ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾಲು ಪ್ರಸಾದ್‌ ಯಾದವ್‌ ಜಾಮೀನು ಅರ್ಜಿ ವಿಚಾರಣೆ ಫೆ.5ಕ್ಕೆ ಮುಂದೂಡಿಕೆ

Last Updated 29 ಜನವರಿ 2021, 11:39 IST
ಅಕ್ಷರ ಗಾತ್ರ

ರಾಂಚಿ: ಡುಮ್ಕಾ ಖಜಾನೆ ಪ್ರಕರಣದಲ್ಲಿ ಜಾಮೀನು ಕೋರಿ ಆರ್‌ಜೆಡಿ ವರಿಷ್ಠ ಲಾಲು ಪ್ರಸಾದ್‌ ಯಾದವ್‌ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಜಾರ್ಖಂಡ್‌ ಹೈಕೋರ್ಟ್‌ ಫೆಬ್ರುವರಿ 5ಕ್ಕೆ ಮುಂದೂಡಿದೆ.

‘ಲಾಲು ಪರವಾಗಿ ಸಲ್ಲಿಸಿರುವ ದಾಖಲೆಗಳು ಇನ್ನೂ ತಮ್ಮ ಕೈಸೇರಿಲ್ಲ. ಹೀಗಾಗಿ ವಿಚಾರಣೆಯನ್ನು ಮುಂದಿನ ವಾರಕ್ಕೆ ಮುಂದೂಡಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಏನಾದರೂ ಹೇಳಲು ಬಯಸಿದರೆ ಈ ಅವಧಿಯಲ್ಲಿ ಅದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಸಲ್ಲಿಸಬಹುದು’ ಎಂದು ನ್ಯಾಯಾಧೀಶ ಅಪರೇಶ್‌ ಕುಮಾರ್‌ ಸಿಂಗ್‌ ಶುಕ್ರವಾರ ಹೇಳಿದ್ದಾರೆ.

ಈ ಪ್ರಕರಣದಲ್ಲಿ ವಾದ ಮಂಡಿಸಲು ತಾವು ಸಿದ್ಧರಿರುವುದಾಗಿ ಸಿಬಿಐ ಪರ ವಕೀಲ ರಾಜೀವ್‌ ಸಿನ್ಹಾ ನ್ಯಾಯಾಲಯಕ್ಕೆ ತಿಳಿಸಿದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಲಾಲು ಅವರು ಸಲ್ಲಿಸಿರುವ ದಾಖಲೆ ಪತ್ರಗಳು ಇನ್ನೂ ನ್ಯಾಯಾಲಯಕ್ಕೆ ತಲುಪಿಲ್ಲ. ಹೀಗಿರುವಾಗ ವಾದ ಮಂಡಿಸುವುದರಲ್ಲಿ ಅರ್ಥವೇ ಇಲ್ಲ ಎಂದು ಲಾಲು ಪರ ವಕೀಲರಾದ ಕಪಿಲ್‌ ಸಿಬಲ್‌ ಹೇಳಿದರು. ಹೀಗಾಗಿ ವಿಚಾರಣೆಯನ್ನು ಮುಂದಕ್ಕೆ ಹಾಕಲಾಯಿತು.

ಬಹುಕೋಟಿ ಮೇವು ಹಗರಣದ ಮೂರು ಪ್ರಕರಣಗಳಲ್ಲಿ ಲಾಲು ಅವರಿಗೆ ಈಗಾಗಲೇ ಜಾಮೀನು ಸಿಕ್ಕಿದೆ. ಡುಮ್ಕಾ ಖಜಾನೆ ಪ್ರಕರಣದಲ್ಲೂ ಜಾಮೀನು ಮಂಜೂರಾದರೆ ಅವರು ಜೈಲಿನಿಂದ ಬಿಡುಗಡೆಯಾಗುವ ಸಾಧ್ಯತೆ ಇದೆ.

ಲಾಲು ಅವರು ಸಿಬಿಐ ನ್ಯಾಯಾಲಯ ವಿಧಿಸಿರುವ ಶಿಕ್ಷೆಯ ಪ್ರಮಾಣದ ಅರ್ಧದಷ್ಟು ಅವಧಿಯನ್ನು ಈಗಾಗಲೇ ಜೈಲಿನಲ್ಲಿ ಕಳೆದಿದ್ದಾರೆ. ಹೀಗಾಗಿ ಡುಮ್ಕಾ ಖಜಾನೆ ಪ್ರಕರಣಕ್ಕೆ ಸಂಬಂಧಿಸಿದ ಅರ್ಜಿಯ ವಿಚಾರಣೆಯನ್ನು ತ್ವರಿತಗತಿಯಲ್ಲಿ ನಡೆಸಬೇಕೆಂದು ಜನವರಿ 25ರಂದು ಲಾಲು ಪರವಾಗಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿತ್ತು. ಇದನ್ನು ಪುರಸ್ಕರಿಸಿದ್ದ ನ್ಯಾಯಾಲಯ ಜನವರಿ 29ರಂದು ಅರ್ಜಿಯ ವಿಚಾರಣೆ ನಡೆಸುವುದಾಗಿ ತಿಳಿಸಿತ್ತು.

ಜೈಲಿನಲ್ಲಿರುವ ಲಾಲು ಆರೋಗ್ಯದಲ್ಲಿ ಏರುಪೇರಾಗಿದ್ದರಿಂದ ಹೋದ ವಾರ ಅವರನ್ನು ರಾಂಚಿಯಿಂದ ನವದೆಹಲಿಯ ಏಮ್ಸ್‌ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT