ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌–19 ಪ್ರಕರಣಗಳು ಹೆಚ್ಚಳ: ಕೇರಳ ಸರ್ಕಾರ ವಿರುದ್ಧ ವಿಪಕ್ಷಗಳು ಕಿಡಿ

ಸ್ಪಷ್ಟ ಕಾರ್ಯತಂತ್ರವೇ ಇಲ್ಲ: ಆರೋಗ್ಯ ತಜ್ಞ ಡಾ.ಲಾಲ್‌ ಅಸಮಾಧಾನ
Last Updated 26 ಆಗಸ್ಟ್ 2021, 11:12 IST
ಅಕ್ಷರ ಗಾತ್ರ

ತಿರುವನಂತಪುರ: ಕೋವಿಡ್‌–19 ನಿರ್ವಹಣೆಗೆ ಸಂಬಂಧಿಸಿದಂತೆ ವಿರೋಧ ಪಕ್ಷಗಳ ಮುಖಂಡರು ಹಾಗೂ ಆರೋಗ್ಯ ಕ್ಷೇತ್ರದ ತಜ್ಞರು ಕೇರಳ ಸರ್ಕಾರದ ವಿರುದ್ಧ ಗುರುವಾರ ಹರಿಹಾಯ್ದಿದ್ದಾರೆ.

‘ಕೋವಿಡ್‌–19 ಪ್ರಕರಣಗಳು ಹಾಗೂ ಕೋವಿಡ್‌ ದೃಢಪ್ರಮಾಣದಲ್ಲಿ (ಟಿಪಿಆರ್‌) ಹೆಚ್ಚಳ ಕಂಡುಬರಲು ರಾಜ್ಯ ಸರ್ಕಾರದ ನಿರ್ಲಕ್ಷತನ ಹಾಗೂ ಮೂರ್ಖತನದ ನಿರ್ಧಾರಗಳೇ ಕಾರಣ’ ಎಂದು ಟೀಕಿಸಿದ್ದಾರೆ.

ದೇಶದಲ್ಲಿ ಸದ್ಯ ವರದಿಯಾಗುತ್ತಿರುವ ಒಟ್ಟು ಪ್ರಕರಣಗಳ ಪೈಕಿ ಶೇ 70ರಷ್ಟು ಪ್ರಕರಣಗಳು ಕೇರಳದಿಂದಲೇ ವರದಿಯಾಗುತ್ತಿವೆ ಎಂದು ವಿರೋಧ ಪಕ್ಷಗಳ ಮುಖಂಡರು ಆರೋಪಿಸಿದ್ದಾರೆ.

‘ಕೋವಿಡ್‌ ಪ್ರಸರಣ ತಡೆಯಲು ಕ್ರಮ ಕೈಗೊಳ್ಳುವ ಬದಲಾಗಿ ಕೇರಳ ಸರ್ಕಾರ ಮೋಪ್ಲಾ ಹತ್ಯಾಕಾಂಡದ ವಾರ್ಷಿಕೋತ್ಸವ ಆಚರಣೆಗೇ ಒತ್ತು ನೀಡಿತು. ಇಂಥ ನಿರ್ಲಕ್ಷ್ಯ ಧೋರಣೆಯೇ ಕೋವಿಡ್‌ ಪ್ರಕರಣಗಳು ಹೆಚ್ಚಲು ಕಾರಣ’ ಎಂದು ವಿದೇಶಾಂಗ ಖಾತೆ ರಾಜ್ಯ ಸಚಿವ ವಿ.ಮುರಳೀಧರನ್‌ ಟೀಕಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಕಾಂಗ್ರೆಸ್‌ ಶಾಸಕ ರಮೇಶ್ ಚೆನ್ನಿತಲ, ’ರಾಜ್ಯದಲ್ಲಿ ಕೋವಿಡ್ ಪ್ರಸರಣ ತಡೆಯಲು ರಾಜ್ಯ ಸರ್ಕಾರ ವಿಫಲವಾಗಿದೆ. ಈ ವೈಫಲ್ಯಕ್ಕಾಗಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರು ರಾಜ್ಯದ ಜನತೆಯ ಕ್ಷಮೆ ಯಾಚಿಸಬೇಕು’ ಎಂದು ಹೇಳಿದರು.

‘ರಾಜ್ಯ ಸರ್ಕಾರದ ಬಳಿ ಕೋವಿಡ್‌ ನಿರ್ವಹಣೆಗೆ ಸಂಬಂಧಿಸಿದಂತೆ ಸ್ಪಷ್ಟ ಕಾರ್ಯತಂತ್ರವೇ ಇಲ್ಲ. ನಿರ್ವಹಣೆಗೆ ಸಂಬಂಧಿಸಿ ನಿರ್ಧಾರ ಕೈಗೊಳ್ಳುವ ಪ್ರಕ್ರಿಯೆಯಿಂದ ವೈದ್ಯರು ಹಾಗೂ ತಜ್ಞರನ್ನು ದೂರ ಇಡಲಾಗಿದೆ. ಮೂರ್ಖತನದಿಂದ ಕೂಡಿದ ನಿರ್ಧಾರಗಳನ್ನು ಕೈಗೊಳ್ಳಲಾಗುತ್ತಿದೆ’ ಎಂದು ಸಾರ್ವಜನಿಕ ಆರೋಗ್ಯ ಕ್ಷೇತ್ರದ ತಜ್ಞ ಡಾ.ಎಸ್‌.ಎಸ್‌.ಲಾಲ್‌ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

‘ಕೊರೊನಾ ಸೋಂಕಿಗೆ ಸಂಬಂಧಿಸಿದ ಅಂಕಿ–ಅಂಶಗಳನ್ನು ಬಿಡುಗಡೆ ಮಾಡಬೇಕು. ಇದರಿಂದ ರಾಜ್ಯದಲ್ಲಿರುವ ವಾಸ್ತವ ಸ್ಥಿತಿಯ ಮೌಲ್ಯಮಾಪನ ಸಾಧ್ಯವಾಗುವುದು’ ಎಂದು ಸರ್ಕಾರವನ್ನು ಆಗ್ರಹಿಸಿದ್ದಾರೆ.

ರಾಜ್ಯದಲ್ಲಿ ಬುಧವಾರ ಹೊಸದಾಗಿ 31,445 ಪ್ರಕರಣಗಳು ವರದಿಯಾಗಿವೆ. ಈ ಪ್ರಮಾಣ ದೇಶದಲ್ಲಿ ಕಂಡುಬಂದ ಒಟ್ಟು ಪ್ರಕರಣಗಳ ಶೇ 68.11ರಷ್ಟಾಗಲಿದೆ. ಗುರುವಾರ ಬೆಳಿಗ್ಗೆ 8ಕ್ಕೆ ಕೊನೆಗೊಂಡ ಅವಧಿಯಲ್ಲಿ 46,164 ಪ್ರಕರಣಗಳು ವರದಿಯಾಗಿವೆ.

ಕೋವಿಡ್‌ ದೃಢಪ್ರಮಾಣ ಬುಧವಾರ ಶೇ 19.03ರಷ್ಟಿತ್ತು. ಮೂರು ತಿಂಗಳ ಹಿಂದೆ, ಮೇ 26ರಂದು ಕೋವಿಡ್‌ ದೃಢಪ್ರಮಾಣ ಶೇ 19.95ರಷ್ಟಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT