ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಖಿಂಪುರ–ಖೇರಿ ಪ್ರಕರಣ: ಕೇಂದ್ರ ಸಚಿವರ ಮಗ ಆಶಿಶ್‌ ಮಿಶ್ರಾ ಬಂದೂಕಿನಿಂದಲೇ ಗುಂಡು

ವಿಧಿ ವಿಜ್ಞಾನ ವರದಿಯಲ್ಲಿ ದೃಢ
Last Updated 9 ನವೆಂಬರ್ 2021, 20:09 IST
ಅಕ್ಷರ ಗಾತ್ರ

ಲಖನೌ: ಲಖಿಂಪುರ–ಖೇರಿಯಲ್ಲಿ ರೈತರು ಸೇರಿ ಎಂಟು ಮಂದಿಯ ಹತ್ಯೆ ಪ್ರಕರಣವು ಹೊಸ ತಿರುವು ಪಡೆದಿದೆ. ಕೇಂದ್ರ ಗೃಹ ಖಾತೆಯ ರಾಜ್ಯ ಸಚಿವ ಅಜಯ್‌ ಮಿಶ್ರಾ ಅವರ ಮಗ ಆಶಿಶ್‌ ಮಿಶ್ರಾ ಅವರ ಬಂದೂಕಿನಿಂದಲೇ ಹಿಂಸಾಚಾರ ನಡೆದ ದಿನ ಗುಂಡು ಹಾರಿಸಲಾಗಿದೆ ಎಂಬುದನ್ನು ವಿಧಿ ವಿಜ್ಞಾನ ವರದಿಯು ದೃಢಪಡಿಸಿದೆ. ರೈತರ ಮೇಲೆ ಎಸ್‌ಯುವಿ ಹರಿಸಿ ನಾಲ್ವರನ್ನು ಹತ್ಯೆ ಮಾಡಿದ ಆರೋ‍ಪ ಆಶಿಶ್‌ ಮತ್ತು ಅವರ ಗೆಳೆಯ ಅಂಕಿತ್‌ ದಾಸ್‌ ಮೇಲೆ ಇದೆ.

ಈ ಇಬ್ಬರೂ ಈಗ ಬಂಧನದಲ್ಲಿದ್ದಾರೆ. ಪರವಾನಗಿ ಇರುವ ತಮ್ಮ ಬಂದೂಕಿನಿಂದ ಗುಂಡು ಹಾರಿಸಿಲ್ಲ ಎಂದು ಆಶಿಶ್‌ತನಿಖೆಯ ಸಂದರ್ಭದಲ್ಲಿ ಹೇಳಿದ್ದರು.

‘ಆಶಿಶ್‌ ಅವರ ಬಂದೂಕು ಮತ್ತು ಅಂಕಿತ್‌ ಅವರ ಪಿಸ್ತೂಲ್‌ನಿಂದ ಗುಂಡು ಹಾರಾಟ ನಡೆಸಲಾಗಿದೆ’ ಎಂದು ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ಲಖಿಂಪುರ–ಖೇರಿಯಲ್ಲಿ ಹೇಳಿದ್ದಾರೆ. ಆಶಿಶ್‌ ಮತ್ತು ಅಂಕಿತ್‌ ಅವರೇ ಗುಂಡು ಹಾರಿಸಿದ್ದಾರೆ ಎಂದು ರೈತರು ಆರೋಪಿಸಿದ್ದರು.

ಕೇಂದ್ರದ ಮೂರು ಕೃಷಿ ಕಾಯ್ದೆಗಳ ವಿರುದ್ಧದ ಪ್ರತಿಭಟನೆಯನ್ನು ರೈತರು ನಿಲ್ಲಿಸದಿದ್ದರೆ ಗಂಭೀರ ಪರಿಣಾಮಗಳನ್ನು ಎದುರಿಸಬೇಕಾದೀತು ಎಂದು ಅಜಯ್‌ ಮಿಶ್ರಾ ಅವರು ಹೇಳಿಕೆ ನೀಡಿದ್ದರು. ಅದರ ವಿರುದ್ಧ ಲಖಿಂಪುರ–ಖೇರಿಯ ತಿಕೋನಿಯಾ ಎಂಬಲ್ಲಿ ಕಳೆದ ತಿಂಗಳು ನೂರಾರು ರೈತರು ಪ್ರತಿಭಟನೆ ನಡೆಸಿದ್ದರು. ಈ ಸಂದರ್ಭದಲ್ಲಿ ರೈತರ ಮೇಲೆ ಎಸ್‌ಯುವಿ ಹರಿಸಲಾಗಿತ್ತು. ಅದರಲ್ಲಿ ನಾಲ್ವರು ಮೃತಪಟ್ಟಿದ್ದರು. ಬಳಿಕ ನಡೆದ ಹಿಂಸಾಚಾರದಲ್ಲಿ ನಾಲ್ವರು ಬಲಿಯಾಗಿದ್ದರು.

ಪ್ರಕರಣಕ್ಕೆ ಸಂಬಂಧಿಸಿ ಎರಡು ಎಫ್‌ಐಆರ್‌ ದಾಖಲಾಗಿವೆ. ಆಶಿಶ್‌, ಅಂಕಿತ್‌ ಮತ್ತು ಇತರರ ವಿರುದ್ಧ ರೈತರು ಎಫ್‌ಐಆರ್‌ ದಾಖಲಿಸಿದ್ದಾರೆ. ಅಪರಿಚಿತ ವ್ಯಕ್ತಿಗಳ ವಿರುದ್ಧ ಬಿಜೆಪಿ ಕಾರ್ಯಕರ್ತರೊಬ್ಬರು ದೂರು ದಾಖಲಿಸಿದ್ದಾರೆ.
ಪ್ರಕರಣದಲ್ಲಿ ಈವರೆಗೆ 17 ಮಂದಿಯನ್ನು ಬಂಧಿಸಲಾಗಿದೆ.

ರೈತರ ಮೇಲೆ ಹರಿದ ವಾಹನದಲ್ಲಿ ತಾವು ಇರಲಿಲ್ಲ ಎಂದು ಆಶಿಶ್‌ ತನಿಖೆಯ ವೇಳೆ ಹೇಳಿದ್ದರು. ಅಜಯ್‌ ಮಿಶ್ರಾ ಅವರೂ ಇದನ್ನು ಪುನರುಚ್ಚರಿಸಿದ್ದಾರೆ. ಆದರೆ, ಎಸ್‌ಯುವಿಯಲ್ಲಿ ಆಶಿಶ್‌ ಇದ್ದರು ಎಂದು ರೈತರು ಹೇಳಿದ್ದಾರೆ.

ಹಿಂಸಾಚಾರದ ಬಳಿಕ ದೇಶದಾದ್ಯಂತ ಆಕ್ರೋಶ ವ್ಯಕ್ತವಾಗಿತ್ತು. ಅಜಯ್‌ ಮಿಶ್ರಾ ಅವರು ರಾಜೀನಾಮೆ ಕೊಡಬೇಕು ಎಂಬ ಆಗ್ರಹ ಬಲವಾಗಿ ಕೇಳಿ ಬಂದಿತ್ತು. ಆದರೆ, ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರ ಜತೆಗೆ ಅಜಯ್‌ ಅವರು ಇತ್ತೀಚೆಗೆ ವೇದಿಕೆ ಹಂಚಿಕೊಂಡಿದ್ದರು.

ಪ್ರಕರಣದ ತನಿಖೆಯು ಸಮರ್ಪಕವಾಗಿ ನಡೆಯುತ್ತಿಲ್ಲ ಎಂದು ಸುಪ್ರೀಂ ಕೋರ್ಟ್‌ ಸೋಮವಾರ ಅಸಮಾಧಾನ ವ್ಯಕ್ತಪಡಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT