ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಕೆ ಸಾವು: ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ ಪೊಲೀಸರು

ಟಿಎಂಸಿ, ಬಿಜೆಪಿ ಆರೋಪ– ಪ್ರತ್ಯಾರೋಪ
Last Updated 2 ಜೂನ್ 2022, 1:10 IST
ಅಕ್ಷರ ಗಾತ್ರ

ಕೋಲ್ಕತ್ತ: ಬಾಲಿವುಡ್‌ನ ಖ್ಯಾತ ಗಾಯಕ ಕೃಷ್ಣಕುಮಾರ್ ಕುನ್ನತ್ (ಕೆಕೆ) ಅವರದ್ದು ಅಸಹಜ ಸಾವು ಎಂದು ಪ್ರಕರಣ ದಾಖಲಿಸಿಕೊಂಡಿರುವ ಕೋಲ್ಕತ್ತ ಪೊಲೀಸರು ತನಿಖೆ ಆರಂಭಿಸಿದ್ದು, ಆಡಳಿತಾರೂಢ ಟಿಎಂಸಿ ಹಾಗೂ ಪ್ರತಿಪಕ್ಷ ಬಿಜೆಪಿಯ ಪರಸ್ಪರ ಆರೋಪ ಪ್ರತ್ಯಾರೋಪದಲ್ಲಿ ತೊಡಗಿವೆ.

ಕೆಕೆ ಅವರದ್ದು ಅಸಹಜ ಸಾವು ಎಂದು ಕೆಕೆ ತಂಗಿದ್ದ ಹೋಟೆಲ್ ವ್ಯಾಪ್ತಿಯ ನ್ಯೂಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ಕೆಕೆ ಇದ್ದ ಹೋಟೆಲ್‌ನ ವ್ಯವಸ್ಥಾಪಕ ಮತ್ತು ಇತರ ಸಿಬ್ಬಂದಿ ಜೊತೆಗೆ ಮಾತನಾಡಿ ಮಾಹಿತಿ ಕಲೆ ಹಾಕಲಾಗಿದೆ. ಆಸ್ಪತ್ರೆಗೆ ಕರೆದೊಯ್ಯುವ ಮೊದಲೇ ಕೆಕೆ ಅಸ್ವಸ್ಥರಾಗಿದ್ದರು. ಆಸ್ಪತ್ರೆಗೆ ಕರೆದೊಯ್ಯುವ ಮುನ್ನ ಏನಾಯಿತು ಎಂದು ತಿಳಿಯಲು ಸಿಸಿಟಿವಿ ದೃಶ್ಯಾವಳಿ ಪರಿಶೀಲಿಸುತ್ತಿದ್ದೇವೆ’ ಎಂದೂ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

‘ಪಶ್ಚಿಮಬಂಗಾಳ ಸರ್ಕಾರದ ಭದ್ರತಾವೈಫಲ್ಯದಿಂದಾಗಿಯೇ ಈ ದುರ್ಘಟನೆ ಸಂಭವಿಸಿದೆ’ ಎಂದು ಬಿಜೆಪಿ ಆರೋಪಿಸಿದ್ದು, ‘ಸಾವನ್ನು ರಾಜಕೀಯಗೊಳಿಸಬೇಡಿ’ ಎಂದು ಟಿಎಂಸಿ ಪ್ರತಿಕ್ರಿಯಿಸಿದೆ.

ಟಿಎಂಸಿ ತಿರುಗೇಟು: ‘ಗಾಯಕನ ಸಾವು ದುರದೃಷ್ಟಕರ. ನಮಗೆಲ್ಲಾ ದುಃಖವಾಗಿದೆ. ಆದರೆ, ಬಿಜೆಪಿ ಮಾಡುತ್ತಿರುವುದು ನಿರೀಕ್ಷಿತವಲ್ಲ. ಕೇಸರಿ ಪಾಳಯವು ತನ್ನ ಕೆಟ್ಟ ರಾಜಕಾರಣವನ್ನು ನಿಲ್ಲಿಸಬೇಕು. ಕೆಕೆ ತಮ್ಮ ಪಕ್ಷದ ನಾಯಕ ಎಂದು ಬಿಜೆಪಿ ಹೇಳಿಕೊಳ್ಳಲು ಆರಂಭಿಸಿದರೆ ಆಶ್ಚರ್ಯವಿಲ್ಲ’ ಎಂದು ಟಿಎಂಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಕುನಾಲ್ ಘೋಷ್ ತಿರುಗೇಟು ನೀಡಿದ್ದಾರೆ.

ಆಸನ ಸಾಮರ್ಥ್ಯಕ್ಕೂ ಹೆಚ್ಚಿದ್ದ ಪ್ರೇಕ್ಷಕರು?

‘ಸಂಗೀತ ಕಾರ್ಯಕ್ರಮವಿದ್ದ ಆ ಸಭಾಂಗಣದಲ್ಲಿ 3 ಸಾವಿರ ಮಂದಿಗೆ ಮಾತ್ರ ಆಸನ ಸಾಮರ್ಥ್ಯವಿದೆ ಆದರೆ, ಅಲ್ಲಿ ಸುಮಾರು 7 ಸಾವಿರ ಜನರಿದ್ದರು ಎಂದು ವರದಿಯಾಗಿದೆ’ ಎಂದು ಬಿಜೆಪಿ ರಾಜ್ಯ ಘಟಕದ ವಕ್ತಾರ ಸಾಮಿಕ್ ಭಟ್ಟಾಚಾರ್ಯ ದೂರಿದ್ದಾರೆ. ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಅನುಪಮ್ ಹಜ್ರಾ, ‘ಕಾರ್ಯಕ್ರಮದ ಆಯೋಜಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು’ ಎಂದು ಟ್ವೀಟ್ ಮಾಡಿದ್ದಾರೆ.

‘ಕೆಕೆ ಸಾವಿನ ಕುರಿತು ಸಕ್ಷಮ ಪ್ರಾಧಿಕಾರದಿಂದ ತನಿಖೆ ನಡೆಸಬೇಕು’ ಎಂದು ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಅಧೀರ್ ರಂಜನ್ ಚೌಧರಿ ಒತ್ತಾಯಿಸಿದ್ದಾರೆ.

‘ಸಭಾಂಗಣದಲ್ಲಿ ಹವಾನಿಯಂತ್ರಣ ವ್ಯವಸ್ಥೆಯು ಕಾರ್ಯನಿರ್ವಹಿಸುತ್ತಿತ್ತು. ಆದರೆ, ಅಲ್ಲಿ ಅಗಾಧ ಜನಸಂದಣಿ ಇತ್ತು’ ಎಂದು ಕೋಲ್ಕತ್ತ ಮೇಯರ್ ಫಿರ್ಹಾದ್ ಹಕೀಮ್ ಹೇಳಿದ್ದಾರೆ.

ಸಾವಿಗೂ ಮುನ್ನ ನಡೆದಿದ್ದೇನು?

ಕೋಲ್ಕತ್ತದ ಎರಡು ಕಾಲೇಜುಗಳಲ್ಲಿ ಸಂಗೀತ ಕಾರ್ಯಕ್ರಮ ನೀಡಲು ಬಂದಿದ್ದ ಕೃಷ್ಣಕುಮಾರ್ ಕುನ್ನತ್ (ಕೆಕೆ) ಸೋಮವಾರ ಮತ್ತು ಮಂಗಳವಾರ ಸಂಜೆ ನಜ್ರುಲ್ ಮಂಚ್ ಸಭಾಂಗಣದಲ್ಲಿ ಕಾರ್ಯಕ್ರಮ ನೀಡಿದ್ದರು.

‘ಮಂಗಳವಾರ ಕಾರ್ಯಕ್ರಮದ ವೇಳೆ ಕೆಕೆ ಜತೆಗೆ ಅಭಿಮಾನಿಗಳು ಸೆಲ್ಫಿ ತೆಗೆದುಕೊಳ್ಳಲು ಮುಗಿಬಿದ್ದಿದ್ದರು. ಈ ವೇಳೆ ಒಂದಿಬ್ಬರು ಅಭಿಮಾನಿಗಳ ಜತೆಗೆ ಸೆಲ್ಫಿ ತೆಗೆಸಿಕೊಂಡಿದ್ದ ಕೆಕೆ, ನಂತರ ಸೆಲ್ಫಿಗೆ ನಿರಾಕರಿಸಿದ್ದರು. ಅಲ್ಲಿಂದ ಹೊರಟ ಅವರು ಹೋಟೆಲ್‌ಗೆ ತೆರಳಿ ಮಹಡಿ ಹತ್ತುವಾಗ ಎಡವಿ ನೆಲದ ಮೇಲೆ ಬಿದ್ದಿದ್ದರು. ಅವರ ಹಣೆಯ ಎಡಭಾಗ ಮತ್ತು ತುಟಿಗಳ ಮೇಲೆ ಗಾಯಗಳಾಗಿವೆ. ಜತೆಗೆ ಬಂದಿದ್ದವರು ಈ ಬಗ್ಗೆ ಹೋಟೆಲ್‌ನ ಸಿಬ್ಬಂದಿಗೆ ತಿಳಿಸಿದಾಗ, ರಾತ್ರಿ 10ರ ಸುಮಾರಿಗೆ ಅವರನ್ನು ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ, ವೈದ್ಯರು ಕೆಕೆ ಮೃತಪಟ್ಟಿದ್ದಾರೆ ಎಂದು ತಿಳಿಸಿದರು’ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

‘ಹೃದಯಸ್ತಂಭನದಿಂದಾಗಿ ಕೆಕೆ ಸಾವಿಗೀಡಾಗಿರಬಹುದು ಎಂದು ವೈದ್ಯರು ಶಂಕಿಸಿದ್ದು, ಶವಪರೀಕ್ಷೆಯ ವರದಿ ಬಂದ ಬಳಿಕವೇ ನಿಖರ ಕಾರಣ ತಿಳಿಯಲಿದೆ’ ಎಂದೂ ಅವರು ಹೇಳಿದ್ದಾರೆ.

ಸರ್ಕಾರಿ ಗೌರವದೊಂದಿಗೆ ಅಂತಿಮ ನಮನ

ಕೆಕೆ ಅವರ ಪಾರ್ಥಿವ ಶರೀರವನ್ನು ಕೆಲಕಾಲ ಕೋಲ್ಕತ್ತದ ರವೀಂದ್ರ ಸದನಲ್ಲಿ ಇರಿಸಲಾಗಿತ್ತು. ಪಶ್ಚಿಮ ಬಂಗಾಳ ಸರ್ಕಾರವು ಸಕಲ ಸರ್ಕಾರಿ ಗೌರವಗಳ ಮೂಲಕ ಅಂತಿಮ ನಮನ ಸಲ್ಲಿಸಿತು.

ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸೇರಿದಂತೆ ಇತರ ಗಣ್ಯರು ಪುಷ್ಪನಮನ ಸಲ್ಲಿಸಿದರು.

‘ಬಾಲಿವುಡ್ ಗಾಯಕ ಕೆಕೆ ಅವರ ಹಠಾತ್ ಮತ್ತು ಅಕಾಲಿಕ ನಿಧನವು ಅಘಾತ, ದುಃಖವನ್ನುಂಟು ಮಾಡಿದೆ. ಅವರ ಸಾವಿಗೆ ಸಂತಾಪಗಳು’ ಎಂದು ಮಮತಾ ಟ್ವೀಟ್ ಮಾಡಿದ್ದಾರೆ.

ಪಾರ್ಥಿವ ಶರೀರವನ್ನು ಕೆಕೆ ಅವರ ಕುಟುಂಬಕ್ಕೆ ಒಪ್ಪಿಸಿದ ಬಳಿಕ ಮುಂಬೈಗೆ ಕೊಂಡೊಯ್ಯಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT