ಗುರುವಾರ , ಅಕ್ಟೋಬರ್ 29, 2020
20 °C
ಎಲ್‌ಡಿಎಫ್‌ ಜೊತೆಗೆ ಕೈಜೋಡಿಸಲು ತೀರ್ಮಾನ

ಕೇರಳ: ಯುಡಿಎಫ್‌ ತೊರೆದ ಕೇರಳ ಕಾಂಗ್ರೆಸ್‌(ಎಂ) ಪಕ್ಷ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಕೋಟ್ಟಯಂ(ಕೇರಳ): ಕೇರಳದಲ್ಲಿ ಕಾಂಗ್ರೆಸ್‌ ನೇತೃತ್ವದ ಯುಡಿಎಫ್‌ ಮೈತ್ರಿಕೂಟದೊಂದಿಗಿನ ದಶಕಗಳ ನಂಟನ್ನು ಕಡಿದುಕೊಳ್ಳಲು ರಾಜ್ಯಸಭಾ ಸದಸ್ಯ ಜೋಸ್‌ ಕೆ.ಮಾಣಿ ನೇತೃತ್ವದ ಕೇರಳ ಕಾಂಗ್ರೆಸ್‌(ಎಂ) ಪಕ್ಷವು ನಿರ್ಧರಿಸಿದ್ದು, ರಾಜ್ಯದಲ್ಲಿ ಎಲ್‌ಡಿಎಫ್‌ ಜೊತೆಗೆ ಕೈಜೋಡಿಸಲು ತೀರ್ಮಾನಿಸಿದೆ. 

ಪ್ರಮುಖ ಪ್ರಾದೇಶಿಕ ಪಕ್ಷಗಳಲ್ಲಿ ಒಂದಾದ ಕೇರಳ ಕಾಂಗ್ರೆಸ್‌(ಎಂ) ಪಕ್ಷದ ಈ ನಿರ್ಧಾರವು ಕೇರಳದಲ್ಲಿ ಆಡಳಿತದಲ್ಲಿರುವ ಎಲ್‌ಡಿಎಫ್‌ಗೆ ಮುಂದಿನ ವರ್ಷ ನಡೆಯಲಿರುವ ವಿಧಾನಸಭೆ ಚುನಾವಣೆಗೂ ಮುನ್ನವೇ ಮತ್ತಷ್ಟು ಬಲ ತುಂಬಿದೆ. ಕೇರಳದ ದಕ್ಷಿಣ ಹಾಗೂ ಕೇಂದ್ರ ಭಾಗದಲ್ಲಿರುವ ಕ್ರಿಶ್ಚಿಯನ್‌ಗಳ ಮತದ ಮೇಲೆ ಕೆಸಿ(ಎಂ) ಪ್ರಭಾವವನ್ನು ಹೊಂದಿದ್ದು, ಹೊಸ ಪಕ್ಷದ ಸೇರ್ಪಡೆಯು ಎಲ್‌ಡಿಎಫ್‌ಗೆ ಲಾಭವಾಗಲಿದೆ ಎಂದು ವಿಶ್ಲೇಷಿಸಲಾಗಿದೆ. ಯುಡಿಎಫ್‌ ಬೆಂಬಲದೊಂದಿಗೆ ಗೆದ್ದ ರಾಜ್ಯಸಭಾ ಸದಸ್ಯ ಸ್ಥಾನಕ್ಕೂ ರಾಜೀನಾಮೆ ನೀಡುವುದಾಗಿ ಮಾಣಿ ಅವರು ತಿಳಿಸಿದ್ದಾರೆ.

ಬುಧವಾರ, ಸುದ್ದಿಗೋಷ್ಠಿಯಲ್ಲಿ ಪಕ್ಷದ ನಿರ್ಧಾರದ ಕುರಿತು ಪ್ರಕಟಿಸಿದ ಮಾಣಿ ಅವರು ಎಲ್‌ಡಿಎಫ್‌ ನಾಯಕತ್ವವು, ತಮ್ಮ ಪಕ್ಷವನ್ನು ಸೇರ್ಪಡೆಗೊಳಿಸಿಕೊಳ್ಳುವ ಕುರಿತು ನಿರ್ಧಾರ ತೆಗೆದುಕೊಳ್ಳುವ ವಿಶ್ವಾಸ ವ್ಯಕ್ತಪಡಿಸಿದರು.

‘ ಸಿಪಿಐಎಂ ನೇತೃತ್ವದ ಎಲ್‌ಡಿಎಫ್‌ ದೇಶದಲ್ಲಿ ಜಾತ್ಯತೀತೆಯನ್ನು ರಕ್ಷಿಸಲು ತೆಗೆದುಕೊಂಡ ಪ್ರಯತ್ನಗಳನ್ನು ಶ್ಲಾಘನೀಯ. ರೈತರ ಏಳಿಗೆಗಾಗಿ ಎಲ್‌ಡಿಎಫ್‌ ಸರ್ಕಾರ ಶ್ರಮಿಸುತ್ತಿದೆ. ನಮ್ಮ ಪಕ್ಷದ ಆಶಯವೂ ಇದೇ ಆಗಿದೆ’ ಎಂದು ಕೇರಳ ಕಾಂಗ್ರೆಸ್‌(ಎಂ)ಪಕ್ಷದ ಖ್ಯಾತ ನಾಯಕರಾಗಿದ್ದ ಕೆ.ಎಂ.ಮಾಣಿ ಅವರ ಮಗನಾಗಿರುವ ಜೋಸ್‌ ಕೆ.ಮಾಣಿ ತಿಳಿಸಿದರು.

‘ಸ್ಥಳೀಯ ಚುನಾವಣೆಗೆ ಸಂಬಂಧಿಸಿದ ಸ್ಥಾನದ ವಿಷಯದಲ್ಲಿ ಕಾಂಗ್ರೆಸ್‌ ನಾಯಕತ್ವವು ನಮ್ಮ ಪಕ್ಷವನ್ನೇ ಯುಡಿಎಫ್‌ನಿಂದ ಹೊರಹಾಕಿತ್ತು. ಯುಡಿಎಫ್‌ ಕಟ್ಟಿ ಬೆಳೆಸಿದ್ದ ನನ್ನ ತಂದೆಯ ಪರವಾಗಿದ್ದ ಶಾಸಕರನ್ನು ಹಾಗೂ ನಾಯಕರನ್ನು ಯುಡಿಎಫ್‌ ಅವಮಾನಿಸಿತು. ನಮ್ಮ ಪ‍ಕ್ಷದ ಶಾಸಕರ ವಿರುದ್ಧವೇ ಯುಡಿಎಫ್‌ನ ಭಾಗವಾಗಿದ್ದ  ಪಿ.ಜೆ.ಜೋಸೆಫ್‌ ಅವರು ವೈಯಕ್ತಿಕ ನಿಂದನೆ ಮಾಡಿದರು.

ಸಭೆಯಲ್ಲಿ ನಿರ್ಧಾರ: ಕೇರಳ ಕಾಂಗ್ರೆಸ್‌ ಪಕ್ಷದ ನಿರ್ಧಾರದ ಕುರಿತು ಪ್ರಕಟಣೆ ಮೂಲಕ ಪ್ರತಿಕ್ರಿಯೆ ನೀಡಿರುವ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌, ‘ಯುಡಿಎಫ್‌ ಜೊತೆಗಿನ 38 ವರ್ಷದ ಮೈತ್ರಿಯನ್ನು ಕಡಿದುಕೊಂಡು, ಕೇರಳ ಕಾಂಗ್ರೆಸ್‌ ಪಕ್ಷವು ಎಲ್‌ಡಿಎಫ್‌ ಕುರಿತ ತಮ್ಮ ನಿಲುವನ್ನು ಪ್ರಕಟಿಸಿದೆ. ಕೇರಳ ಕಾಂಗ್ರೆಸ್‌ ಪಕ್ಷದ ಸೇರ್ಪಡೆ ಕುರಿತು ಎಲ್‌ಡಿಎಫ್‌ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗುವುದು’ ಎಂದು ತಿಳಿಸಿದ್ದಾರೆ. 

ಬೆನ್ನಿಗೆ ಚೂರಿ: ಮಾಣಿ ಅವರ ಈ ನಿರ್ಧಾರವನ್ನು ಟೀಕಿಸಿರುವ ಯುಡಿಎಫ್‌ ನಾಯಕರು, ಯುಡಿಎಫ್‌ ಅವರನ್ನು ರಾಜ್ಯಸಭಾ ಸದಸ್ಯರನ್ನಾಗಿ ಮಾಡಿತ್ತು ಆದರೆ ಜೋಸ್‌ ನೇತೃತ್ವದ ಪಕ್ಷವು ಕಾಂಗ್ರೆಸ್‌ ನೇತೃತ್ವದ ಯುಡಿಎಫ್‌ಗೆ ‘ಬೆನ್ನಿಗೆ ಚೂರಿ’ ಹಾಕಿದೆ ಎಂದಿದ್ದಾರೆ. ‘ಕೇರಳ ಕಾಂಗ್ರೆಸ್‌ ಪಕ್ಷವು ಯುಡಿಎಫ್‌ ಬೆಂಬಲದಿಂದ ಕೋಟ್ಟಯಂ ಲೋಕಸಭೆ ಸ್ಥಾನವನ್ನೂ ಗೆದ್ದಿತ್ತು. ಹೀಗಾಗಿ ಈ ಸ್ಥಾನವನ್ನೂ ಅವರು ಬಿಡಬೇಕು’ ಎಂದು ಯುಡಿಎಫ್‌ ನಾಯಕ ಎಂ.ಎಂ.ಹಸನ್‌ ತಿಳಿಸಿದ್ದಾರೆ.

ಪಾಲ ವಿಧಾನಸಭಾ ಕ್ಷೇತ್ರದ ಮೇಲೆ ಕಣ್ಣು

ಕೆ.ಎಂ.ಮಾಣಿ ಅವರು ಸತತ 54 ವರ್ಷ ಕೋಟ್ಟಯಂ ಜಿಲ್ಲೆಯ ಪಾಲ ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದರು. ಕಳೆದ ವರ್ಷ ಅವರ ನಿಧನದಿಂದ ತೆರವಾಗಿದ್ದ ಈ ಸ್ಥಾನಕ್ಕೆ ನಡೆದ ಉಪಚುನಾವಣೆಯಲ್ಲಿ ಎಲ್‌ಡಿಎಫ್‌ ಭಾಗವಾಗಿರುವ ಎನ್‌ಸಿಪಿಯು ಇಲ್ಲಿ ಗೆದ್ದಿತ್ತು. ಈ ಕ್ಷೇತ್ರವನ್ನು ಮತ್ತೆ ತಮ್ಮ ಹಿಡಿತಕ್ಕೆ ತೆಗೆದುಕೊಳ್ಳಲು ಜೋಸ್‌ ಅವರು ಬಯಸಿದ್ದು, ಎಲ್‌ಡಿಎಫ್‌ ಸೇರ್ಪಡೆ ವಿಚಾರದಲ್ಲಿ ಈ ವಿಷಯವೇ ದೊಡ್ಡ ಅಡ್ಡಿಯಾಗುವ ಸಾಧ್ಯತೆ ಇದೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು