ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೂಟಿ ಮಾಡಲು ನೆರವಾಗುವಂತೆ ಸಂವಿಧಾನವನ್ನು ಬರೆಯಲಾಗಿದೆ: ಕೇರಳ ಸಚಿವ ಚೆರಿಯನ್‌

ಸಂಪುಟದಿಂದ ಕೈಬಿಡಲು ಕಾಂಗ್ರೆಸ್ ಆಗ್ರಹ | ಸಚಿವ ಯಾವುದೇ ತಪ್ಪೆಸಗಿಲ್ಲ– ಸಿಪಿಎಂ
Last Updated 5 ಜುಲೈ 2022, 11:41 IST
ಅಕ್ಷರ ಗಾತ್ರ

ನವದೆಹಲಿ/ತಿರುವನಂತಪುರ: ಕೇರಳ ಮೀನುಗಾರಿಕೆ ಮತ್ತು ಸಂಸ್ಕೃತಿ ಸಚಿವ ಸಜಿ ಚೆರಿಯನ್‌ ಅವರು ಸಂವಿಧಾನವನ್ನು ಟೀಕಿಸಿರುವುದು ವಿವಾದಕ್ಕೀಡಾಗಿದೆ.

‘ನಮ್ಮ ಸಂವಿಧಾನವು ಶೋಷಣೆ ಬಗ್ಗೆ ಗಮನ ಹರಿಸುವುದಿಲ್ಲ. ಅಲ್ಲದೇ, ದೇಶದ ಜನರನ್ನು ಲೂಟಿ ಮಾಡಲು ನೆರವಾಗುವ ರೀತಿಯಲ್ಲಿ ಅದನ್ನು ಬರೆಯಲಾಗಿದೆ’ ಎಂದು ಅವರು ಹೇಳಿದ್ದಾರೆ.

ಪಟ್ಟಣಂತಿಟ್ಟ ಜಿಲ್ಲೆಯ ಮಲ್ಲಪಳ್ಳಿ ಎಂಬಲ್ಲಿ ಇತ್ತೀಚೆಗೆ ನಡೆದಿದ್ದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದಅವರು, ‘ಅದ್ಭುತವಾಗಿ ರಚಿಸಲಾದ ಸಂವಿಧಾನವನ್ನು ಭಾರತ ಹೊಂದಿದೆ ಎಂದು ನಾವು ಹೇಳುತ್ತೇವೆ. ಆದರೆ, ನನ್ನ ಪ್ರಕಾರ, ಅದ್ಭುತವಾದ ಈ ಸಂವಿಧಾನ ದೇಶದ ಬಹು ಜನರನ್ನು ಲೂಟಿ ಮಾಡಲು ನೆರವಾಗುವಂತಿದೆ’ ಎಂದು ಹೇಳಿದ್ದರು.

ಅವರ ಭಾಷಣ ಸುದ್ದಿವಾಹಿನಿಗಳಲ್ಲಿ ಮಂಗಳವಾರ ಪ್ರಸಾರವಾದ ನಂತರ, ಈ ವಿಷಯ ವಿವಾದದ ಸ್ವರೂಪ ಪಡೆದುಕೊಂಡಿದೆ.

‘ದೇಶದ ಸಂವಿಧಾನವನ್ನು ಬ್ರಿಟಿಷರು ಸಂಗ್ರಹ ಮಾಡಿದ್ದರೆ, ಒಬ್ಬ ಭಾರತೀಯ ಅದನ್ನು ಬರೆದಿದ್ದಾರೆ. ಅದನ್ನೇ ನಾವು ಕಳೆದ 75 ವರ್ಷಗಳಿಂದ ಅನುಷ್ಠಾನಗೊಳಿಸಿದ್ದೇವೆ’ ಎಂದು ಅವರು ಆರೋಪಿಸಿದ್ದರು.

‘ಜಾತ್ಯತೀತತೆ ಹಾಗೂ ಪ್ರಜಾಪ್ರಭುತ್ವದಂತಹ ಮೌಲ್ಯಗಳನ್ನು ಸಂವಿಧಾನದಲ್ಲಿ ಉಲ್ಲೇಖಿಸಲಾಗಿದೆಯಷ್ಟೆ’ ಎಂದೂ ಹೇಳಿದ್ದರು.

ಕಾಂಗ್ರೆಸ್‌ ಖಂಡನೆ: ಚೆರಿಯನ್ ಅವರ ಈ ಹೇಳಿಕೆಯನ್ನು ಖಂಡಿಸಿರುವ ಕಾಂಗ್ರೆಸ್ ಮುಖಂಡರು, ‘ಸಂವಿಧಾನ ಕುರಿತು ಆಕ್ಷೇಪಾರ್ಹ ಹೇಳಿಕೆ ನೀಡಿರುವ ಕೇರಳ ಸಚಿವ ಚೆರಿಯನ್‌ ಅವರನ್ನು ತಕ್ಷಣವೇ ಸಂಪುಟದಿಂದ ವಜಾ ಮಾಡಬೇಕು’ ಎಂದು ಆಗ್ರಹಿಸಿದ್ದಾರೆ.

‘ಸಂವಿಧಾನವನ್ನು ಟೀಕಿಸುವ ಮೂಲಕ ಸಚಿವ ಸಜಿ ಚೆರಿಯನ್‌ ಅವರು ಭಾರತದ ಆದರ್ಶಗಳನ್ನೇ ಅವಮಾನಿಸಿದ್ದಾರೆ’ ಎಂದು ವಾಗ್ದಾಳಿ ನಡೆಸಿದ್ದಾರೆ.

ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್, ‘ಸಚಿವ ಚೆರಿಯನ್ ಕೇವಲ ಸಂವಿಧಾನವನ್ನು ಅವಮಾನಿಸಿಲ್ಲ, ಸಂವಿಧಾನ ರಚಿಸಿರುವ ಬಾಬಾ ಸಾಹೇಬ್ ಅಂಬೇಡ್ಕರ್‌ ಹಾಗೂ ಈ ದೇಶದ ಆದರ್ಶಗಳನ್ನೂ ಅವಮಾನಿಸಿದ್ದಾರೆ. ತಕ್ಷಣವೇ ಅವರು ರಾಜೀನಾಮೆ ನೀಡಬೇಕು ಇಲ್ಲವೇ ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸಬೇಕು’ ಎಂದು ಆಗ್ರಹಿಸಿದ್ದಾರೆ.

‘ತಾವು ಯಾವುದರ ಮೇಲೆ ಪ್ರಮಾಣವಚನ ಸ್ವೀಕರಿಸಿದ್ದಾರೋ, ಅಂಥ ಸಂವಿಧಾನದ ಬಗ್ಗೆಯೇ ಚೆರಿಯನ್‌ ಅವರು ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡಿದ್ದಾರೆ. ಅವರನ್ನು ಕೂಡಲೇ ಸಂಪುಟದಿಂದ ಕೈಬಿಡಬೇಕು’ ಎಂದು ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಜೈರಾಂ ರಮೇಶ್ ಟ್ವೀಟ್‌ ಮೂಲಕ ಆಗ್ರಹಿಸಿದ್ದಾರೆ.

ಸಚಿವ ಚೆರಿಯನ್‌ ಅವರನ್ನು ಸಂಪುಟದಿಂದ ಕೈಬಿಡಬೇಕು ಎಂಬ ಕಾಂಗ್ರೆಸ್‌ನ ಬೇಡಿಕೆಯನ್ನು ಸಿಪಿಎಂ ಮುಖಂಡರು ತಿರಸ್ಕರಿಸಿದ್ದು, ‘ಇದು ಬಾಯ್ತಪ್ಪಿ ಆಡಿರುವ ಮಾತು’ ಎಂದಿದ್ದಾರೆ.

‘ಈ ಕುರಿತಂತೆ ಚೆರಿಯನ್‌ ಅವರಿಂದ ವಿವರಣೆ ಕೇಳಲಾಗಿತ್ತು. ನಾನು ಸಂವಿಧಾನವನ್ನು ಟೀಕಿಸಿಲ್ಲ. ಬಾಯ್ತಪ್ಪಿ ಹೇಳಿದ್ದಾಗಿ ಅವರು ವಿವರಿಸಿದ್ದಾರೆ’ ಎಂದು ಸಿಪಿಎಂ ಪಾಲಿಟ್‌ಬ್ಯುರೊ ಸದಸ್ಯ ಎಂ.ಎ.ಬೇಬಿ ಪ್ರತಿಕ್ರಿಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT