ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುಂಬಿಸುವುದು, ಮುದ್ದಿಸುವುದು ಅಸಹಜವಲ್ಲ ಎಂದ ಬಾಂಬೆ ಹೈಕೋರ್ಟ್: ಆರೋಪಿಗೆ ಜಾಮೀನು

Last Updated 15 ಮೇ 2022, 12:48 IST
ಅಕ್ಷರ ಗಾತ್ರ

ಮುಂಬೈ: 'ಭಾರತೀಯ ದಂಡ ಸಂಹಿತೆಯ ಸೆಕ್ಷನ್ 377ರ ಪ್ರಕಾರ, ತುಟಿಗಳಿಗೆ ಚುಂಬಿಸುವುದು, ಮುದ್ದಿಸುವುದು ಅಸಹಜವಲ್ಲ' ಎಂದು ಹೇಳಿರುವ ಬಾಂಬೆ ಹೈಕೋರ್ಟ್, ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಎದುರಿಸುತ್ತಿರುವ ವ್ಯಕ್ತಿಗೆ ಇತ್ತೀಚೆಗೆ ಜಾಮೀನು ಮಂಜೂರು ಮಾಡಿದೆ.

‘ಮಗನ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ’ ಎಂದು ಆರೋಪಿಸಿ 14 ವರ್ಷದ ಬಾಲಕನ ತಂದೆ ವರ್ಷದ ಹಿಂದೆ ಪೊಲೀಸರಿಗೆ ದೂರು ನೀಡಿದ್ದರು. ಈ ಸಂಬಂಧ ಎಫ್‌ಐಆರ್‌ ದಾಖಲಿಸಿದ್ದ ಪೊಲೀಸರು ಆರೋಪಿಯನ್ನು ಬಂಧಿಸಿದ್ದರು. ಈ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ ನ್ಯಾಯಮೂರ್ತಿ ಅನುಜಾ ಪ್ರಭುದೇಸಾಯಿ ಅವರು ಆರೋಪಿಗೆ ಜಾಮೀನು ನೀಡಿ ಆದೇಶ ಹೊರಡಿಸಿದ್ದಾರೆ.

ತಾನು ಆಡುತ್ತಿದ್ದ ‘ಓಲಾ ಪಾರ್ಟಿ’ ಎಂಬ ಆನ್‌ಲೈನ್ ಗೇಮ್‌ಗೆ ರೀಚಾರ್ಜ್‌ ಮಾಡಿಸಿಕೊಳ್ಳಲು ಅಂಗಡಿಯೊಂದಕ್ಕೆ ತೆರಳಿದ್ದಾಗ ಆರೋಪಿಯು ತುಟಿಗಳಿಗೆ ಚುಂಬಿಸಿ, ಖಾಸಗಿ ಭಾಗಗಳನ್ನು ಮುಟ್ಟಿದ್ದಾಗಿ ಬಾಲಕ ತನ್ನ ತಂದೆ ಬಳಿ ಹೇಳಿಕೊಂಡಿದ್ದ.

ಇದಾದ ನಂತರ, ಬಾಲಕನ ತಂದೆ ಠಾಣೆಗೆ ತೆರಳಿ ಎಫ್‌ಐಆರ್ ದಾಖಲಿಸಿದ್ದರು. ಪೊಲೀಸರು ಆರೋಪಿಯನ್ನು ಬಂಧಿಸಿದ್ದರು.

‘ಬಾಲಕನ ವೈದ್ಯಕೀಯ ಪರೀಕ್ಷೆಯು ಆತನ ಮೇಲೆ ಲೈಂಗಿಕ ದೌರ್ಜನ್ಯ ನಡೆದಿರುವುದನ್ನು ಪುಷ್ಟಿಕರಿಸುತ್ತಿಲ್ಲ. ಆರೋಪಿಯ ವಿರುದ್ಧ ಹಾಕಲಾಗಿರುವ ಪೋಸ್ಕೊ ಸೆಕ್ಷನ್‌ಗಳಲ್ಲಿ ಗರಿಷ್ಠ ಐದು ವರ್ಷಗಳ ಶಿಕ್ಷೆ ವಿಧಿಸಬಹುದು. ಅಲ್ಲದೆ, ಈ ಸೆಕ್ಷನ್‌ಗಳಲ್ಲಿ ಆರೋಪಿಯು ಜಾಮೀನಿಗೆ ಅರ್ಹನಾಗುತ್ತಾನೆ ಎಂದು ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಪ್ರಭುದೇಸಾಯಿ ಅಭಿಪ್ರಾಯಪಟ್ಟರು. ಪ್ರಸ್ತುತ ಈ ಪ್ರಕರಣದಲ್ಲಿ, ಅಸ್ವಾಭಾವಿಕ ಲೈಂಗಿಕತೆಯ ಅಂಶವು ಪ್ರಾಥಮಿಕವಾಗಿ ಅನ್ವಯಿಸುವುದೇ ಇಲ್ಲ ಎಂದೂ ಹೇಳಿದರು. ಜತೆಗೆ,ಆರೋಪಿಗೆ ಜಾಮೀನು ಮಂಜೂರು ಮಾಡಿದರು.

‘ಸಂತ್ರಸ್ತನ ಹೇಳಿಕೆ ಮತ್ತು ಪ್ರಥಮ ಮಾಹಿತಿ ವರದಿ (ಎಫ್‌ಐಆರ್) ಪ್ರಕಾರ ಆರೋಪಿಯು, ಖಾಸಗಿ ಭಾಗಗಳನ್ನು ಸ್ಪರ್ಶಿಸಿದ್ದಾನೆ, ತುಟಿಗಳಿಗೆ ಮುತ್ತಿಟ್ಟಿದ್ದಾನೆ ಎಂದು ಹೇಳಲಾಗುತ್ತಿದೆ. ಭಾರತೀಯ ದಂಡ ಸಂಹಿತೆಯ, ಸೆಕ್ಷನ್ 377ರ ಅಡಿಯಲ್ಲಿ ಇದು ಅಪರಾಧವಾಗುವುದಿಲ್ಲ. ಇದು ನನ್ನ ಅಭಿಪ್ರಾಯ’ ಎಂದು ನ್ಯಾಯಾಧೀಶರು ಹೇಳಿದರು.

ಆರೋಪಿ ಈಗಾಗಲೇ ಒಂದು ವರ್ಷದಿಂದ ಸೆರೆವಾಸ ಅನುಭವಿಸಿದ್ದಾನೆ. ಪ್ರಕರಣದ ವಿಚಾರಣೆಯೂ ಶೀಘ್ರದಲ್ಲೇ ಪ್ರಾರಂಭವಾಗುವ ಸಾಧ್ಯತೆಯಿಲ್ಲ. ಈ ಸಂಗತಿಗಳು ಮತ್ತು ಸಂದರ್ಭಗಳನ್ನು ಪರಿಗಣಿಸಿ, ಆರೋಪಿಗೆ ಜಾಮೀನು ನೀಡಲಾಗುತ್ತಿದೆ. ಆತ, ₹30,000ಗಳ ವೈಯಕ್ತಿಕ ಬಾಂಡ್‌ ನೀಡಿ ಜಾಮೀನು ಪಡೆಯಬಹುದು ಎಂದು ಹೈಕೋರ್ಟ್‌ ಹೇಳಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT