ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇರಳ: ಎರಡು ವಾಹಿನಿಗಳನ್ನು ಸುದ್ದಿಗೋಷ್ಠಿಯಿಂದ ಹೊರಗಿಟ್ಟ ರಾಜ್ಯಪಾಲ

Last Updated 7 ನವೆಂಬರ್ 2022, 12:37 IST
ಅಕ್ಷರ ಗಾತ್ರ

ತಿರುವನಂತರಪುರ: ಕೇರಳದ ರಾಜ್ಯಪಾಲ ಆರಿಫ್‌ ಮೊಹಮ್ಮದ್‌ ಖಾನ್‌ ಅವರು ಸೋಮವಾರ ಕೊಚ್ಚಿಯಲ್ಲಿ ತಾವು ನಡೆಸುತ್ತಿದ್ದ ಸುದ್ದಿಗೋಷ್ಠಿಯಿಂದ, ಹೊರ ಹೋಗುವಂತೆ ಎರಡು ಸುದ್ದಿ ವಾಹಿನಿಗಳ ಪ್ರತಿನಿಧಿಗಳಿಗೆ ಸೂಚಿಸಿದರು.

ಸಿಪಿಎಂ ನಡೆಸುತ್ತಿರುವ ‘ಕೈರಳಿ’ ಮತ್ತು ಕೇರಳದ ‘ಜಮಾತ್‌–ಎ– ಇಸ್ಲಾಮಿ’ ಸಂಘಟನೆ ಬೆಂಬಲಿತ ‘ಮೀಡಿಯಾ ಒನ್‌’ನ ಸುದ್ದಿ ವಾಹಿನಿಗಳ ವರದಿಗಾರರು ಮತ್ತು ಕ್ಯಾಮೆರಾ ಸಿಬ್ಬಂದಿಯನ್ನು ಸುದ್ದಿಗೋಷ್ಠಿಯಿಂದ ಹೊರ ನಡೆಯುವಂತೆ ರಾಜ್ಯಪಾಲರು ಸೂಚನೆ ನೀಡಿದರು. ಈ ಸುದ್ದಿ ವಾಹಿನಿಗಳು ತಮ್ಮ ವಿರುದ್ಧ ಅಪಪ್ರಚಾರ ಮಾಡುತ್ತಿವೆ ಎಂದು ಅವರು ದೂರಿದರು.

ಶಾ ಬಾನು ಪ್ರಕರಣದಲ್ಲಿ ‘ಮೀಡಿಯಾ ಒನ್‌’ ವಾಹಿನಿಯು ತಮ್ಮ ವಿರುದ್ಧ ಪ್ರಚಾರ ಮಾಡುತ್ತಿದೆ ಎಂದು ರಾಜ್ಯಪಾಲರು ಆರೋಪಿಸಿದರು.

ರಾಜ್ಯಪಾಲರ ಕಚೇರಿಯ ಅನುಮತಿಯ ಮೇರೆಗೆ ಸುದ್ದಿಗೋಷ್ಠಿಗೆ ಬಂದಿರುವುದಾಗಿ ಈ ವಾಹಿನಿಗಳ ಪ್ರತಿನಿಧಿಗಳು ತಿಳಿಸಿದರೂ, ರಾಜ್ಯಪಾಲರು ತಮ್ಮ ನಿಲುವು ಬದಲಿಸಲಿಲ್ಲ.

ಈ ಹಿಂದೆಯೂ ರಾಜಭವನದ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸದಂತೆ ನಾಲ್ಕು ಸುದ್ದಿ ವಾಹಿನಿಗಳನ್ನು ರಾಜಭವನ ನಿರ್ಬಂಧಿಸಿತ್ತು ಎಂಬ ಆರೋಪವಿದೆ. ಆದರೆ ಈ ಆರೋಪವನ್ನು ರಾಜ್ಯಪಾಲರು ತಳ್ಳಿ ಹಾಕಿದ್ದರು. ರಾಜಭವನದಲ್ಲಿ ಅಂದು ಯಾವುದೇ ಸುದ್ದಿಗೋಷ್ಠಿ ಇರಲಿಲ್ಲ. ಬದಲಿಗೆ ಕೆಲ ವಾಹಿನಿಗಳ ಮನವಿ ಮೇರೆಗೆ ಜಂಟಿ ಸಂದರ್ಶನವನ್ನಷ್ಟೇ ನೀಡಲಾಗಿತ್ತು ಎಂದು ಅವರು ಸಮರ್ಥಿಸಿಕೊಂಡಿದ್ದರು.

ರಾಜ್ಯಪಾಲರ ಈ ನಡೆಯನ್ನು ಖಂಡಿಸಿರುವ ಕೇರಳ ಕಾರ್ಯನಿರತ ಪತ್ರಕರ್ತರ ಸಂಘವು ರಾಜ್ಯಪಾಲರು ಕ್ಷಮೆ ಕೋರಬೇಕು ಎಂದು ಆಗ್ರಹಿಸಿದೆ. ಈ ಸಂಬಂಧ ಸಂಘವು ಮಂಗಳವಾರ ರಾಜಭವನದವರೆಗೆ ಮೆರವಣಿಗೆ ಹಮ್ಮಿಕೊಂಡಿದೆ.

ಸೋಮವಾರದ ಸುದ್ದಿಗೋಷ್ಠಿಯಲ್ಲಿ ಕೇರಳ ಸರ್ಕಾರದ ವಿರುದ್ಧ ವಾಗ್ದಾಳಿ ಮುಂದುವರಿಸಿದ ರಾಜ್ಯಪಾಲ ಆರಿಫ್‌ ಮೊಹಮ್ಮದ್‌ ಖಾನ್‌ ಅವರು, ‘ಸಾಂವಿಧಾನಿಕ ಯಂತ್ರವನ್ನು ಪತನಗೊಳಿಸಲು ಸಿಪಿಎಂ ಮುಂದಾಗಿದೆ’ ಎಂದು ದೂರಿದರು. ‘ಅವರಿಗೆ ಧೈರ್ಯವಿದ್ದರೆ ರಾಜಭವನಕ್ಕೆ ನುಗ್ಗಲಿ ಮತ್ತು ರಸ್ತೆಯಲ್ಲಿ ನನ್ನ ಮೇಲೆ ದಾಳಿ ನಡೆಸಲಿ’ ಎಂದರು. ವಿರೋಧ ಪಕ್ಷಗಳನ್ನು ಒಗ್ಗೂಡಿಸಿ ರಾಜಭವನದೆಡೆ ಮೆರವಣಿಗೆ ನಡೆಸುವ ಸಿಪಿಎಂ ಯೋಜನೆಯನ್ನು ಉಲ್ಲೇಖಿಸಿ ಅವರು ಮಾತನಾಡಿದರು.

ರಾಜ್ಯಪಾಲರನ್ನು ಕುಲಾಧಿಪತಿ ಹುದ್ದೆಯಿಂದ ಕೆಳಗಿಳಿಸುವ ಸಂಬಂಧ ಕೇರಳ ಸರ್ಕಾರ ಕೈಗೊಂಡಿರುವ ಕ್ರಮದ ಕುರಿತು ಪ್ರತಿಕ್ರಿಯಿಸಿದ ಅವರು, ‘ಕುಲಾಧಿಪತಿ ಹುದ್ದೆಯಿಂದ ಕೆಳಗಿಳಿಯಲು ಮೊದಲಿಗೆ ನಾನೇ ಮುಂದಾಗಿದ್ದರೂ, ಮುಖ್ಯಮಂತ್ರಿಯವರು ತಾವು ಯಾವುದೇ ರಾಜಕೀಯ ಹಸ್ತಕ್ಷೇಪ ಮಾಡುವುದಿಲ್ಲ ಎಂದು ಲಿಖಿತವಾಗಿ ಭರವಸೆ ನೀಡಿದ್ದರು’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT