ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾಕ್‌ಡೌನ್‌ ಅವಧಿಯಲ್ಲಿ ವಕೀಲರ ಆಹಾರೋದ್ಯಮ!

Last Updated 7 ನವೆಂಬರ್ 2020, 11:44 IST
ಅಕ್ಷರ ಗಾತ್ರ

ನವದೆಹಲಿ: ಸದಾ ನ್ಯಾಯಾಲಯದ ಕೊಠಡಿಯಲ್ಲೇ ಇರುತ್ತಿದ್ದ ಯುವ ವಕೀಲರು ಲಾಕ್‌ಡೌನ್‌ ಅವಧಿಯಲ್ಲಿ ಸಿಗುತ್ತಿದ್ದ ಸಮಯವನ್ನು ವ್ಯರ್ಥ ಮಾಡದೆ ನವೋದ್ಯಮ, ಉದ್ಯೋಗ ಕೌಶಲ್ಯ ಅಭಿವೃದ್ಧಿ ಹಾಗೂ ಹೊಸ ಹವ್ಯಾಸಗಳ ಮುಖಾಂತರ ಸದ್ಬಳಕೆ ಮಾಡಿಕೊಂಡಿದ್ದಾರೆ.

ಲಾಕ್‌ಡೌನ್‌ ಕಾರಣದಿಂದಾಗಿ ಕಳೆದ ಮಾರ್ಚ್‌ನಿಂದ ಪ್ರಮುಖ ಪ್ರಕರಣಗಳ ವಿಚಾರಣೆಯನ್ನಷ್ಟೇ ನ್ಯಾಯಾಲಯಗಳು ಕೈಗೆತ್ತಿಕೊಳ್ಳುತ್ತಿವೆ. ವಿಚಾರಣೆಗಳೂ ಆನ್‌ಲೈನ್‌ ಮೂಲಕವೇ ನಡೆಯುತ್ತಿರುವ ಕಾರಣ ಮನೆಯಲ್ಲೇ ಇರುವ ಹಲವು ಯುವ ವಕೀಲರು ತಮ್ಮ ವೃತ್ತಿಯ ಜೊತೆ ಇತರೆ ಹವ್ಯಾಸ, ಹೊಸ ಆಲೋಚನೆಗಳನ್ನು ಪೋಷಿಸಿದ್ದಾರೆ.

‘ಪಿಡುಗಿನ ಕಾರಣ ಪ್ರಕರಣಗಳ ಸಂಖ್ಯೆಯೂ ಕಡಿಮೆಯಾಗಿತ್ತು. ಹೀಗಾಗಿ ಮನೆಯಲ್ಲಿ ಹೆಚ್ಚಿನ ಸಮಯಾವಕಾಶ ದೊರೆಯುತ್ತಿತ್ತು. ಈ ಸಂದರ್ಭದಲ್ಲಿ ‘ಸೂಪರ್‌ಫೂಡ್ಸ್‌’ ಉದ್ಯಮ ಆರಂಭಿಸುವ ಯೋಚನೆ ನನಗೆ ಬಂತು’ ಎನ್ನುತ್ತಾರೆ ‘ಬ್ಯಾಗ್‌ ಆಫ್‌ ಹರ್ಬ್ಸ್‌’ ನವೋದ್ಯಮದ ಸ್ಥಾಪಕ, ವಕೀಲ ಅಂಕಿತ್‌ ಮಲ್ಹೋತ್ರ.

‘ಲಾಕ್‌ಡೌನ್‌ ಅವಧಿಯಲ್ಲಿ ಮೊದಲಿಗೆ ಮನೆಯಲ್ಲೇ ತಂದೆ ತಾಯಿಯ ಕೆಲಸಕ್ಕೆ ಸಹಾಯ ಮಾಡುತ್ತಿದ್ದೆ. ಈ ಸಂದರ್ಭದಲ್ಲಿ ಗಿಡಮೂಲಿಕೆ ಹಾಗೂ ಸಂಬಾರ ಪದಾರ್ಥಗಳ ಮಾರಾಟಗಾರರ ಪರಿಚಯವಾಯಿತು. ಹೆಚ್ಚಿನ ಪೌಷ್ಟಿಕಾಂಶ ಇರುವ ಹಾಗೂ ಉತ್ತಮ ಆರೋಗ್ಯಕ್ಕೆ ಸಹಕಾರಿಯಾಗುವ ಪದಾರ್ಥಗಳನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ಈ ನವೋದ್ಯಮ ಪ್ರಾರಂಭಿಸಿದೆ. ನಮ್ಮ ವೆಬ್‌ಸೈಟ್‌ನಲ್ಲಿ ಹಲವು ಆರೋಗ್ಯಕರ ಖಾದ್ಯಗಳನ್ನು ತಯಾರಿಸುವ ಮಾಹಿತಿಯೂ ಇದೆ. ಗ್ರೋಫರ್ಸ್‌, ಫ್ಲಿಪ್‌ಕಾರ್ಟ್‌, ಅಮೆಜಾನ್‌ ಮುಖಾಂತರ ನನ್ನ ಉದ್ಯಮವನ್ನು ವಿಸ್ತರಿಸುತ್ತಿದ್ದೇನೆ’ ಎಂದು ಮಲ್ಹೋತ್ರ ತಿಳಿಸಿದರು.

ಮನೆ ಅಡುಗೆಯ ರುಚಿ: ಗುರುಗ್ರಾಮದಲ್ಲಿ ವಾಸಿಸುತ್ತಿರುವ ವಕೀಲರಾದ ಮಹಿಮಾ ಅಹ್ಲುವಾಲಿಯಾ ಸಿನ್ಹಾ ಹಾಗೂ ಯಶಿತಾ ದಾಲ್ಮಿಯಾ ಅವರು ಲಾಕ್‌ಡೌನ್‌ ಅವಧಿಯಲ್ಲಿ ‘ಹೋಂ ಕಿಚನ್‌’ ಪ್ರಾರಂಭಿಸಿದ್ದಾರೆ. 12 ವರ್ಷಗಳಿಂದ ವಕೀಲ ವೃತ್ತಿಯಲ್ಲಿರುವ ಸಿನ್ಹಾ, ‘ಅಸ್ಸಿ ತುಸ್ಸಿ ಭಾಲೊ ಆಚಿ’ ಹೆಸರಿನ ಹೋಂ ಕಿಚನ್‌ ಆರಂಭಿಸಿದ್ದು, ಪಶ್ಚಿಮ ಬಂಗಾಳ ಹಾಗೂ ಪಂಜಾಬ್‌ನ ಖಾದ್ಯಗಳನ್ನು ಅವರು ತಯಾರಿಸುತ್ತಿದ್ದಾರೆ. ‘ನಾನು ವಕೀಲ ವೃತ್ತಿಯನ್ನು ಬಿಟ್ಟಿಲ್ಲ, ಬಿಡುವ ಉದ್ದೇಶವೂ ಇಲ್ಲ. ಲಾಕ್‌ಡೌನ್‌ ಅವಧಿಯಲ್ಲಿ ಅತ್ತೆ ಜೊತೆ ಸೇರಿಕೊಂಡು ಇದನ್ನು ಆರಂಭಿಸಿದೆ. ವಾಟ್ಸ್‌ಆ್ಯಪ್‌ ಹಾಗೂ ಫೇಸ್‌ಬುಕ್‌ ಪೇಜ್‌ ಮುಖಾಂತರ ಜನರಿಗೆ ಯಾವ ಖಾದ್ಯ ಬೇಕು ಎನ್ನುವುದರ ಮಾಹಿತಿ ಪಡೆದು ಅದನ್ನು ಕಳುಹಿಸಿಕೊಡುತ್ತೇವೆ. ಕ್ರಮೇಣವಾಗಿ ಆಹಾರ ಖಾದ್ಯಗಳ ಸಂಖ್ಯೆಯನ್ನೂ ಹೆಚ್ಚಿಸುತ್ತಿದ್ದೇವೆ’ ಎಂದರು.

ಇದೇ ರೀತಿ, ದೆಹಲಿಯಲ್ಲಿರುವ ದಾಲ್ಮಿಯಾ ಅವರು ‘ಯಶಿತಾಸ್‌ ಕಿಚನ್‌’ ಆರಂಭಿಸಿದ್ದು, ಸಾಮಾಜಿಕ ಜಾಲತಾಣಗಳ ಮುಖಾಂತರ ಖಾದ್ಯಗಳ ಆರ್ಡರ್‌ ಪಡೆಯುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT