ಬುಧವಾರ, ಮಾರ್ಚ್ 29, 2023
25 °C
ಎಎಪಿ, ಜೆಡಿಎಸ್, ಬಿಅರ್‌ಎಸ್, ಬಿಜೆಡಿ ಮತ್ತು ಅಕಾಲಿ ದಳಕ್ಕಿಲ್ಲ ಆಹ್ವಾನ

‘ಭಾರತ್ ಜೋಡೊ’ ಸಮಾರೋಪಕ್ಕೆ ಸಮಾನ ಮನಸ್ಕ ನಾಯಕರ ಆಹ್ವಾನ: ಖರ್ಗೆ ಪತ್ರ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಜಮ್ಮು–ಕಾಶ್ಮೀರದ ಶ್ರೀನಗರದಲ್ಲಿ ಜ. 30ರಂದು ನಡೆಯಲಿರುವ ‘ಭಾರತ್ ಜೋಡೊ’ ಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಳ್ಳುವಂತೆ ತೃಣಮೂಲ ಕಾಂಗ್ರೆಸ್, ಸಮಾಜವಾದಿ, ಡಿಎಂಕೆ, ಸಿಪಿಎಂ, ಸಿಪಿಐ, ಶಿವಸೇನಾ ಹಾಗೂ ಬಿಎಸ್‌ಪಿ ಸೇರಿದಂತೆ 21 ಸಮಾನ ಮನಸ್ಕ ಪಕ್ಷಗಳ ನಾಯಕರನ್ನು ಆಹ್ವಾನಿಸುವ ಕಾಂಗ್ರೆಸ್ ಪಕ್ಷವು ಎಎಪಿ, ಜೆಡಿಎಸ್, ಬಿಅರ್‌ಎಸ್, ಬಿಜೆಡಿ ಮತ್ತು ಅಕಾಲಿ ದಳ ಪಕ್ಷಗಳಿಗೆ ಆಹ್ವಾನ ನೀಡಿಲ್ಲ.

ಆರ್‌ಜೆಡಿಯಿಂದ ಲಾಲು ಪ್ರಸಾದ್, ತೇಜಸ್ವಿ ಯಾದವ್, ನ್ಯಾಷನಲ್ ಕಾನ್ಫರೆನ್ಸ್‌ನಿಂದ ಫಾರೂಕ್ ಅಬ್ದುಲ್ಲಾ ಮತ್ತು ಒಮರ್ ಅಬ್ದುಲ್ಲಾ ಇಬ್ಬರನ್ನೂ ಆಹ್ವಾನಿಸಲಾಗಿದೆ. ಆಹ್ವಾನಿತರ ಪಟ್ಟಿಯಲ್ಲಿ ಹಿರಿಯ ನಾಯಕ ಶರದ್ ಯಾದವ್ ಕೂಡ ಇದ್ದಾರೆ.

21 ಸಮಾನ ಮನಸ್ಕ ಪಕ್ಷಗಳ ಅಧ್ಯಕ್ಷರಿಗೆ ಪತ್ರ ಬರೆದಿರುವ ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ‘ಯಾತ್ರೆಯ ಆರಂಭದಿಂದಲೂ ಕಾಂಗ್ರೆಸ್ ಸಮಾನ ಮನಸ್ಕ ಪಕ್ಷಗಳ ಭಾಗವಹಿಸುವಿಕೆಯನ್ನು ಕೋರಿದೆ. ಪಕ್ಷದ ಮುಖಂಡ ರಾಹುಲ್ ಗಾಂಧಿಯವರ ಆಹ್ವಾನದ ಮೇರೆಗೆ ಹಲವು ರಾಜಕೀಯ ಪಕ್ಷಗಳ ಮುಖಂಡರು ವಿವಿಧ ಹಂತಗಳಲ್ಲಿ ಯಾತ್ರೆಯಲ್ಲಿ ಪಾಲ್ಗೊಂಡಿದ್ದಾರೆ. ಸಮಾರೋಪದಲ್ಲಿ ಪಾಲ್ಗೊಳ್ಳುವ ನಾಯಕರ ಉಪಸ್ಥಿತಿಯು ಯಾತ್ರೆಯ ಉದ್ದೇಶವಾಗಿರುವ ಸತ್ಯ, ಅಹಿಂಸೆ ಮತ್ತು ಕರುಣೆಯ ಸಂದೇಶವನ್ನು ಬಲಪಡಿಸುತ್ತದೆ’ ಎಂದು ಹೇಳಿದ್ದಾರೆ. 

‌‘ಯಾತ್ರೆಯ ಸಮಾರೋಪದಲ್ಲಿ ಪಾಲ್ಗೊಳ್ಳುವಂತೆ ನಾನು ವೈಯಕ್ತಿಕವಾಗಿ ನಿಮ್ಮನ್ನು ಆಹ್ವಾನಿಸುತ್ತಿದ್ದೇನೆ. ದ್ವೇಷ ಮತ್ತು ಹಿಂಸೆಯ ವಿರುದ್ಧ ಹೋರಾಡಿ ಜ. 30ರಂದು ಹುತಾತ್ಮರಾದ ಮಹಾತ್ಮ ಗಾಂಧಿ ಅವರ ಸ್ಮರಣೆಗೆ ಈ ಸಮಾರಂಭವನ್ನು ಸಮರ್ಪಿಸಲಾಗಿದೆ. ಇಲ್ಲಿ ಪಾಲ್ಗೊಳ್ಳುವ ನಾವೆಲ್ಲಾ ದ್ವೇಷ ಮತ್ತು ಹಿಂಸಾಚಾರದ ವಿರುದ್ಧ ಹೋರಾಡಲು, ಸತ್ಯ, ಕರುಣೆ ಮತ್ತು ಅಹಿಂಸೆಯ ಸಂದೇಶವನ್ನು ಹರಡಲು, ಎಲ್ಲರಿಗೂ ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವ ಮತ್ತು ನ್ಯಾಯದ ಸಾಂವಿಧಾನಿಕ ಮೌಲ್ಯಗಳನ್ನು ರಕ್ಷಿಸಲು ಬದ್ಧರಾಗಿದ್ದೇವೆ. ದೇಶದ ಬಿಕ್ಕಟ್ಟಿನ ಸಮಯದಲ್ಲಿ ಜನರ ಸಮಸ್ಯೆಗಳಿಂದ ಸಾರ್ವಜನಿಕ ಗಮನವನ್ನು ವ್ಯವಸ್ಥಿತವಾಗಿ ಬೇರೆಡೆಗೆ ತಿರುಗಿಸುತ್ತಿರುವ ಈ ಸಂದರ್ಭದಲ್ಲಿ ಯಾತ್ರೆಯು ಪ್ರಬಲ ಧ್ವನಿಯಾಗಿ ಹೊರಹೊಮ್ಮಿದೆ. ನೀವು ಭಾಗವಹಿಸುವ ಮೂಲಕ ಯಾತ್ರೆಯ ಸಂದೇಶವನ್ನು ಇನ್ನಷ್ಟು ಬಲಪಡಿಸುತ್ತೀರಿ ಎಂದು ನಾನು ಭಾವಿಸುತ್ತೇನೆ’ ಎಂದೂ ಖರ್ಗೆ ಅವರು ಪತ್ರದಲ್ಲಿ ಬರೆದಿದ್ದಾರೆ.

‘ಇಂದು ಭಾರತವು ಆರ್ಥಿಕ, ಸಾಮಾಜಿಕ ಹಾಗೂ ರಾಜಕೀಯ ಬಿಕ್ಕಟ್ಟನ್ನು ಎದುರಿಸುತ್ತಿದೆ. ಸಂಸತ್ತು ಮತ್ತು ಮಾಧ್ಯಮಗಳಲ್ಲಿ ಪ್ರತಿಪಕ್ಷಗಳ ಧ್ವನಿಯನ್ನು ಹತ್ತಿಕ್ಕುತ್ತಿರುವ ಈ ಸಮಯದಲ್ಲಿ ಭಾರತ್ ಜೋಡೊ ಯಾತ್ರೆಯು ಲಕ್ಷಾಂತರ ಜನರನ್ನು ನೇರವಾಗಿ ಸಂಪರ್ಕಿಸಿದೆ’ ಎಂದೂ ಅವರು ಹೇಳಿದ್ದಾರೆ.

‘ದೇಶದ ಹಣದುಬ್ಬರ, ನಿರುದ್ಯೋಗ, ಸಾಮಾಜಿಕ ಅಂತರಗಳು, ಪ್ರಜಾಪ್ರಭುತ್ವ ಸಂಸ್ಥೆಗಳನ್ನು ಬಲಹೀನಗೊಳಿಸುತ್ತಿರುವ ಹಾಗೂ ಗಡಿಯಲ್ಲಿನ ಗಂಭೀರ ಸಮಸ್ಯೆಗಳ ಬಗ್ಗೆ ನಾವು ಯಾತ್ರೆಯಲ್ಲಿ ಚರ್ಚಿಸಿದ್ದೇವೆ. ಸಮಾಜದ ವಿವಿಧ ವರ್ಗಗಳಾದ ಯುವಜನರು, ಮಹಿಳೆಯರು, ಹಿರಿಯರು, ರೈತರು, ಕಾರ್ಮಿಕರು, ಸಣ್ಣ ವ್ಯಾಪಾರಿಗಳು, ಉದ್ಯಮಿಗಳು ಭಾಗವಹಿಸಿ ತಮ್ಮ ಸಮಸ್ಯೆಗಳನ್ನು ಹಂಚಿಕೊಂಡಿದ್ದಾರೆ. ದಲಿತರು, ಆದಿವಾಸಿಗಳು, ಭಾಷಾ ಮತ್ತು ಧಾರ್ಮಿಕ ಅಲ್ಪಸಂಖ್ಯಾತರು, ಕಾರ್ಯಕರ್ತರು, ಕಲಾವಿದರು ಹಾಗೂ ಆಧ್ಯಾತ್ಮಿಕ ನಾಯಕರೂ ಪಾಲ್ಗೊಂಡಿದ್ದಾರೆ. ಜನರೊಂದಿಗೆ ನೇರ ಸಂಭಾಷಣೆ ನಡೆಸಿರುವುದು ಜೋಡೊ ಯಾತ್ರೆಯ ಪ್ರಮುಖ ಸಾಧನೆಯಾಗಿದೆ’ ಎಂದೂ ಅವರು ಅಭಿಪ್ರಾಯಪಟ್ಟಿದ್ದಾರೆ.

2022ರ ಸೆ.7ರಂದು ಕನ್ಯಾಕುಮಾರಿಯಿಂದ ಆರಂಭವಾದ ಭಾರತ್ ಜೋಡೊ ಯಾತ್ರೆಯು ಜ. 30ರಂದು ಶ್ರೀನಗರದಲ್ಲಿ ಮುಕ್ತಾಯಗೊಳ್ಳಲಿದೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು