ಗುರುವಾರ , ಸೆಪ್ಟೆಂಬರ್ 23, 2021
26 °C
ಪಾಲಕ್ಕಾಡ್ ಜಿಲ್ಲೆಯ ಮಾತ್ತೂರ್ ಗ್ರಾಮ ಪಂಚಾಯ್ತಿಯಲ್ಲಿ ‘ಐತಿಹಾಸಿಕ ನಿರ್ಣಯ‘

ಕೇರಳದ ಈ ಪಂಚಾಯ್ತಿ ಕಚೇರಿಯಲ್ಲಿ ‘ಸರ್‌, ಮೇಡಂ‘ ಪದಗಳ ನಿಷೇಧ !

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಪಾಲಕ್ಕಾಡ್‌: ಉತ್ತರ ಕೇರಳದ ಪಾಲಕ್ಕಾಡ್‌ ಜಿಲ್ಲೆಯ ಮಾತ್ತೂರ್ ಗ್ರಾಮ ಪಂಚಾಯ್ತಿಗೆ ಹೋಗುವ ಗ್ರಾಮಸ್ಥರು ಅಥವಾ ಫಲಾನುಭವಿಗಳು ಇನ್ನು ಮುಂದೆ ಪಂಚಾಯ್ತಿಯ ಅಧಿಕಾರಿಗಳು, ಜನಪ್ರತಿನಿಧಿಗಳನ್ನು ‘ಸರ್‘, ಮೇಡಂ ಎಂದು ಕರೆಯುವ ಅಗತ್ಯವಿಲ್ಲ. ಅವರ ಹೆಸರು ಅಥವಾ ಪದನಾಮದಿಂದ (ಹುದ್ದೆ) ಕರೆದರೆ ಸಾಕು.. !

ಹೌದು. ಮಾತ್ತೂರ್ ಗ್ರಾಮ ಪಂಚಾಯ್ತಿಯಲ್ಲಿ ಇಂಥದ್ದೊಂದು ನಿಯಮವನ್ನು ಜಾರಿಗೆ ತರುವ ನಿರ್ಣಯ ಕೈಗೊಳ್ಳಲಾಗಿದೆ.  ಜನಸಾಮಾನ್ಯರು, ಜನಪ್ರತಿನಿಧಿಗಳು ಮತ್ತು ಸ್ಥಳೀಯ ಸಂಸ್ಥೆಯ ಅಧಿಕಾರಿಗಳ ನಡುವೆ ಪರಸ್ಪರ ಪ್ರೀತಿ, ವಿಶ್ವಾಸದ ಬಾಂಧವ್ಯ ವೃದ್ಧಿಸುವುದಕ್ಕಾಗಿ ವಸಾಹುತುಶಾಹಿ ಕಾಲದಲ್ಲಿ ‘ಗೌರವ‘ವದ ಹೆಸರಲ್ಲಿ ಬಳಸುತ್ತಿದ್ದ ಈ ಪದಗಳ ಬಳಕೆಯನ್ನು ನಿಷೇಧಿಸಲಾಗಿದೆ. ಈ ಮೂಲಕ ಇಂಥ ಪದಗಳ ಬಳಕೆ ನಿಷೇಧಿಸಿದ ದೇಶದ ಮೊದಲ ಗ್ರಾಮ ಪಂಚಾಯ್ತಿ ಎಂದು ಇತಿಹಾಸದ ಪುಟದಲ್ಲಿ ದಾಖಲಾಗಿದೆ.

ಮಂಗಳವಾರ ಪಂಚಾಯ್ತಿಯಲ್ಲಿ ನಡೆದ ವಿಶೇಷ ಸಭೆಯಲ್ಲಿ ಸದಸ್ಯರೆಲ್ಲರೂ ಅವಿರೋಧವಾಗಿ ಇಂಥದ್ದೊಂದು ಐತಿಹಾಸಿಕ ನಿರ್ಧಾರಕ್ಕೆ ಒಪ್ಪಿಗೆ ಸೂಚಿಸಿದ್ದಾರೆ. ಮಾತ್ರವಲ್ಲ, ಈ ಹೊಸ ನಿಯಮವನ್ನು ಅನುಷ್ಠಾನಗೊಳಿಸಲು ಆರಂಭಿಸಿದ್ದಾರೆ.

ಸಿಪಿಎಂ ಪಕ್ಷದ ನಾಮ ನಿರ್ದೇಶಿತ ಏಳು ಸದಸ್ಯರು, ಒಬ್ಬರು ಬಿಜೆಪಿ ಸದಸ್ಯರು ಮತ್ತು 16 ಕಾಂಗ್ರೆಸ್‌ ಸದಸ್ಯರನ್ನೊಳ ಗೊಂಡ ಕಾಂಗ್ರೆಸ್‌ ನೇತೃತ್ವದ ಈ ಗ್ರಾಮ ಪಂಚಾಯ್ತಿಯಲ್ಲಿ, ರಾಜಕೀಯ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಎಲ್ಲ ಸದಸ್ಯರು ಒಕ್ಕೊರಲಿನಿಂದ ಈ ಐತಿಹಾಸಿಕ ನಿರ್ಣಯಕ್ಕೆ ಒಪ್ಪಿಗೆ ಸೂಚಿಸಿದ್ದಾರೆ.

ಮಾತ್ತೂರ್ ಪಂಚಾಯತ್ ಉಪಾಧ್ಯಕ್ಷ ಪಿ ಆರ್ ಪ್ರಸಾದ್, ‘ತಮ್ಮ ಅಗತ್ಯಗಳನ್ನು ಪೂರೈಸುವಂತೆ ಕೇಳಲು ಪಂಚಾಯ್ತಿ ಕಚೇರಿಗೆ ಬರುವ ಜನ ಸಾಮಾನ್ಯರು ಹಾಗೂ ಜನಪ್ರತಿನಿಧಿಗಳು, ಅಧಿಕಾರಿಗಳ ನಡುವಿನ ಅಂತರವನ್ನು ಕಡಿಮೆ ಮಾಡಿ, ಇವರ ನಡುವೆ ಪರಸ್ಪರ ಉತ್ತಮ ಬಾಂಧವ್ಯ ವೃದ್ಧಿ ಮಾಡುವುದಕ್ಕಾಗಿ ಈ ನಿರ್ಣಯವನ್ನು ಕೈಗೊಂಡಿದ್ದೇವೆ‘ ಎಂದು ಹೇಳಿದರು.

‘ನಮ್ಮ ಪಂಚಾಯ್ತಿಯಲ್ಲಿ, ರಾಜಕೀಯ ಭಿನ್ನಾಭಿಪ್ರಾಯವನ್ನು ಮರೆತು, ಪ್ರತಿಯೊಬ್ಬರೂ ಸ್ನೇಹಪರ ಹಾಗೂ ಉತ್ತಮ ಆಡಳಿತ ನೀಡುವ ವಾತಾವರಣ ಸೃಷ್ಟಿಸಲು ಪ್ರಯತ್ನಿಸುತ್ತಾರೆ. ಹೀಗಿದ್ದಾಗ ಸರ್, ಮೇಡಂ ಎಂಬ ಪದಗಳ ಬಳಕೆಯಿಂದಾಗಿ ಎಲ್ಲೋ ಒಂದು ಕಡೆ ಪಂಚಾಯ್ತಿಗೆ ಸಮಸ್ಯೆಗಳನ್ನು ಹೊತ್ತು ತರುವ ಜನರು ಮತ್ತು ಜನಪ್ರತಿನಿಧಿಗಳು, ಅಧಿಕಾರಿಗಳ ನಡುವೆ ಸಣ್ಣದೊಂದು ಅಂತರ ಸೃಷ್ಟಿಯಾಗುತ್ತಿತ್ತು. ಹಾಗಾಗಿ, ಇಂಥದ್ದೊಂದು ನಿಯಮ ಕೈಗೊಂಡಿದ್ದೇವೆ‘ ಎಂದು ಅವರು ಸುದ್ದಿ ಸಂಸ್ಥೆಗೆ ತಿಳಿಸಿದರು.

'ಪ್ರಜಾಪ್ರಭುತ್ವದಲ್ಲಿ ಪ್ರಜೆಗಳೇ ಪ್ರಭುಗಳು. ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಜನ ಸೇವಕರು. ಹಾಗಾಗಿ ಜನರು ತಮ್ಮ ಅಗತ್ಯ ಸೇವೆಗಳಿಗಾಗಿ ಅಧಿಕಾರಿ ಅಥವಾ ಜನಪ್ರತಿನಿಧಿಗಳ ಬಳಿ ಮನವಿ ಮಾಡುವ ಅಗತ್ಯವಿಲ್ಲ. ಸೇವೆ ಪಡೆಯುವುದು ಹಕ್ಕು ಎಂಬುದನ್ನು ಎಲ್ಲರೂ ಅರಿಯಬೇಕು‘ ಎಂದು ಅವರು ಹೇಳಿದರು.

‘ಸರ್, ಮೇಡಂ ಪದಗಳನ್ನು ಬಳಸದ ಜನರಿಗೆ ಸೇವೆ ನಿರಾಕರಿಸಿದರೆ, ಪಂಚಾಯ್ತಿ ಅಧ್ಯಕ್ಷರು ಅಥವಾ ಕಾರ್ಯದರ್ಶಿಗೆ ದೂರು ನೀಡಬಹುದು‘ ಎಂಬ ಮಾಹಿತಿಯನ್ನು ಪಂಚಾಯ್ತಿ ಅಧಿಕಾರಿಗಳು ಕಚೇರಿ ಹೊರಗಿರುವ ಸೂಚನಾ ಫಲಕದಲ್ಲಿ ಪ್ರಕಟಿಸುವಂತೆ ಸೂಚಿಸಲಾಗಿದೆ ಎಂದು ಅವರು ಹೇಳಿದರು.

ಅದೇ ರೀತಿ,  ಪ್ರತಿಯೊಬ್ಬ ಅಧಿಕಾರಿಯೂ ತಮ್ಮ ಮೇಜಿನ ಮೇಲಿನ ಫಲಕದಲ್ಲಿ ತಮ್ಮ ಹೆಸರು ಮತ್ತು ಹುದ್ದೆಗಳನ್ನು ಬರೆಸುವಂತೆ ಸೂಚಿಸಲಾಗಿದೆ. ಹಾಗೆಯೇ, ‘ಸರ್‌‘ ಮತ್ತು ‘ಮೇಡಂ‘ ಪದಗಳಿಗೆ ಪರ್ಯಾಯ ಪದಗಳನ್ನು ಸೂಚಿಸುವಂತೆ ಸರ್ಕಾರದ ಅಧಿಕೃತ ಭಾಷಾ ವಿಭಾಗಕ್ಕೆ ಅಧಿಕಾರಿಗಳೂ ಮನವಿ ಮಾಡಿದ್ದಾರೆ.

ಹೆಸರು ಹಿಡಿದು ಕರೆಯುವುದಕ್ಕೆ ಕೆಲವು ಹಿರಿಯ ಅಧಿಕಾರಿಗಳು ಮುಜುಗರ ಪಟ್ಟುಕೊಳ್ಳುವ ಸಾಧ್ಯತೆ ಇರುವುದರಿಂದ, ಅಂಥ ಸಂದರ್ಭದಲ್ಲಿ ಮಲಯಾಳಂನಲ್ಲಿ‌ ಚೆಟ್ಟನ್‌ (ಹಿರಿಯ ಸಹೋದರ) ಅಥವಾ ಚೇಚಿ(ಹಿರಿಯ ಸಹೋದರಿ) ಎಂದು ಸಂಬೋಧಿಸಬಹುದು ಎಂದು ಅಧಿಕಾರಿಗಳು ಹೇಳಿದ್ದಾರೆ.

ಪ್ರಜಾಪ್ರಭುತ್ವದಲ್ಲಿ ಪ್ರಜೆಯೇ ಶ್ರೇಷ್ಠ ಎಂಬುದನ್ನು ತಿಳಿಸುವುದಕ್ಕಾಗಿ ಈಗಿರುವ 'ಅಪೇಕ್ಷಾ ನಮೂನೆ' (ಅರ್ಜಿ ನಮೂನೆ) ಎಂಬ ಪದವನ್ನು ಪದಲಿಸಿ, ಆ ಜಾಗದಲ್ಲಿ ‘ಅವತಕ್ಷ ಪತ್ರ‘ (ಹಕ್ಕುಗಳ ಪ್ರಮಾಣಪತ್ರ) ಎಂದು ಬದಲಾಯಿಸಲು ಮಾಥೂರ್ ಪಂಚಾಯ್ತಿ ಅಧಿಕಾರಿಗಳು ನಿರ್ಧರಿಸಿದ್ದಾರೆ. 'ಅಪೇಕ್ಷ' ಎಂದರೆ ಸ್ಥಳೀಯ ಭಾಷೆಯಲ್ಲಿ 'ವಿನಂತಿ' ಎಂದರ್ಥ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು