ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂಸೆವಾಲ ಕೊಂದವರು ನಮ್ಮವರೇ: ಜೈಲಿನಲ್ಲಿರುವ ಗ್ಯಾಂಗ್‌ಸ್ಟರ್‌ ಬಿಷ್ಣೋಯ್ ಮಾಹಿತಿ

Last Updated 3 ಜೂನ್ 2022, 10:23 IST
ಅಕ್ಷರ ಗಾತ್ರ

ನವದೆಹಲಿ: ಸಿಧು ಮೂಸೆವಾಲಾ ಎಂದು ಕರೆಯಲಾಗುತ್ತಿದ್ದ ಖ್ಯಾತ ಪಂಜಾಬಿ ಗಾಯಕ, ಕಾಂಗ್ರೆಸ್‌ ಮುಖಂಡ ಶುಭ್‌ದೀಪ್‌ ಸಿಂಗ್ ಸಿಧು ಹತ್ಯೆಯನ್ನು ತನ್ನ ತಂಡದವರೇ ಮಾಡಿದ್ದಾರೆ ಎಂದು ಗ್ಯಾಂಗ್‌ಸ್ಟರ್‌ ಲಾರೆನ್ಸ್ ಬಿಷ್ಣೋಯ್ ಒಪ್ಪಿಕೊಂಡಿದ್ದಾನೆ ಎಂದು ಮೂಲಗಳು ಶುಕ್ರವಾರ ಹೇಳಿವೆ.

28 ವರ್ಷದ ಮೂಸೆವಾಲಾ ಅವರನ್ನು ಮೇ 29 ರಂದು ಕಾರಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಗುಂಡಿಕ್ಕಿ ಕೊಲ್ಲಲಾಗಿತ್ತು. ಡಜನ್‌ಗೂ ಹೆಚ್ಚು ಮಂದಿ ಅವರ ಮೇಲೆ ದಾಳಿ ಮಾಡಿ, 30 ಕ್ಕೂ ಹೆಚ್ಚು ಗುಂಡುಗಳನ್ನು ಹಾರಿಸಿದ್ದರು. ತೀವ್ರವಾಗಿ ಗಾಯಗೊಂಡಿದ್ದ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತಾದರೂ, ಅಷ್ಟೊತ್ತಿಗಾಗಲೇ ಅವರು ಮೃತಪಟ್ಟಿದ್ದರು. ಮೂಸೆವಾಲ ದೇಹಕ್ಕೆ 19 ಗುಂಡುಗಳು ಹೊಕ್ಕಿದ್ದಾಗಿ ಮರಣೋತ್ತರ ಪರೀಕ್ಷೆಯಿಂದ ಗೊತ್ತಾಗಿತ್ತು.

‘ಮೂಸೆವಾಲಾ ಕೊಲೆಗೆ ತನ್ನ ಗ್ಯಾಂಗ್‌ನವರೇ ಹೊಣೆ ಎಂದು ಆತ ತಪ್ಪೊಪ್ಪಿಕೊಂಡಿದ್ದಾನೆ. ಆದರೆ, ತಾನು ಜೈಲಿನಲ್ಲಿ ಇರುವುದರಿಂದ ನೇರವಾಗಿ ಕೃತ್ಯದಲ್ಲಿ ಭಾಗಿಯಾಗಿಲ್ಲ ಎಂದು ಆತ ವಾದಿಸಿದ್ದಾನೆ’ ಎಂದು ಅಧಿಕಾರಿಗಳು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

ಮಹಾರಾಷ್ಟ್ರ ಸಂಘಟಿತ ಅಪರಾಧಗಳ ನಿಯಂತ್ರಣ ಕಾಯ್ದೆ ಅಡಿಯಲ್ಲಿ ದಾಖಲಾಗಿರುವ ಪ್ರಕರಣಗಳಲ್ಲಿ ಬಿಷ್ಣೋಯ್‌ ಸದ್ಯ ತಿಹಾರ್ ಜೈಲಿನಲ್ಲಿದ್ದು, ದೆಹಲಿ, ಹರಿಯಾಣ, ರಾಜಸ್ಥಾನ ಮತ್ತು ಪಂಜಾಬ್‌ನಲ್ಲಿಯೂ ಆತನ ವಿರುದ್ಧ ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ. ಬಾಲಿವುಡ್ ನಟ ಸಲ್ಮಾನ್ ಖಾನ್ ಅವರನ್ನು ಕೊಲ್ಲುವುದಾಗಿ ಬಿಷ್ಣೋಯ್‌ ಹಿಂದೊಮ್ಮೆ ಬೆದರಿಕೆ ಹಾಕಿದ್ದ.

‘ದೆಹಲಿ ಪೊಲೀಸರ ವಿಶೇಷ ವಿಭಾಗ ಪ್ರಸ್ತುತ ಎಲ್ಲಾ ಕೋನಗಳಿಂದ ತನಿಖೆ ನಡೆಸುತ್ತಿದೆ. ಸಿಧು ಹತ್ಯೆ ವಿಷಯದಲ್ಲಿ ಬಿಷ್ಣೋಯ್ ಅವರನ್ನು ವಿಚಾರಣೆ ನಡೆಸುತ್ತಿದೆ. ಬಿಷ್ಣೋಯ್ ಪೊಲೀಸರಿಗೆ ಸಹಕರಿಸುತ್ತಿಲ್ಲ. ಅವರು ಘಟನೆಯ ಬಗ್ಗೆ ವಿವರಗಳನ್ನು ಬಹಿರಂಗಪಡಿಸುತ್ತಿಲ್ಲ. ಆದರೆ, ಕೊಲೆ ಹಿಂದೆ ತನ್ನ ಗ್ಯಾಂಗ್‌ನವರು ಇದ್ದಾರೆ ಎಂದು ಒಪ್ಪಿಕೊಂಡಿದ್ದಾನೆ’ ಎಂದು ಮೂಲಗಳು ಹೇಳಿವೆ.

ಈ ಮಧ್ಯೆ, ಲಾರೆನ್ಸ್ ಬಿಷ್ಣೋಯ್ ಅವರ ಸೋದರಳಿಯ ಸಚಿನ್ ಬಿಷ್ಣೋಯ್ ಎಂಬಾತ ಸುದ್ದಿ ವಾಹಿನಿಯೊಂದಿಗೆ ಮಾತನಾಡುತ್ತಾ ಮೂಸೆವಾಲಾ ಹತ್ಯೆಯ ಹೊಣೆಯನ್ನು ಹೊತ್ತುಕೊಂಡಿದ್ದಾನೆ. ಕಳೆದ ವರ್ಷ ಆಗಸ್ಟ್‌ನಲ್ಲಿ ಅಕಾಲಿ ದಳದ ಯುವ ನಾಯಕ ವಿಕ್ಕಿ ಮಿದ್ದುಖೇರಾ ಅವರನ್ನು ಕೊಂದಿದ್ದಕ್ಕೆ ಪ್ರತೀಕಾರವಾಗಿ ಮೂಸೆವಾಲಾ ಅವರನ್ನು ಹತ್ಯೆ ಮಾಡಲಾಗಿದೆ ಎಂದು ಸಚಿನ್ ಹೇಳಿದ್ದಾನೆ. ವಿಕ್ಕಿ ಮಿದ್ದುಖೇರಾ ಅವರು ಲಾರೆನ್ಸ್ ಬಿಷ್ಣೋಯ್ ಅವರ ಆತ್ಮೀಯ ಸ್ನೇಹಿತನಾಗಿದ್ದ ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT