ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎರಡೂವರೆ ವರ್ಷಗಳ ಸೆರೆವಾಸಕ್ಕೆ ಮುಕ್ತಿ; ಪತ್ರಕರ್ತ ಸಿದ್ದೀಕ್‌ ಕಪ್ಪನ್‌ ಬಿಡುಗಡೆ

Last Updated 3 ಫೆಬ್ರುವರಿ 2023, 2:40 IST
ಅಕ್ಷರ ಗಾತ್ರ

ಲಖನೌ: ನಿಷೇಧಿತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಸಂಘಟನೆಯ ಸಂಪರ್ಕವಿರುವ ಆರೋಪದಲ್ಲಿ ಎರಡು ವರ್ಷಗಳ ಹಿಂದೆ ಪೊಲೀಸರು ಬಂಧಿಸಿದ್ದ ಕೇರಳದ ಪತ್ರಕರ್ತ ಸಿದ್ದೀಕ್‌ ಕಪ್ಪನ್ ಅವರನ್ನು ಗುರುವಾರ ಜಾಮೀನಿನ ಮೇಲೆ ಜಿಲ್ಲಾ ಕಾರಾಗೃಹದಿಂದ ಬಿಡುಗಡೆ ಮಾಡಲಾಗಿದೆ.

ಉತ್ತರ ಪ್ರದೇಶದ ಹಾತ್ರಾಸ್ ಜಿಲ್ಲೆಯಲ್ಲಿ ಸಾಮೂಹಿಕ ಅತ್ಯಾಚಾರಕ್ಕೀಡಾಗಿ ನಂತರ ಮೃತಪಟ್ಟ ಪರಿಶಿಷ್ಟ ಜಾತಿ ಯುವತಿಯ ಕುಟುಂಬ ಸದಸ್ಯರನ್ನು ಭೇಟಿಯಾಗಲು 2020ರ ಅಕ್ಟೋಬರ್‌ನಲ್ಲಿ ಹೋಗುತ್ತಿದ್ದ ಸಿದ್ದಿಕಿ ಮತ್ತು ಇತರ ಮೂವರನ್ನು ಪೊಲೀಸರು ಮಥುರಾದಲ್ಲಿ ಬಂಧಿಸಿದ್ದರು.

ಹತ್ರಾಸ್‌ನ ದಲಿತ ಮಹಿಳೆಯ ಸಾವಿನ ಬಗ್ಗೆ ಹಿಂಸಾಚಾರ ಪ್ರಚೋದಿಸಲು ಯತ್ನಿಸಿದ ಆರೋಪವನ್ನು ಸಿದ್ದೀಕ್‌ ಮೇಲೆ ಹೊರಿಸಲಾಗಿತ್ತು. ಕಾನೂನು ಬಾಹಿರ ಚಟುವಟಿಕೆ ತಡೆ ಕಾಯ್ದೆ (ಯುಎಪಿಎ) ಮತ್ತು ಭಾರತೀಯ ಅಪರಾಧ ದಂಡ ಸಂಹಿತೆಯ (ಐಪಿಸಿ) ವಿವಿಧ ಕಲಂಗಳಡಿ ಪ್ರಕರಣ ದಾಖಲಿಸಲಾಗಿತ್ತು. ನಂತರ ಜಾರಿ ನಿರ್ದೇಶನಾಲಯ (ಇ.ಡಿ) ಕೂಡ ಅವರ ವಿರುದ್ಧ ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆಯಡಿ (ಪಿಎಂಎಲ್‌ಎ) ಪ್ರಕರಣ ದಾಖಲಿಸಿತ್ತು.

ವಿಜಯದ ಸಂಕೇತ ತೋರಿಸುತ್ತಾ ಜೈಲಿನಿಂದ ಹೊರ ಬಂದ ಸಿದ್ದೀಕ್‌ ಕಪ್ಪನ್‌, ಜೈಲಿನ ಬಳಿ ತಮಗಾಗಿ ಬೆಳಿಗ್ಗೆಯಿಂದ ಕಾಯುತ್ತಿದ್ದ ಪತ್ನಿ, ಪುತ್ರ ಹಾಗೂ ಬಂಧುಮಿತ್ರರೆಡೆಗೆ ನಡೆದರು.

‘ಸುಳ್ಳು ಪ್ರಕರಣದಲ್ಲಿ ನನ್ನನ್ನು ಸಿಲುಕಿಸಲಾಗಿತ್ತು. 28 ತಿಂಗಳ ನಂತರ ಜೈಲಿನಿಂದ ಹೊರ ಬಂದಿದ್ದೇನೆ. ಜೈಲಿನಲ್ಲಿ ಕಳೆದ ದಿನಗಳು ತುಂಬಾ ಕಠಿಣವಾಗಿದ್ದವು’ ಎಂದು ಕಪ್ಪನ್ ವರದಿಗಾರರಿಗೆ ತಿಳಿಸಿದರು.

‘ಕಠಿಣ ಕಾನೂನುಗಳ ವಿರುದ್ಧದ ನನ್ನ ಹೋರಾಟ ಮುಂದುವರಿಯುತ್ತದೆ. ನ್ಯಾಯಾಲಯ ಜಾಮೀನು ನೀಡಿದರೂ ನನ್ನನ್ನು ಬಿಡುಗಡೆ ಮಾಡಲಿಲ್ಲ. ನನ್ನನ್ನು ಜೈಲಿನಲ್ಲಿ ಇರಿಸುವ ಮೂಲಕ ಯಾರಿಗೆ ಲಾಭವಾಯಿತೆನ್ನುವುದು ತಿಳಿದಿಲ್ಲ’ ಎಂದು ಹೇಳಿದರು.

‘ಮಥುರಾದಲ್ಲಿ ಪೊಲೀಸರು ಬಂಧಿಸಿದಾಗ ನನ್ನ ಬಳಿ ಮೊಬೈಲ್, ಲ್ಯಾಪ್ ಟಾಪ್, ಎರಡು ಪೆನ್ನುಗಳು, ನೋಟ್ ಪ್ಯಾಡ್ ಮಾತ್ರ ಇದ್ದವು’ ಎಂದರು.

ಮಥುರಾ ಜಿಲ್ಲಾ ನ್ಯಾಯಾಲಯ ಮತ್ತು ಅಲಹಾಬಾದ್ ಹೈಕೋರ್ಟ್ ಜಾಮೀನು ಅರ್ಜಿ ತಿರಸ್ಕರಿಸಿದ ನಂತರ ಸಿದ್ದೀಕ್‌ ಕಪ್ಪನ್ ಸುಪ್ರೀಂಕೋರ್ಟ್‌ ಮೊರೆ ಹೋಗಿದ್ದರು.

ಸುಪ್ರೀಂ ಕೋರ್ಟ್‌ ಜಾಮೀನು ನೀಡಿದರೂ ಸಿದ್ದೀಕ್‌ ಕಪ್ಪನ್‌ ಅವರಿಗೆ ಬಿಡುಗಡೆ ಭಾಗ್ಯ ಸಿಕ್ಕಿರಲಿಲ್ಲ. ಪಿಎಂಎಲ್‌ಎ ಪ್ರಕರಣದಲ್ಲಿ ಕಳೆದ ವರ್ಷ ಡಿಸೆಂಬರ್ 23 ರಂದು ‌ಅಲಹಾಬಾದ್ ಹೈಕೋರ್ಟ್ ಜಾಮೀನು ನೀಡಿತ್ತು. ಆದರೆ, ಶ್ಯೂರಿಟಿಗಳ ಪರಿಶೀಲನೆ ವಿಳಂಬದಿಂದ ಬಿಡುಗಡೆಯೂ ವಿಳಂಬವಾಯಿತು. ಬುಧವಾರ ಪಿಎಂಎಲ್ಎ ಕೋರ್ಟ್‌ಗೆ ಶ್ಯೂರಿಟಿಗಳನ್ನು ಸಲ್ಲಿಸಿದ ನಂತರ ಸಿದ್ದೀಕ್‌ ಅವರ ಬಿಡುಗಡೆ ಪ್ರಕ್ರಿಯೆ ನಡೆದಿದೆ.

ಸಂವಿಧಾನದ 21ನೇ ವಿಧಿಗೆ ಜಯ: ಕೇರಳದ ಪತ್ರಕರ್ತ ಸಿದ್ದೀಕ್‌ ಕಪ್ಪನ್ ಅವರ ಬಿಡುಗಡೆಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್‌ ಸಂಸದ ಪಿ.ಚಿದಂಬರಂ ಅವರು ‘ವ್ಯಕ್ತಿಯ ಬದುಕು ಮತ್ತು ವೈಯಕ್ತಿಕ ಸ್ವಾತಂತ್ರ್ಯ ರಕ್ಷಣೆಯ ಹಕ್ಕನ್ನು ಎತ್ತಿ ಹಿಡಿಯುವ, ಸಂವಿಧಾನದ 21ನೇ ವಿಧಿಗೆ ಅಂತಿಮ ಜಯ ಸಿಕ್ಕಿದೆ. ಸಿದ್ದೀಕ್‌ ಬಿಡುಗಡೆ ಸಂತಸವನ್ನು ನೀಡಿದೆ’ ಎಂದು ಬಣ್ಣಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT