ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶದಲ್ಲಿ ದುಡಿಮೆಗೆ ತಕ್ಕ ಗೌರವದ ಕೊರತೆ ನಿರುದ್ಯೋಗದ ಮೂಲ: ಭಾಗವತ್

Last Updated 6 ಫೆಬ್ರುವರಿ 2023, 5:53 IST
ಅಕ್ಷರ ಗಾತ್ರ

ಮುಂಬೈ: ದುಡಿಮೆಗೆ ತಕ್ಕ ಗೌರವ ಇಲ್ಲದಿರುವುದು ದೇಶದಲ್ಲಿ ನಿರುದ್ಯೋಗ ಸಮಸ್ಯೆಯ ಹಿಂದಿರುವ ಪ್ರಮುಖ ಕಾರಣಗಳಲ್ಲಿ ಒಂದೆನಿಸಿದೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರೆಸ್ಸೆಸ್‌) ಸರಸಂಘ ಚಾಲಕ ಮೋಹನ್‌ ಭಾಗವತ್‌ ಭಾನುವಾರ ಇಲ್ಲಿ ಅಭಿಪ್ರಾಯಪಟ್ಟರು.

ಸಾರ್ವಜನಿಕ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಎಲ್ಲರೂ ಉದ್ಯೋಗಗಳ ಹಿಂದೆ ಓಡುತ್ತಾರೆ. ಇತರ ಉದ್ಯೋಗಗಳು ಶೇ 20ರಷ್ಟಿದ್ದರೆ, ಸರ್ಕಾರಿ ಉದ್ಯೋಗಗಳು ಇರುವುದು ಕೇವಲ ಶೇ 10 ಮಾತ್ರ. ವಿಶ್ವದ ಯಾವುದೇ ಸಮಾಜವು ಶೇ 30ಕ್ಕಿಂತ ಹೆಚ್ಚು ಉದ್ಯೋಗಗಳನ್ನು ಸೃಷ್ಟಿಸಲು ಸಾಧ್ಯವಿಲ್ಲ. ಉದ್ಯೋಗದ ಬೆನ್ನತ್ತಿ ಓಡುವ ಪ್ರವೃತ್ತಿ ನಿಲ್ಲಿಸಬೇಕು. ಯಾವುದೇ ರೀತಿಯಾದ ಕೆಲಸವಾದರೂ ಅದನ್ನು ಗೌರವಿಸುವ ಸ್ವಭಾವವನ್ನು ಜನರು ರೂಢಿಸಿಕೊಳ್ಳಬೇಕು’ ಎಂದು ಅವರು ಹೇಳಿದರು.

‘ದೇಶದಲ್ಲಿ ಕೃಷಿಯ ಮೂಲಕ ಉತ್ತಮ ಆದಾಯ ಗಳಿಸಿದರೂ ಮದುವೆಯಾಗಲು ಹೆಣಗಾಡುತ್ತಿರುವ ಅನೇಕ ರೈತರು ಇದ್ದಾರೆ. ಕೆಲಸಕ್ಕೆ ದೈಹಿಕ ಶ್ರಮ ಅಥವಾ ಬುದ್ಧಿಶಕ್ತಿ ಅಗತ್ಯವಿದೆಯೇ, ಅದಕ್ಕೆ ಕಠಿಣ ಪರಿಶ್ರಮ ಅಥವಾ ಕೌಶಲಗಳು ಅಗತ್ಯವಿದೆಯೇ ಎನ್ನುವುದು ಮುಖ್ಯವಲ್ಲ. ಎಲ್ಲ ರೀತಿಯ ಕೆಲಸವನ್ನೂ ಗೌರವಿಸಬೇಕು’ ಎಂದರು.

‘ಅಸ್ಪೃಶ್ಯತೆಯಿಂದ ನೊಂದಿದ್ದ ಡಾ. ಬಿ.ಆರ್‌. ಅಂಬೇಡ್ಕರ್‌ ಹಿಂದೂ ಧರ್ಮವನ್ನು ತೊರೆದರು. ಬೇರೆ ಧರ್ಮಗಳನ್ನು ಅಪ್ಪಿಕೊಳ್ಳದ ಅವರು ಬುದ್ಧನ ಮಾರ್ಗ ಅನುಸರಿಸಿದರು. ಅವರ ಬೋಧನೆಯಲ್ಲಿ ಭಾರತೀಯ ಮೌಲ್ಯಗಳೇ ಹಾಸುಹೊಕ್ಕಾಗಿದ್ದವು’ ಎಂದು ಭಾಗವತ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT