ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತ್ರಿವರ್ಣಧ್ವಜ ಹಿಡಿದ ಪ್ರತಿಭಟನಕಾರನ ಥಳಿಸಿದ ಹೆಚ್ಚುವರಿ ಜಿಲ್ಲಾಧಿಕಾರಿ

Last Updated 22 ಆಗಸ್ಟ್ 2022, 14:10 IST
ಅಕ್ಷರ ಗಾತ್ರ

ಪಟ್ನಾ: ಕೈಯಲ್ಲಿ ತ್ರಿವರ್ಣಧ್ವಜ ಹಿಡಿದು ಉದ್ಯೋಗ ನೀಡಿ ಎಂದು ಪ್ರತಿಭಟನೆ ನಡೆಸುತ್ತಿದ್ದ ಯುವಕನ ಜುಟ್ಟು ಹಿಡಿದ ಹೆಚ್ಚುವರಿ ಜಿಲ್ಲಾಧಿಕಾರಿಯು ರಸ್ತೆಯಲ್ಲಿ ಎಳೆದುಕೊಂಡು ಹೋಗಿ ಲಾಠಿಯಲ್ಲಿ ಚೆನ್ನಾಗಿ ಥಳಿಸಿದ ವಿಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಅಧಿಕಾರಿಯ ಈ ಕ್ರಮವು ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಉದ್ಯೋಗ ನೀಡುವಂತೆ ಮನವಿ ಸಲ್ಲಿಸಲು ಶಿಕ್ಷಕರ ಅರ್ಹತಾ ಪರೀಕ್ಷೆಯಲ್ಲಿ ಅರ್ಹತೆ ಪಡೆದ ಸಾವಿರಾರು ಯುವಕರು ರಾಜಭವನಕ್ಕೆ ಹೊರಟಿದ್ದರು.

ಬಿಹಾರದಲ್ಲಿ ಆಡಳಿತಾರೂಢ ಮೈತ್ರಿಕೂಟದ ಭಾಗವಾಗಿರುವ ಕಾಂಗ್ರೆಸ್‌, ಘಟನೆಯನ್ನು ತೀವ್ರವಾಗಿ ಖಂಡಿಸಿ ಹೇಳಿಕೆ ಬಿಡುಗಡೆ ಮಾಡಿದೆ. ‘ಯುವಕನು ಕಲ್ಲು ತೂರಾಟದಲ್ಲೋ ಅಥವಾ ಇನ್ಯಾವುದೋ ದೈಹಿಕ ಹಿಂಸೆಯಲ್ಲಿ ಭಾಗವಹಿಸಿದ್ದರೆ ಈ ರೀತಿ ಮಾಡುವುದನ್ನು ಸಹಿಸಿಕೊಳ್ಳಬಹುದಿತ್ತು. ತ್ರಿವರ್ಣಧ್ವಜ ಹಿಡಿದ ಯುವಕನನ್ನು ಹೊಡೆದಿರುವುದನ್ನು ಒಪ್ಪುವುದಕ್ಕೆ ಸಾಧ್ಯವಿಲ್ಲ. ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಕೆ. ಸಿಂಗ್‌ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಪಕ್ಷದ ವಕ್ತಾರ ಅಸಿತ್‌ನಾಥ ತಿವಾರಿ ಹೇಳಿದ್ದಾರೆ.

ಬಿಹಾರದ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್‌ ಅವರ ಕಚೇರಿಯು ಘಟನೆ ಬಗ್ಗೆ ಟ್ವೀಟ್‌ ಮಾಡಿದ್ದು, ‘ಜಿಲ್ಲಾಧಿಕಾರಿಯೊಂದಿಗೆ ತೇಜಸ್ವಿ ಅವರು ಮಾತನಾಡಿದ್ದಾರೆ. ಹೆಚ್ಚುವರಿ ಜಿಲ್ಲಾಧಿಕಾರಿಯು ಯಾಕಾಗಿ ಸ್ವತಃ ಲಾಠಿ ಪ್ರಹಾರ ನಡೆಸಿದರು ಎನ್ನುವುದರ ಕುರಿತು ತನಿಖೆ ನಡೆಸಲು ಉನ್ನತ ಸಮಿತಿಯನ್ನು ರಚಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ. ತಪ್ಪಿತಸ್ಥ ಅಧಿಕಾರಿಯ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ತೇಜಸ್ವಿ ತಿಳಿಸಿದ್ದಾರೆ’ ಎಂದಿದೆ.

ಮತ್ತೊಂದು ಪ್ರತಿಭಟನೆ: ವಿವಿಧ ಬೇಡಿಕೆ ಈಡೇರಿಸುವಂತೆ ಜನ್‌ ಅಧಿಕಾರ್‌ ಪಕ್ಷದ ನೂರಾರು ಕಾರ್ಯಕರ್ತರು ಕೂಡ ಸೋಮವಾರ ಮೆರವಣಿಗೆ ಹೊರಟಿದ್ದರು. ರಾಜಭವನವು ಇನ್ನೂ ಕೆಲವು ಕಿ.ಮೀ. ದೂರ ಇರುವಾಗಲೇ ಪೊಲೀಸರು ಲಾಠಿ ಪ್ರಹಾರ ನಡೆಸಿ, ಜಲ ಫಿರಂಗಿ ಪ್ರಯೋಗಿಸಿದರು.

ಲಾಠಿ ಪ್ರಹಾರ ಮತ್ತು ಜಲ ಫಿರಂಗಿ ಪ್ರಯೋಗಿಸಿರುವ ಕುರಿತು ಪ್ರತಿಕ್ರಿಯಿಸಿರುವ ಜಿಲ್ಲಾಧಿಕಾರಿ, ‘ಪ್ರತಿಭಟನಕಾರರ ಇಷ್ಟೊಂದು ದೊಡ್ಡ ಗುಂಪಿಗೆ ಡಾಕ್‌ ಬಂಗಲೆ ಕ್ರಾಸ್‌ ದಾಟಿ ಮುಂದಕ್ಕೆ ಹೋಗಲು ಅವಕಾಶ ನೀಡಲು ಸಾಧ್ಯವಿಲ್ಲ. ರಾಜಭವನಕ್ಕೆ ತೆರಳಿ ಮನವಿ ಸಲ್ಲಿಸಲು ಐವರು ಸದಸ್ಯರ ನಿಯೋಗವನ್ನು ಕಳುಹಿಸುವಂತೆ ಪ್ರತಿಭಟನಕಾರರಲ್ಲಿ ಮನವಿ ಮಾಡಲಾಯಿತು. ಇದನ್ನು ಅವರು ತಿರಸ್ಕರಿಸಿದರು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT