಿತ್ಯನಾಥ ಪ್ರಕಟಿಸಿದ್ದಾರೆ.

‘ಎಚ್ಚರದಲ್ಲಿ ಇರಿ. ಈ ಬಾರಿ ನೀವು ಎಡವಿದರೆ ಐದು ವರ್ಷದ ಪ್ರಯತ್ನಗಳೆಲ್ಲವೂ ತೊಳೆದು ಹೋಗಲಿದೆ. ಉತ್ತರ ಪ್ರದೇಶವು ಕಾಶ್ಮೀರ, ಕೇರಳ ಅಥವಾ ಪಶ್ಚಿಮ ಬಂಗಾಳ ಆಗಲು ಹೆಚ್ಚು ಹೆಚ್ಚು ಸಮಯ ಬೇಕಿಲ್ಲ’ ಎಂದು ವಿಡಿಯೊದಲ್ಲಿ ಅವರು ಹೇಳಿದ್ದಾರೆ.

ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌, ವಿಧಾನಸಭೆಯ ವಿರೋಧ ಪಕ್ಷದ ನಾಯಕ ವಿ.ಡಿ. ಸತೀಶನ್‌ ಮತ್ತು ಪಶ್ಚಿಮ ಬಂಗಾಳದ ಬಿಜೆಪಿಯೇತರ ಪಕ್ಷಗಳ ಮುಖಂಡರು ಯೋಗಿ ಹೇಳಿಕೆಯನ್ನು ಖಂಡಿಸಿದ್ದಾರೆ. ‘ಆದಿತ್ಯನಾಥ ಅವರು ಭಯಪಟ್ಟಂತೆ ಉತ್ತರ ಪ್ರದೇಶವು ಕೇರಳವಾದರೆ, ರಾಜ್ಯಕ್ಕೆ ಉತ್ತಮ ಶಿಕ್ಷಣ, ಆರೋಗ್ಯ ಸೇವೆ, ಸಾಮಾಜಿಕ ಸೌಲಭ್ಯಗಳು, ಉತ್ತಮ ಗುಣಮಟ್ಟದ ಜೀವನ ದೊರೆಯಲಿದೆ’ ಎಂದು ಪಿಣರಾಯಿ ವಿಜಯನ್‌ ಅವರು ಟ್ವೀಟ್‌ ಮಾಡಿದ್ದಾರೆ.

‘ಸಮಾಜವು ಸೌಹಾರ್ದಯುತ ಆಗಲಿದ್ದು ಧರ್ಮ ಮತ್ತು ಜಾತಿಯ ಹೆಸರಿನಲ್ಲಿ ಜನರ ಹತ್ಯೆ ಆಗುವುದಿಲ್ಲ. ಉತ್ತರ ಪ್ರದೇಶದ ಜನರಿಗೆ ಬೇಕಾಗಿರುವುದು ಇದುವೇ’ ಎಂದೂ ಅವರು ಅವರು ಟ್ವೀಟ್‌ ಮಾಡಿದ್ದಾರೆ.

‘ಉತ್ತರ ಪ್ರದೇಶರ ಜನರೇ, ಕೇರಳದಂತೆ ಆಗುವುದಕ್ಕಾಗಿ ಮತ ಹಾಕಿ. ಮಧ್ಯಯುಗದ ಧರ್ಮಾಂಧತೆಯ ಬದಲು ಬಹುತ್ವ, ಸಾಮರಸ್ಯ, ಎಲ್ಲರನ್ನೂ ಒಳಗೊಂಡ ಅಭಿವೃದ್ಧಿಯನ್ನು ಆಯ್ಕೆ ಮಾಡಿ. ಕೇರಳಿಗರು, ಕಾಶ್ಮೀರಿಗಳು ಮತ್ತು ಬಂಗಾಳಿಗಳೆಲ್ಲರೂ ಹೆಮ್ಮೆಯ ಭಾರತೀಯರೇ’ ಎಂದು ಸತೀಶನ್‌ ಹೇಳಿದ್ದಾರೆ.

‘ಆದಿತ್ಯನಾಥ ಅವರು ಹತಾಶರಾಗಿದ್ದು, ಜನರನ್ನು ವಿಭಜಿಸಲು ಯತ್ನಿಸುತ್ತಿದ್ದಾರೆ. ಕಷ್ಟ ಇದೆ ಅನ್ನಿಸಿದಾಗ ಹೀಗೆ ಮಾಡುವುದು ಬಿಜೆಪಿಯ ಹಳೆಯ ಆಟ. ಉತ್ತರ ಪ್ರದೇಶ ವಿಧಾನಸಭೆ
ಚುನಾವಣೆಯಲ್ಲಿ ಸೋಲು ಖಚಿತ ಎಂಬುದು ಬಿಜೆಪಿಗೆ ಮನವರಿಕೆ ಆಗಿದೆ. ಪಶ್ಚಿಮ ಬಂಗಾಳದಲ್ಲಿರುವ ಶಾಂತಿ ಮತ್ತು ಸೌಹಾರ್ದವನ್ನು ನಕಾರಾತ್ಮಕವಾಗಿ ತೋರಿಸಿ ಜನರಲ್ಲಿ ಸಂಘರ್ಷದ ಬೀಜ ಬಿತ್ತಲು ಬಿಜೆಪಿ ಶ್ರಮಿಸುತ್ತಿದೆ’ ಎಂದು ಟಿಎಂಸಿಯ ರಾಜ್ಯಸಭಾ ಸದಸ್ಯ ಸಂತನು ಸೇನ್‌ ಹೇಳಿದ್ದಾರೆ.

‘ಆದಿತ್ಯನಾಥ ಅವರು ಪ್ರತಿಪಾದಿಸುವ ಭಾರತದ ದೃಷ್ಟಿಕೋನವನ್ನು ನಾವು ಒಪ್ಪುವುದಿಲ್ಲ. ಈ ದೃಷ್ಟಿಕೋನವು ವಿವಿಧ ಧರ್ಮಗಳು ಮತ್ತು ನಂಬಿಕೆಗಳಿಗೆ ಕುಂದು ಉಂಟು ಮಾಡುತ್ತದೆ. ಹಿಂದೂ ರಾಷ್ಟ್ರ ಕಲ್ಪನೆಯನ್ನು ನಾವು ವಿರೋಧಿಸುತ್ತೇವೆ’ ಎಂದು ಸಿಪಿಎಂ ಮುಖಂಡ ಸುಜನ್‌ ಚಕ್ರವರ್ತಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT