ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅತ್ಯಾಚಾರದ ಬಗ್ಗೆ ರಮೇಶ್‌ ಕುಮಾರ್‌ ಹೇಳಿಕೆ: ದೇಶದಾದ್ಯಂತ ಭಾರಿ ಆಕ್ರೋಶ

Last Updated 18 ಡಿಸೆಂಬರ್ 2021, 0:59 IST
ಅಕ್ಷರ ಗಾತ್ರ

ನವದೆಹಲಿ:‘ತಪ್ಪಿಸಿಕೊಳ್ಳಲುಸಾಧ್ಯವೇ ಇಲ್ಲದಿದ್ದರೆ ಅತ್ಯಾಚಾರವನ್ನು ಆನಂದಿಸಿ ಎಂಬ ಮಾತಿದೆ’ ಎಂದು ಕಾಂಗ್ರೆಸ್‌ ಶಾಸಕ ಕೆ.ಆರ್‌. ರಮೇಶ್‌ ಕುಮಾರ್‌ ಅವರು ವಿಧಾನಸಭೆಯಲ್ಲಿ ಗುರುವಾರ ಆಡಿದ್ದ ಮಾತಿಗೆ ದೇಶದಾದ್ಯಂತ ಶುಕ್ರವಾರ ಭಾರಿ ಆಕ್ರೋಶ ವ್ಯಕ್ತವಾಗಿದೆ.

ಕೇಂದ್ರ ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿ ಲೋಕಸಭೆಯಲ್ಲಿ ವಿಷಯ ಪ್ರಸ್ತಾಪಿಸಿ, ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಷ್ಟ್ರೀಯ ಮಹಿಳಾ ಆಯೋಗ (ಎನ್‌ಸಿಡಬ್ಲ್ಯು), ಬಿಜೆಪಿ ಮತ್ತು ಕಾಂಗ್ರೆಸ್‌ನ ಕೆಲವು ಶಾಸಕಿಯರು ರಮೇಶ್‌ ಕುಮಾರ್‌ ಹೇಳಿದ್ದನ್ನು ಖಂಡಿಸಿದ್ದಾರೆ.

ಕಾಂಗ್ರೆಸ್‌ ಮುಖಂಡರಾದ ರಾಹುಲ್‌ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಅವರು ತಮ್ಮ ಪಕ್ಷದ ಮುಖಂಡನ ಹೇಳಿಕೆಯ ಬಗ್ಗೆ ಮೌನವಾಗಿದ್ದಾರೆ ಎಂದು ಬಿಜೆಪಿ ಮುಖಂಡರು ಮಾಧ್ಯಮಗೋಷ್ಠಿಯಲ್ಲಿ ಪ್ರಶ್ನಿಸಿದ್ದಾರೆ.

‘ಸ್ತ್ರೀದ್ವೇಷಿಗಳು ಮತ್ತು ಮಹಿಳೆಯರ ಬಗ್ಗೆ ಕ್ರೂರ ಮನಸ್ಥಿತಿಯ ಜನಪ್ರತಿನಿಧಿಗಳು ಇನ್ನೂ ಇದ್ದಾರೆ ಎಂಬುದು ಅತ್ಯಂತ ಬೇಸರ ಮತ್ತು ದುರದೃಷ್ಟಕರ ವಿಚಾರ’ ಎಂದು ಎನ್‌ಸಿಡಬ್ಲ್ಯು ಅಧ್ಯಕ್ಷೆ ರೇಖಾ ಶರ್ಮಾ ಟ್ವೀಟ್‌ ಮಾಡಿದ್ದಾರೆ.

ಸ್ಮೃತಿ ಇರಾನಿ ಅವರು ಲೋಕಸಭೆಯಲ್ಲಿ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದ ಸಂದರ್ಭದಲ್ಲಿ, ಕೇಂದ್ರ ಸಚಿವ ಅಜಯ್‌ ಮಿಶ್ರಾ ಅವರನ್ನು ಲಖಿಂಪುರ ಖೇರಿ ಹಿಂಸಾಚಾರಕ್ಕೆ ಸಂಬಂಧಿಸಿ ವಜಾ ಮಾಡಬೇಕು ಎಂದು ಆಗ್ರಹಿಸಿ ವಿರೋಧ ಪಕ್ಷಗಳ ಸದಸ್ಯರು ಪ್ರತಿಭಟನೆ ನಡೆಸುತ್ತಿದ್ದರು. ಫಲಕಗಳನ್ನು ಪ್ರದರ್ಶಿಸುತ್ತಿದ್ದ ಅವರು ಸ್ಮೃತಿ ಅವರಿಗೆ ಅಡ್ಡವಾಗಿ ನಿಂತಿದ್ದರು.

ನಿರ್ದಿಷ್ಟ ಪಕ್ಷವೊಂದಕ್ಕೆ ಸೇರಿದ ಶಾಸಕರೊಬ್ಬರು ಮಹಿಳೆಯರ ಬಗ್ಗೆ ಗುರುವಾರ ನೀಡಿದ ಹೇಳಿಕೆಯನ್ನು ಕರ್ನಾಟಕದ ಎಲ್ಲ ಜನಪ್ರತಿನಿಧಿಗಳು ಖಂಡಿಸುವ ಅಗತ್ಯವಿದೆ ಎಂದು ಸ್ಮೃತಿ ಹೇಳಿದರು. ‘ಮಹಿಳೆಯರ ಪರವಾಗಿ ನಿಜವಾದ ಕಾಳಜಿ ಇದ್ದರೆ, ಮೊದಲು ಇಲ್ಲಿ ನಿಂತು, ದೇಶದ ಮಹಿಳೆಯ ಮೇಲೆ ಅತ್ಯಾಚಾರವಾದರೆ ಅದನ್ನು ಅವರು ಆನಂದಿಸಬೇಕು ಎಂಬ ಹೇಳಿಕೆಯನ್ನು ಖಂಡಿಸಿ’ ಎಂದು ಸ್ಮೃತಿ ಆಕ್ರೋಶ ವ್ಯಕ್ತಪಡಿಸಿದರು.

‘ಸ್ಪೀಕರ್‌ ಪೀಠದ ಮುಂದೆ ನಿಂತಿರುವವರು ತಮ್ಮ ರಾಜಕೀಯ ಸಂಘಟನೆಗಳಿಗೆ ಹೋಗಿ, ಆ ವ್ಯಕ್ತಿಯ ವಿರುದ್ಧ ಕ್ರಮ ಕೈಗೊಳ್ಳಿ. ನಂತರ, ಮಹಿಳೆ ಮತ್ತು ಮಕ್ಕಳ ವಿರುದ್ಧ ಈ ದೇಶದಲ್ಲಿ ಯಾರು ಮಾತನಾಡುತ್ತಾರೆ ಎಂಬುದನ್ನು ನೋಡೋಣ’ ಎಂದು ಸಚಿವೆ ಹೇಳಿದರು.

ಬಿಜೆಪಿ ಮುಖಂಡರಾದ ಅನಿಲ್‌ ಬಲೂನಿ, ರಾಜೀವ್‌ ಚಂದ್ರಶೇಖರ್‌ ಮತ್ತು ರಾಜ್ಯವರ್ಧನ ರಾಥೋಡ್‌ ಅವರು ಮಾಧ್ಯಮಗೋಷ್ಠಿ ನಡೆಸಿ ಕಾಂಗ್ರೆಸ್‌ ವಿರುದ್ಧ ಹರಿಹಾಯ್ದರು. ‘ಇದು ಅತ್ಯಂತ ನಾಚಿಕೆಗೇಡು ಮತ್ತು ದುಃಖಕರ. ಮಹಿಳೆಯರ ಮೇಲೆ ಕಳಂಕ ಹೇರಿದ ಇತಿಹಾಸವೇ ಕಾಂಗ್ರೆಸ್‌ಗೆ ಇದೆ’ ಎಂದು ಬಿಜೆಪಿಯ ಮುಖ್ಯ ವಕ್ತಾರ ಬಲೂನಿ ಹೇಳಿದರು.

‘ಮಹಿಳೆಯರ ಮೇಲೆ ಎಸಗಲಾಗುವ ಅತ್ಯಾಚಾರದಂತಹ ಅಪರಾಧವು ವಿನೋದದ ವಿಚಾರ ಎಂದು ಶಾಸಕ ರಮೇಶ್‌ ಕುಮಾರ್‌ ಅವರು ಭಾವಿಸಿದ್ದಾರೆ. ಅಂಥವರನ್ನು ರಾಹುಲ್‌ ಮತ್ತು ಪ್ರಿಯಾಂಕಾ ಅವರು ವಿಧಾನಸಭೆಯ ಸ್ಪೀಕರ್‌ ಸ್ಥಾನದಂತಹ ಸಾಂವಿಧಾನಿಕ ಹುದ್ದೆಗೆ ಆಯ್ಕೆ ಮಾಡಿದ್ದರು’ ಎಂದು ರಾಜೀವ್‌ ಚಂದ್ರಶೇಖರ್‌ ಟ್ವೀಟ್‌ ಮಾಡಿದ್ದಾರೆ.

ರಮೇಶ್‌ ಕುಮಾರ್‌ ಅವರ ಮಾತಿಗೆ ಜೋರಾಗಿ ನಕ್ಕ ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ವರ್ತನೆಯನ್ನು ಬಿಜೆಪಿ ವಕ್ತಾರೆ ಅಪರ್ಣಾ ಸಾರಂಗಿ ಅವರು ಪ್ರಶ್ನಿಸಿದ್ದಾರೆ. ‘ಅಂತಹ ಆಕ್ಷೇಪಾರ್ಹ ಮಾತಿನ ಬಳಿಕವೂ ಸ್ಪೀಕರ್ ಏನನ್ನೂ ಹೇಳಿಲ್ಲ ಎಂಬುದು ಬೇಸರದ ಸಂಗತಿ. ಅಷ್ಟೇ ಅಲ್ಲದೆ, ಅವರು ಜೋರಾಗಿ ನಕ್ಕುಬಿಟ್ಟರು’ ಎಂದು ಸಾರಂಗಿ ಹೇಳಿದ್ದಾರೆ.

ಪ್ರಿಯಾಂಕಾ ಅಸಮಾಧಾನ
ಕಾಂಗ್ರೆಸ್‌ ಮುಖಂಡರಾದ ಪ್ರಿಯಾಂಕಾ ಗಾಂಧಿ ವಾದ್ರಾ ಮತ್ತು ಮುಖ್ಯ ವಕ್ತಾರ ರಣದೀಪ್‌ ಸುರ್ಜೇವಾಲಾ ಅವರು ಟ್ವೀಟ್‌ ಮಾಡಿ, ರಮೇಶ್‌ ಕುಮಾರ್‌ ಹೇಳಿಕೆಯನ್ನು ಖಂಡಿಸಿದ್ದಾರೆ. ‘ರಮೇಶ್‌ ಕುಮಾರ್‌ ಅವರ ಹೇಳಿಕೆಯನ್ನು ನಾನು ಖಂಡಿಸುತ್ತೇನೆ. ಹೇಳಲಾಗದ ಇಂತಹ ಪದಗಳನ್ನು ಯಾರಾದರೂ ಹೇಗೆ ಉಚ್ಚರಿಸುತ್ತಾರೆ. ಇದು ಸಮರ್ಥನೀಯ ಅಲ್ಲವೇ ಅಲ್ಲ’ ಎಂದು ಪ್ರಿಯಾಂಕಾ ಟ್ವೀಟ್‌ ಮಾಡಿದ್ದಾರೆ.

‘ಸದನದ ಪಾಲಕರಾಗಿರುವ ಸ್ಪೀಕರ್‌ ಮತ್ತು ಹಿರಿಯ ಶಾಸಕರು ಎಲ್ಲರಿಗೂ ಮಾದರಿ ಆಗಬೇಕು ಎಂದು ನಿರೀಕ್ಷಿಸಲಾಗುತ್ತಿದೆ. ಅಂಥವರು ಈ ರೀತಿಯ ಸ್ವೀಕಾರಾರ್ಹವಲ್ಲದ ವರ್ತನೆಯಿಂದ ದೂರ ಇರಬೇಕು’ ಎಂದು ಸುರ್ಜೇವಾಲಾ ಟ್ವೀಟ್‌ ಮಾಡಿದ್ದಾರೆ.

*

ವಿಧಾನಸಭೆಯಲ್ಲಿ ಮಹಿಳೆಯರ ವಿಚಾರಗಳನ್ನು ಪ್ರತಿನಿಧಿಸಲು ಇಂಥವರನ್ನು ಆಯ್ಕೆ ಮಾಡಲಾಗುತ್ತಿದೆ. ಇಂತಹ ಹೇಳಿಕೆಗೆ ಪ್ರತಿಯೊಬ್ಬ ಮಹಿಳೆಯ ಕ್ಷಮೆ ಯಾಚಿಸಬೇಕು.
–ರೇಖಾ ಶರ್ಮಾ, ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ

*

ಕರ್ನಾಟಕ ವಿಧಾನಸಭೆಯ ಸ್ಪೀಕರ್‌ ಮತ್ತು ಹಿರಿಯ ಶಾಸಕರ ನಡುವೆ ಸದನದಲ್ಲಿ ನಡೆದ ಅತ್ಯಂತ ಆಕ್ಷೇಪಾರ್ಹ ತಮಾಷೆಯನ್ನು ಕಾಂಗ್ರೆಸ್‌ ಪಕ್ಷ ಒಪ್ಪುವುದಿಲ್ಲ.
–ರಣದೀಪ್‌ ಸುರ್ಜೇವಾಲಾ, ಕಾಂಗ್ರೆಸ್‌ ವಕ್ತಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT