ಶ್ರೀನಗರ (ಪಿಟಿಐ): ‘ಸಮೀಪದ ಕುಲ್ಗಾಮ್‌ನಲ್ಲಿ ಗುರುವಾರ ರಾತ್ರಿ ನಡೆದ, ಬಿಜೆಪಿಯ ಮೂವರು ಕಾರ್ಯಕರ್ತರ ಹತ್ಯೆಯ ಹಿಂದೆ ಲಷ್ಕರ್ ಎ– ತಯಬಾ ಸಂಘಟನೆಯ ಕೈವಾಡವಿದೆ’ ಎಂದು ಐಜಿಪಿ ವಿಜಯ್ ಕುಮಾರ್ ಹೇಳಿದ್ದಾರೆ.
ಬಿಜೆಪಿ ಕಾರ್ಯಕರ್ತರಾದ ಫಿದಾ ಹುಸೇನ್, ಉಮರ್ ಹಜಮ್ ಹಾಗೂ ಉಮರ್ ರಷೀದ್ ಅವರನ್ನು ಗುರುವಾರ ತಡರಾತ್ರಿ ಗುಂಡಿಟ್ಟು ಹತ್ಯೆ ಮಾಡಲಾಗಿತ್ತು. ಲಷ್ಕರ್ ಎ– ತಯಬಾದ ಛಾಯಾ ಸಂಘಟನೆ ಎನ್ನಲಾದ ‘ದಿ ರೆಸಿಸ್ಟೆಂಟ್ ಫ್ರಂಟ್’ (ಟಿಆರ್‌ಎಫ್) ಈ ಹತ್ಯೆಯ ಹೊಣೆಯನ್ನು ಹೊತ್ತಿದೆ.
‘ಸ್ಥಳೀಯ ಉಗ್ರ ಸಂಘಟನೆಗೆ ಸೇರಿದವನು ಎನ್ನಲಾದ ಅಲ್ತಾಫ್ ಎಂಬ ವ್ಯಕ್ತಿಗೆ ಸೇರಿದ ಕಾರಿನಲ್ಲಿ ಬಂದಿದ್ದ ಮೂವರು ಉಗ್ರರು, ಫಿದಾ ಹುಸೇನ್ ಹಾಗೂ ಇತರ ಇಬ್ಬರ ಮೇಲೆ ಅತ್ಯಂತ ಸನಿಹದಿಂದ ಗುಂಡಿನ ದಾಳಿ ನಡೆಸಿದ್ದರು. ಆಸ್ಪತ್ರೆಗೆ ತಲುಪುವ ಮೊದಲೇ ಈ ಮೂವರೂ ಪ್ರಾಣ ಬಿಟ್ಟಿದ್ದರು.
‘ಉಗ್ರರು ಬಳಸಿದ್ದ ಕಾರು ಅಚಬಲ್‌ನಲ್ಲಿ ಶುಕ್ರವಾರ ಪತ್ತೆಯಾಗಿದೆ. ನಿಸಾರ್ ಖಾಂಡೆ ಹಾಗೂ ಅಬ್ಬಾಸ್ ಎಂಬುವರು ದಾಳಿ ನಡೆಸಿದ್ದರು ಎಂಬ ಮಾಹಿತಿ ಲಭಿಸಿದೆ. ಇವರಿಬ್ಬರು ಹಿಂದೆ ಹಿಜ್ಬುಲ್ ಮುಜಾಹಿದೀನ್ ಸಂಘಟನೆಯಲ್ಲಿದ್ದರು. ಇತ್ತೀಚೆಗೆ ಲಷ್ಕರ್ ಸಂಘಟನೆಯನ್ನು ಸೇರಿಕೊಂಡಿದ್ದಾರೆ. ಇನ್ನೊಬ್ಬ ವಿದೇಶಿ ಉಗ್ರನೂ ಕೃತ್ಯದಲ್ಲಿ ಪಾಲ್ಗೊಂಡಿರುವ ಸಾಧ್ಯತೆ ಇದೆ. ದಕ್ಷಿಣ ಕಾಶ್ಮೀರದ ಕೆಲವು ಪ್ರದೇಶಗಳಲ್ಲಿ ಭದ್ರತಾ ಸಿಬ್ಬಂದಿ ಶೋಧ ಕಾರ್ಯಾಚರಣೆ ಆರಂಭಿಸಿದ್ದಾರೆ. ಶೀಘ್ರದಲ್ಲೇ ಈ ಉಗ್ರರು ಹತರಾಗಲಿದ್ದಾರೆ’ ಎಂದು ಐಜಿಪಿ ಹೇಳಿದ್ದಾರೆ.
ವ್ಯವಸ್ಥಿತ ದಾಳಿ: ಬಿಜೆಪಿ ಕಾರ್ಯಕರ್ತರ ಮೇಲೆ ನಡೆದಿರುವುದು ಯೋಜಿತ ದಾಳಿಯಂತೆ ಕಂಡುಬರುತ್ತಿದೆ. ಪಾಕಿಸ್ತಾನ ಪ್ರಾಯೋಜಿತ ಭಯೋತ್ಪಾದನೆಯ ಭಾಗವಾಗಿ ಇದನ್ನು ನಡೆಸಲಾಗಿದೆ. ಪಾಕಿಸ್ತಾನದಿಂದ ನಡೆಸಲಾಗುತ್ತಿರುವ ಆನ್‌ಲೈನ್ ಮಾಧ್ಯಮ ‘ಕಾಶ್ಮೀರ್ ಫೈಟ್’ ಮೂಲಕ ಇಲ್ಲಿನ ಪತ್ರಕರ್ತರೂ ಸೇರಿದಂತೆ ಹಲವರಿಗೆ ಬೆದರಿಕೆಗಳನ್ನು ಒಡ್ಡಲಾಗುತ್ತಿದೆ ಎಂದು ಐಜಿಪಿ ಹೇಳಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.