ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಷ್ಟ್ರಪತಿಗೆ ಡಿ.ಲಿಟ್ ಪ್ರದಾನ ವಿವಾದ: ಕೇರಳ ವಿ.ವಿ ವಿರುದ್ಧ ರಾಜ್ಯಪಾಲರ ಆಕ್ರೋಶ

Last Updated 11 ಜನವರಿ 2022, 5:37 IST
ಅಕ್ಷರ ಗಾತ್ರ

ತಿರುವನಂತರಪುರ: ರಾಷ್ಟ್ರಪತಿ ಅವರಿಗೆ ಡಿ.ಲಿಟ್‌ ಪದವಿ ನೀಡುವ ಬಗ್ಗೆ ತೀರ್ಮಾನಿಸಲು ಸಭೆ ಕರೆಯಬೇಕು ಎಂಬ ತಮ್ಮ ನಿರ್ದೇಶನವನ್ನು, ‘ಕೆಲವರ ಮಾತು’ ಕೇಳಿಕೊಂಡು ಕೇರಳ ವಿಶ್ವವಿದ್ಯಾಲಯದ ಕುಲಪತಿ ಕಡೆಗಣಿಸಿದ್ದಾರೆ ಎಂದು ಕುಲಾಧಿಪತಿಯೂ ಆದ ರಾಜ್ಯಪಾಲ ಆರಿಫ್‌ ಮೊಹಮ್ಮದ್‌ ಖಾನ್‌ ದೂರಿದ್ದಾರೆ.

‘ಕುಲಾಧಿಪತಿ ಆಗಿಯೇ ನಾನು ಮುಂದುವರಿದರೆ ಇಂತಹ ‘ನಿರಾಕರಣೆಗಳ’ ವಿರುದ್ಧ ಕಠಿಣ ಶಿಸ್ತುಕ್ರಮಗಳನ್ನು ಜರುಗಿಸುವುದು ನಿಶ್ಚಿತ. ಇದರಿಂದ ಹಲವರಿಗೆ ನಿರಾಸೆಯಾಗಬಹುದು. ಹೀಗಾಗಿ, ಕುಲಾಧಿಪತಿಯಾಗಿ ತಮಗಿರುವ ಅಧಿಕಾರ ಹಿಂಪಡೆಯಲು ಕಾಯ್ದೆ ತರಲು ರಾಜ್ಯ ಸರ್ಕಾರಕ್ಕೆ ಸಮಯ ನೀಡುತ್ತಿದ್ದೇನೆ’ ಎಂದೂ ಹೇಳಿದ್ದಾರೆ.

ಡಿ.ಲಿಟ್‌ ಪದವಿ ಕುರಿತಂತೆ ಕುಲಪತಿ ಇತ್ತೀಚೆಗೆ ಬರೆದಿದ್ದ ಪತ್ರವನ್ನು ಉಲ್ಲೇಖಿಸಿ, ಕುಲಪತಿ ವಿರುದ್ಧ ವಾಗ್ದಾಳಿ ನಡೆಸಿದ ರಾಜ್ಯಪಾಲರು, ‘ಡಿಸೆಂಬರ್ 5ರಂದು ತಮ್ಮನ್ನು ಭೇಟಿಯಾಗಿದ್ದ ಕುಲಪತಿ, ‘ಕೆಲವರ’ ನಿರ್ದೇಶನದಂತೆ ಡಾಕ್ಟರೇಟ್ ಕುರಿತು ತೀರ್ಮಾನಿಸಲು ಸಿಂಡಿಕೇಟ್‌ ಸಭೆ ಕರೆಯಲು ಆಗುವುದಿಲ್ಲ ಎಂದು ತಿಳಿಸಿದ್ದರು‘ ಎಂದರು.

‘ವಿಶ್ವವಿದ್ಯಾಲಯದ ಘಟಿಕೋತ್ಸವ 10 ವರ್ಷದಿಂದ ನಡೆದಿರಲಿಲ್ಲ. ಚರ್ಚೆಯ ವೇಳೆ ನಾನು ದೆಹಲಿಯಿಂದ ಪ್ರಮುಖರನ್ನು (ರಾಷ್ಟ್ರಪತಿ) ಕರೆತರುವ ಕುರಿತು ಸಲಹೆ ಮಾಡಿದ್ದೆ. ಘಟಿಕೋತ್ಸವದಲ್ಲಿಯೇ, ನಿಯಮದ ಅನುಸಾರ ರಾಷ್ಟ್ರಪತಿಗೆ ಡಿ.ಲಿಟ್‌ ಪದವಿ ನೀಡುವ ಕುರಿತು ಚಿಂತಿಸಬಹುದು ಎಂದೂ ಹೇಳಿದ್ದೆ. ರಾಷ್ಟ್ರಪತಿ ಭವನದ ನೀತಿಯಂತೆ ರಾಷ್ಟ್ರಪತಿಗಳು ಗೌರವ ಡಾಕ್ಟರೇಟ್‌ ಸ್ವೀಕರಿಸುವುದಿಲ್ಲ. ಇದು, ವಿಶೇಷ ಪ್ರಕರಣ, ಇದು ಹಳೆಯ ವಿಶ್ವವಿದ್ಯಾಲಯ ಎಂದು ಅವರ ಮನವೊಲಿಸುವುದಾಗಿಯೂ ಭರವಸೆ ನೀಡಿದ್ದೆ‘ ಎಂದು ಹೇಳಿದರು.

ಆದರೆ, ಕೆಲ ದಿನಗಳ ನಂತರ ಭೇಟಿ ಮಾಡಿದ್ದ ಕುಲಪತಿ ‘ಕೆಲವರ’ ನಿರ್ದೇಶನದಂತೆ ಸಿಂಡಿಕೇಟ್‌ ಸಭೆ ಕರೆಯಲಾಗದು ಎಂದು ತಿಳಿಸಿದರು. ಆದರೆ, ಆ ‘ಕೆಲವರು’ ಯಾರು ಎಂದು ರಾಜ್ಯಪಾಲರು ತಿಳಿಸಲಿಲ್ಲ.

ಖಾನ್‌ ಅವರು ಕಳೆದ ಡಿಸೆಂಬರ್ 8ರಂದು ತಾವು ಕುಲಾಧಿಪತಿ ಕಾರ್ಯಭಾರದಿಂದ ಹಿಂದೆ ಸರಿಯುವ ಇಚ್ಛೆ ಹೊಂದಿದ್ದೇನೆ ಎಂದು ತಿಳಿಸಿದ್ದರು. ವಿಶ್ವವಿದ್ಯಾಲಯಗಳ ಕಾರ್ಯಚಟುವಟಿಕೆಯಲ್ಲಿ ರಾಜಕೀಯ ಹಸ್ತಕ್ಷೇಪ ಇದೆ ಎಂದು ಆಗ ಆರೋಪಿಸಿದ್ದರು. ಒಂದು ಹಂತದಲ್ಲಿ ಕುಲಾಧಿಪತಿಯಾಗಿ ತಮಗಿರುವ ಅಧಿಕಾರಿವನ್ನು ಸಹ ಕುಲಾಧಿಪತಿಯೂ ಆಗಿರುವ ಉನ್ನತ ಶಿಕ್ಷಣ ಸಚಿವರಿಗೆ ವರ್ಗಾಯಿಸಲು ಸಿದ್ಧ ಎಂದು ತಿಳಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT