ಭಾನುವಾರ, ಏಪ್ರಿಲ್ 11, 2021
32 °C

ಕೇರಳ: ಎಲ್ಲ ರಂಗಗಳಿಗೂ ನಿರ್ಣಾಯಕ ಚುನಾವಣೆ

ಅರ್ಜುನ್‌ ರಘುನಾಥ್‌ Updated:

ಅಕ್ಷರ ಗಾತ್ರ : | |

ತಿರುವನಂತಪುರ: ಕೇರಳ ವಿಧಾನಸಭಾ ಚುನಾವಣೆಗೆ ಇನ್ನು ಐದು ವಾರಗಳಷ್ಟೇ ಇವೆ. ಆಡಳಿತಾರೂಢ ಸಿಪಿಎಂ ನೇತೃತ್ವದ ಎಲ್‌ಡಿಎಫ್‌, ಕಾಂಗ್ರೆಸ್‌ ನೇತೃತ್ವದ ಯುಡಿಎಫ್‌ ಮತ್ತು ಬಿಜೆಪಿ ನೇತೃತ್ವದ ಎನ್‌ಡಿಎಗೆ ಇದು ಅತ್ಯಂತ ಮಹತ್ವದ ಚುನಾವಣೆ. ಹಾಗಾಗಿ, ಎಲ್ಲ ಪಕ್ಷಗಳೂ ಆಗಲೇ ಚುನಾವಣಾ ಕಣಕ್ಕೆ ಇಳಿದಿವೆ. 

ಸಿಪಿಎಂ ಅಧಿಕಾರದಲ್ಲಿರುವ ಭಾರತದ ಏಕೈಕ ರಾಜ್ಯ ಕೇರಳ. ಹಾಗಾಗಿ, ದೇಶದಲ್ಲಿ ರಾಜಕೀಯ ಅಸ್ತಿತ್ವ ಉಳಿಸಿಕೊಳ್ಳಲು ಕೇರಳದಲ್ಲಿನ ಅಧಿಕಾರ ಕೈಬಿಟ್ಟು ಹೋಗದಂತೆ ಸಿಪಿಎಂ ನೋಡಿಕೊಳ್ಳಲೇಬೇಕಿದೆ. ಕಳೆದ ಚುನಾವಣೆಯಲ್ಲಿ, 140 ಸ್ಥಾನಗಳ ಪೈಕಿ 91ರಲ್ಲಿ ಗೆದ್ದು ಭಾರಿ ಬಹುಮತದೊಂದಿಗೆ ಪಿಣರಾಯಿ ವಿಜಯನ್‌ ಸರ್ಕಾರ ಅಧಿಕಾರಕ್ಕೆ ಬಂದಿತ್ತು. ಹಲವು ವರ್ಷಗಳಿಂದ ಇಲ್ಲಿ ಎಲ್‌ಡಿಎಫ್ ಮತ್ತು ಯುಡಿಎಫ್‌ ಪರ್ಯಾಯವಾಗಿ ಆಳ್ವಿಕೆ ನಡೆಸಿಕೊಂಡು ಬಂದಿವೆ. ಈ ಬಾರಿ, ಅದನ್ನು ತಪ್ಪಿಸಿ ಅಧಿಕಾರ ಉಳಿಸಿಕೊಳ್ಳುವ ಉತ್ಸಾಹದಲ್ಲಿ ಪಿಣರಾಯಿ ವಿಜಯನ್ ಇದ್ದಾರೆ.  

ಜನರ ಅಭಿವೃದ್ಧಿಗಾಗಿ ಕೈಗೊಂಡ ಕಾರ್ಯಕ್ರಮಗಳನ್ನು ಸರ್ಕಾರವು ಜನರ ಮುಂದೆ ಇರಿಸುತ್ತಿದೆ. ಸ್ಥಳೀಯ ಸಂಸ್ಥೆಗಳಿಗೆ ಇತ್ತೀಚೆಗೆ ನಡೆದ ಚುನಾವಣೆಗಳಲ್ಲಿ ಎಲ್‌ಡಿಎಫ್‌ಗೆ ಮೇಲುಗೈ ಸಿಕ್ಕಿದೆ. ಚುನಾವಣಾಪೂರ್ವದಲ್ಲಿ ನಡೆದ ಒಂದೆರಡು ಸಮೀಕ್ಷೆಗಳು ಕೂಡ ಎಲ್‌ಡಿಎಫ್‌ ಅಧಿಕಾರಕ್ಕೆ ಮರಳಲಿದೆ ಎಂದಿವೆ. ಇವೆಲ್ಲವೂ ಸಿಪಿಎಂನಲ್ಲಿ ಹುಮ್ಮಸ್ಸು ಮೂಡಿಸಿದೆ. 

ಒಂದೊಂದೇ ರಾಜ್ಯಗಳನ್ನು ಕಳೆದುಕೊಳ್ಳುತ್ತಿರುವ ಕಾಂಗ್ರೆಸ್‌ಗೆ ಈ ಚುನಾವಣೆ ನಿರ್ಣಾಯಕ. ಕಾಂಗ್ರೆಸ್‌ ಮತ್ತು ಸಿಪಿಎಂ ಪರ್ಯಾಯವಾಗಿ ಅಧಿಕಾರಕ್ಕೆ ಬರುವ ಪ್ರವೃತ್ತಿ ಈ ಬಾರಿಯೂ ಬದಲಾಗದು ಎಂಬ ವಿಶ್ವಾಸದಲ್ಲಿ ಕಾಂಗ್ರೆಸ್‌ ಇತ್ತು. ಆದರೆ, ಸ್ಥಳೀಯ ಸಂಸ್ಥೆ ಚುನಾವಣೆಯ ಫಲಿತಾಂಶವು ಈ ಭರವಸೆಗೆ ತಣ್ಣೀರೆರಚಿದೆ. ಕ್ರೈಸ್ತ ಮತಬ್ಯಾಂಕ್‌ ಎಲ್‌ಡಿಎಫ್‌ ಪರವಾಗಿ ನಿಂತದ್ದೇ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಕಾಂಗ್ರೆಸ್ ಹಿನ್ನಡೆಗೆ ಕಾರಣ ಎನ್ನಲಾಗುತ್ತಿದೆ. ಹಾಗಾಗಿಯೇ ಕ್ರೈಸ್ತ ಸಮುದಾಯದ ಪ್ರಭಾವಿ ನಾಯಕ ಉಮ್ಮನ್‌ ಚಾಂಡಿ ಅವರನ್ನು ಕಾಂಗ್ರೆಸ್‌ ಪಕ್ಷವು ಮುನ್ನೆಲೆಗೆ ತಂದು, ಆ ಸಮುದಾಯದ ಮತಗಳನ್ನು ಸೆಳೆಯುವ ಯತ್ನ ನಡೆಸಿದೆ. 

ಶಬರಿಮಲೆಗೆ ಎಲ್ಲ ವಯೋಮಾನದ ಮಹಿಳೆಯರ ಪ್ರವೇಶ ವಿಷಯವನ್ನು ಕಾಂಗ್ರೆಸ್‌ ಮತ್ತೆ ಕೆದಕಿದೆ. ಈ ವಿಚಾರದಲ್ಲಿ ಬಿಜೆಪಿಯೂ ಕಾಂಗ್ರೆಸ್‌ ಜತೆಗೂಡಿದೆ. ಅಯ್ಯಪ್ಪ ದೇವಾಲಯಕ್ಕೆ 10ರಿಂದ 50 ವರ್ಷದೊಳಗಿನ ಮಹಿಳೆಯರ ಪ್ರವೇಶವನ್ನು ವಿರೋಧಿಸಿ ಪ್ರತಿಭಟನೆ ನಡೆಸಿದ್ದ ಸಾವಿರಾರು ಭಕ್ತರ ಮೇಲೆ ಹಾಕಲಾಗಿದ್ದ ಪ್ರಕರಣಗಳನ್ನು ವಿಜಯನ್‌ ನೇತೃತ್ವದ ಸರ್ಕಾರವು ಹಿಂದಕ್ಕೆ ಪಡೆದಿದೆ. 

ವಿಧಾನಸಭೆಗೆ ಕಳೆದ ಬಾರಿ ನಡೆದ ಚುನಾವಣೆಯಲ್ಲಿ ಅದೇ ಮೊದಲ ಬಾರಿಗೆ ಬಿಜೆಪಿ ಒಂದು ಕ್ಷೇತ್ರದಲ್ಲಿ ಗೆಲುವು ಸಾಧಿಸಿತ್ತು. ಈ ಬಾರಿ ತನ್ನ ಸ್ಥಿತಿಯನ್ನು ಇನ್ನಷ್ಟು ಉತ್ತಮಪಡಿಸಿಕೊಳ್ಳಲು ಬಿಜೆಪಿ ಎಲ್ಲ ಪ್ರಯತ್ನಗಳನ್ನೂ ನಡೆಸುತ್ತಿದೆ. ಕೇಂದ್ರದ ಬಜೆಟ್‌ನಲ್ಲಿ ಕೇರಳಕ್ಕೆ ಗಣನೀಯ ಮೊತ್ತವನ್ನು ಮಂಜೂರು ಮಾಡಲಾಗಿದೆ. ಮಹತ್ವದ ಹಲವು ಮೂಲಸೌಕರ್ಯ ಯೋಜನೆಗಳನ್ನು ಪ್ರಧಾನಿ ನರೇಂದ್ರ ಮೋದಿ ಅವರೇ ಕಳೆದ ವಾರ ಉದ್ಘಾಟಿಸಿದ್ದಾರೆ. ಶಬರಿಮಲೆಗೆ ಮಹಿಳೆಯರ ಪ್ರವೇಶ ಮತ್ತು ಅಭಿವೃದ್ಧಿಯು ಇಲ್ಲಿ ಬಿಜೆಪಿಯ ಮೂಲ ಮಂತ್ರವಾಗಿದೆ. ‘ಮೆಟ್ರೊಮ್ಯಾನ್‌’ ಎಂದೇ ಖ್ಯಾತರಾಗಿರುವ ತಂತ್ರಜ್ಞ ಇ.ಶ್ರೀಧರನ್‌ ಅವರನ್ನು ಬಿಜೆಪಿಗೆ ಸೇರಿಸಿಕೊಳ್ಳಲಾಗಿದೆ. ಕ್ರೈಸ್ತ ಸಮುದಾಯವು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಆ ಧರ್ಮದ ನಾಯಕರ ಜತೆಗೆ ಪಕ್ಷವು ಮಾತುಕತೆ ನಡೆಸಿದೆ. ಮುಸ್ಲಿಂ ಸಮುದಾಯದ ಮುಖಂಡರನ್ನೂ ಪಕ್ಷಕ್ಕೆ ಸೇರಿಸಿಕೊಳ್ಳಲಾಗಿದೆ. ಈ ಮೂಲಕ ಹಿಂದುತ್ವವಾದಿ ಪಕ್ಷ ಎಂಬ ಹಣೆಪಟ್ಟಿ ಕಳಚಿಕೊಳ್ಳಲು ಬಿಜೆಪಿ ಯತ್ನಿಸುತ್ತಿದೆ. 

‘ಕಾಂಗ್ರೆಸ್‌ಮುಕ್ತ ಭಾರತ’ ಎಂಬ ರಾಷ್ಟ್ರೀಯ ಕಾರ್ಯಸೂಚಿಯೇ ಈ ಚುನಾವಣೆಯಲ್ಲಿಯೂ ಬಿಜೆಪಿಯ ಗಮನ ಕೇಂದ್ರ; ಹಾಗಾಗಿಯೇ ರಾಜಕೀಯ ಒಳಸುಳಿಗಳು ಮಹತ್ವ ಪಡೆಯಲಿವೆ ಎನ್ನಲಾಗುತ್ತಿದೆ. ಕೇರಳದಲ್ಲಿ ಕಾಂಗ್ರೆಸ್‌ ಸೋತರೆ ಆ ಪಕ್ಷದ ಇನ್ನಷ್ಟು ಮುಖಂಡರು ಬಿಜೆಪಿ ಸೇರುವ ಸಾಧ್ಯತೆ ಹೆಚ್ಚು. 35–40 ಕ್ಷೇತ್ರಗಳಲ್ಲಿ ಗೆಲುವು ದೊರೆತರೂ ಕೇರಳದಲ್ಲಿ ಬಿಜೆಪಿ ಸರ್ಕಾರ ಖಚಿತ ಎಂದು ರಾಜ್ಯ ಘಟಕದ ಅಧ್ಯಕ್ಷ ಕೆ. ಸುರೇಂದ್ರನ್‌ ಇತ್ತೀಚೆಗೆ ಹೇಳಿದ್ದಾರೆ. ಇಂಡಿಯನ್‌ ಯೂನಿಯನ್‌ ಮುಸ್ಲಿಂ ಲೀಗ್‌ಗೂ ಎನ್‌ಡಿಎ ಬಾಗಿಲು ತೆರೆದಿದೆ ಎಂದು ಕೇರಳ ಬಿಜೆಪಿ ಘಟಕದ ಉಪಾಧ್ಯಕ್ಷೆ ಶೋಭಾ ಸುರೇಂದ್ರನ್‌ ಹೇಳಿದ್ದಾರೆ. ಹಾಗಾಗಿ, ಚುನಾವಣಾ ಫಲಿತಾಂಶದ ಬಳಿಕ, ಒಳಸುಳಿಗಳು ಯಾವೆಲ್ಲ ತಿರುವು ಪಡೆದುಕೊಳ್ಳಬಹುದು ಎಂದು ಹೇಳುವುದು ಕಷ್ಟ. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು